ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಭಕ್ತ ಕುಟುಂಬ ಕಣ್ಮರೆ: ನೂರುನ್ನೀಸಾ

ಮಡಿಕೇರಿಯಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ
Last Updated 22 ಏಪ್ರಿಲ್ 2019, 13:19 IST
ಅಕ್ಷರ ಗಾತ್ರ

ಮಡಿಕೇರಿ: ‘ಮಕ್ಕಳು ಟಿ.ವಿ ಹಾಗೂ ಮೊಬೈಲ್‌ನಲ್ಲೇ ಮುಳುಗಿ ಯಾಂತ್ರಿಕವಾದ ಬದುಕು ನಡೆಸುತ್ತಿದ್ದಾರೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ 9ರಿಂದ 16 ವರ್ಷದ ಮಕ್ಕಳಿಗೆ ನಗರದ ಸ್ತ್ರೀಶಕ್ತಿ ಭವನದಲ್ಲಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಈಗಿನ ಕಾಲದಲ್ಲಿ ಮಕ್ಕಳು ಅಜ್ಜಿ–ಅಜ್ಜನ ಮನೆಗೆ ಹೋಗುವ ಪರಿಪಾಠ ತುಂಬ ವಿರಳವಾಗಿದೆ. ಮಕ್ಕಳು ಅಪ್ಪ, ಅಮ್ಮನ ಜೊತೆಯೇ ಬೆಳೆಯುತ್ತಾರೆ. ಅಪ್ಪ, ಅಮ್ಮ ಮತ್ತು ಮಕ್ಕಳು ಇವಿಷ್ಟೇ ಕುಟುಂಬವಾಗಿ ಬಿಟ್ಟಿದೆ’ ಎಂದು ವಿಷಾದಿಸಿದರು.

‘ಮಕ್ಕಳನ್ನು ಬೇರೆ ಕಡೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ. ಮನೆಯಲ್ಲಿದ್ದರೂ ಮಕ್ಕಳಿಗೆ ಉತ್ತಮ ವಾತಾವರಣ ಇರುವುದಿಲ್ಲ. ಯಾಂತ್ರಿಕ ಬದುಕಾಗಿದೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿವೆ. ಅದಕ್ಕಾಗಿ ಪೋಷಕರು ಇಂತಹ ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಪೋಷಕರು, ಮಕ್ಕಳಿಗೆ ಮಣ್ಣು ಮುಟ್ಟಬಾರದು, ಮಣ್ಣಿನಲ್ಲಿ ಆಟ ಆಡಬಾರದೆಂದು ಎಚ್ಚರಿಸುತ್ತಾರೆ. ಆದರೆ, ಮಣ್ಣಿನಲ್ಲಿ ಅನೇಕ ವಿಧದ ಪೋಷಕಾಂಶಗಳಿವೆ. ಅದು ಆರೋಗ್ಯಕ್ಕೂ ಅನುಕೂಲ’ ಎಂದು ತಿಳಿಸಿದರು.

‘ಬೇಸಿಗೆ ಶಿಬಿರದಲ್ಲಿ ಯಕ್ಷಗಾನ ಕಲೆ ಕಲಿಸುವುದು ಒಳ್ಳೆಯ ಉದ್ದೇಶ. ಈ ಕಲೆಯನ್ನು ಮಕ್ಕಳೆಲ್ಲರೂ ಕಲಿತುಕೊಳ್ಳಿ’ ಎಂದು ಕರೆ ನೀಡಿದರು.

ಶಿಬಿರವು 15 ದಿನಗಳ ಕಾಲ ನಡೆಯಲಿದ್ದು, ಎಲ್ಲರೂ ಬೆರೆತು–ಅರಿತು ವಿಚಾರ ತಿಳಿದುಕೊಳ್ಳಿ. ಶಿಬಿರದಲ್ಲಿ ಬೇರೆ ಬೇರೆ ಗುಣಗಳನ್ನು ಹೊಂದಿದ ಮಕ್ಕಳಿದ್ದು, ಒಳ್ಳೆಯ ಗುಣಗಳನ್ನು ವಿನಿಮಯ ಮಾಡಿಕೊಂಡರೆ ಅನುಕೂಲ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ‘15 ದಿನಗಳ ಬೇಸಿಗೆ ಶಿಬಿರದಲ್ಲಿ ಮಧ್ಯಾಹ್ನದವರೆಗೆ ಯೋಗ, ಸಮೂಹ ನೃತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಕರಕುಶಲ, ಜೇಡಿ ಮಣ್ಣಿನ ಕಲೆ, ಕಸದಿಂದ ರಸ, ಜ್ಯುವೆಲರಿ ಮೇಕಿಂಗ್ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ರಾಮಚಂದ್ರ, ಆರ್ಯುವೇದ ವೈದ್ಯ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು.

‘ನೀನಾಸಂ’ ತಂಡದ ಸುನಿಲ್‌ ಹಾಗೂ ಚೇತನ್ ಅವರು 15 ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಕಲಿಸಿಕೊಡಲಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಅರುಂಧತಿ ಟಿ.ಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಸತ್ಯಭಾಮಾ, ಜಯಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT