ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಕಾಲ್ನಡಿಗೆಯಲ್ಲಿ ಹೊರಟಿದ್ದ ಕಾರ್ಮಿಕರಿಗೆ ತಡೆ

Last Updated 11 ಮೇ 2020, 15:31 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸಮೀಪದ ಜಂಬೂರು ಗ್ರಾಮದಿಂದ ಮೈಸೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ 25 ಕಾರ್ಮಿಕರನ್ನು ಅಧಿಕಾರಿಗಳು ತಡೆದು ಏಳನೇ ಹೊಸಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇರಿಸಿದ್ದಾರೆ.

ನಿರಾಶ್ರಿತರಿಗಾಗಿ ಜಂಬೂರು ಗ್ರಾಮದಲ್ಲಿ ನಿರ್ಮಿಸುತ್ತಿರುವ ವಸತಿ ನಿಲಯಗಳ ಕಾಮಗಾರಿಗೆಂದು ಲಾಕ್‌ಡೌನ್‌ಗೂ ಮೊದಲು ಉತ್ತರ ಪ್ರದೇಶದ ಗೋರಖ್‌ಪುರದಿಂದ ಬಂದಿದ್ದ ಯುವಕರು ಸೋಮವಾರ ಬೆಳಿಗ್ಗೆ ಸುಂಟಿಕೊಪ್ಪದ ಮೂಲಕ ನಡೆದುಕೊಂಡು ಹೋಗುತ್ತಿದ್ದರು. ಅವರನ್ನು ಏಳನೇ ಹೊಸಕೋಟೆಯ ಬಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಸ್ತಾಫ ಮತ್ತಿತರರು ತಡೆದು ವಿಚಾರಿಸಿದಾಗ ತಮ್ಮ ರಾಜ್ಯಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಮಾದಾಪುರ ಗ್ರಾಮ ಪಂಚಾಯಿತಿಗೆ ತೆರಳಿ ಪಾಸನ್ನು ಒದಗಿಸುವಂತೆ ತಮ್ಮ ದಾಖಲಾತಿಗಳನ್ನು ನೀಡಿದ್ದರೂ ಸ್ಪಂದಿಸಲಿಲ್ಲ. ಆದ್ದರಿಂದ ನಾವೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು ಪ್ರತ್ಯುತ್ತರವನ್ನೂ ನೀಡಿದ್ದಾರೆ. ಆದ್ದರಿಂದ ಮೈಸೂರಿಗೆ ನಡೆದುಕೊಂಡು ಹೋಗಿ ಅಲ್ಲಿಂದ ರೈಲಿನ ಮೂಲಕ ನಮ್ಮ ಊರಿಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಕೂಡಲೇ ಅವರನ್ನು ತಡೆದು ಸರ್ಕಾರಿ ಹಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಪಾಹಾರ ವ್ಯವಸ್ಥೆ ಕಲ್ಪಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪಟ್ಟುಬಿಡದ ಕಾರ್ಮಿಕ ಯುವಕರು: ವಿಷಯ ತಿಳಿದು ಸ್ಥಳಕ್ಕೆ ಬಂದ ಸೋಮವಾರಪೇಟೆ ತಹಶೀಲ್ಧಾರ್ ಗೋವಿಂದರಾಜು, ಸುಂಟಿಕೊಪ್ಪ ಕಂದಾಯ ಪರಿವೀಕ್ಷಕ ಎಚ್.ಕೆ.ಶಿವಪ್ಪ, ಏಳನೇ ಹೊಸಕೋಟೆ ಪಿಡಿಒ ರವೀಶ್ ಕಾರ್ಮಿಕರನ್ನು ಮನವೊಲಿಸಲು ಪ್ರಯತ್ನಿಸಿದಾದರು.

’ನಾವು ಸೇವಾಸಿಂಧು ಮೂಲಕ ತಾಯ್ನಾಡಿಗೆ ತೆರಳಲು ಅರ್ಜಿ ಸಲ್ಲಿಸಿದ್ದು,ನಮಗೆ ಸಂದೇಶ ಬಂದಿದೆ. ಅದರಂತೆ ಮೈಸೂರಿನಿಂದ ರೈಲಿನ ಮೂಲಕ ತೆರಳುವುದಾಗಿ ತಿಳಿಸಿದರು.

ಆದರೆ, ಉತ್ತರಪ್ರದೇಶ ಸರ್ಕಾರ ಅನುಮತಿ ಪತ್ರವನ್ನು ನೀಡದೇ ತೆರಳಲು ಸಾಧ್ಯವಿಲ್ಲ. ಆದ್ದರಿಂದ ನೀವಿದ್ದಲ್ಲಿಗೇ ಹಿಂದಿರುಗಿ ಎಂದು ತಿಳಿಸಿದರೂ ಒಪ್ಪದೆ ನಮಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಹಠ ಹಿಡಿದರು.

ಪರಿಸ್ಥಿತಿ ಗಂಭೀರ ಸ್ಥಿತಿಗೆ ತೆರಳಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಡಿವೈಎಸ್ಪಿ ಶೈಲೇಂದ್ರ, ಸಿಪಿಐ ಮಹೇಶ್ ಅವರು ಭೇಟಿ ನೀಡಿ ಜಂಬೂರು ಗ್ರಾಮಕ್ಕೆ ವಾಪಾಸಾಗದಿದ್ದರೆ ನಿಮ್ಮನ್ನು ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರೂ ಜಗ್ಗದ ಯುವಕರು ನಮ್ಮನ್ನು ಬಂಧಿಸಿ, ಕ್ವಾರಂಟೈನ್‌ನಲ್ಲಿ ಬೇಕಾದರೂ ಇಡಿ. ಆದರೆ ವಾಪಾಸು ಆ ಸ್ಥಳಕ್ಕೆ ಹಿಂತಿರುಗುವುದಿಲ್ಲ. ಅಲ್ಲಿ ಯಾವುದೇ ವ್ಯವಸ್ಥೆ ಇಲ್ಲ ಎಂದು ಪಟ್ಟುಹಿಡಿದರು.

ಸಂಜೆಯ ವೇಳೆಗೆ ಅಧಿಕಾರಿಗಳ ಒತ್ತಡಕ್ಕೆ ಮಣಿದ ಕಾರ್ಮಿಕರು ಏಳನೇ ಹೊಸಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳಿಯುವ ನಿರ್ಧಾರಕ್ಕೂ ಬಂದರು. ಅದರಂತೆ ಶಾಲೆಯಲ್ಲಿ 2 ಕೋಣೆಯನ್ನು ಬಿಟ್ಟುಕೊಡಲಾಗಿದ್ದು, ರಕ್ಷಣೆಗೆ ಇಬ್ಬರೂ ಪೊಲೀಸರನ್ನು ನಿಯೋಜಿಸಲಾಗಿದೆ. ಅವರ ದಿನನಿತ್ಯದ ಊಟೋಪಾಚಾರ ವ್ಯವಸ್ಥೆಯನ್ನು ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು, ಎಂಜಿನಿಯರ್ ನೋಡಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದರು.

ಸುಂಟಿಕೊಪ್ಪ ಪಿಎಸ್‌ಐ ತಿಮ್ಮಪ್ಪ, ಎಎಸ್‌ಐ ಕಾವೇರಪ್ಪ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT