ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಹಾಕೊ ಕಾಫಿ ಸಹಕಾರ ಸಂಗಮ ಆಂದೋಲನ

Last Updated 10 ಮಾರ್ಚ್ 2023, 6:12 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕಾಫಿಗೆ ಸಹಕಾರಿ ಮಾರುಕಟ್ಟೆ ವ್ಯವಸ್ಥೆ ರೂಪಿಸಲು ‘ಚಿಹಾಕೊ ಕಾಫಿ ಸಹಕಾರ ಸಂಗಮ’ ಎಂಬ ಆಂದೋಲನವನ್ನು ಸಂಘಟಿಸಲಾಗುವುದು ಎಂದು ಚಳವಳಿಯ ಸಂಸ್ಥಾಪಕ ಎಸಳೂರು ಉದಯಕುಮಾರ್ ತಿಳಿಸಿದ್ದಾರೆ.

ಕಾಫಿಗೆ ಮುಕ್ತ ಮಾರುಕಟ್ಟೆ ಸೌಲಭ್ಯ ಲಭ್ಯವಾಗಿ 3 ದಶಕಗಳೇ ಕಳೆದರೂ, ಇನ್ನೂ ರೈತರದೇ ಆದ ಸ್ವಾಯತ್ತ ಸಹಕಾರಿ ಮಾರುಕಟ್ಟೆ ಇಲ್ಲ. ಈ ನಿಟ್ಟಿನಲ್ಲಿ ಸಹಕಾರಿ ವ್ಯವಸ್ಥೆಯನ್ನು ಸ್ಥಾಪಿಸಬೇಕಿದೆ ಎಂದು ಅವರು ಹೇಳಿದ್ದಾರೆ.

80ರ ದಶಕದಲ್ಲಿ ಮುಕ್ತ ಮಾರುಕಟ್ಟೆಗಾಗಿ ಬೆಳೆಗಾರರು ಸಂಘಟಿತರಾಗಿ ಹೋರಾಟ ಮಾಡಿದ್ದರು. ಇಚ್ಛಾಶಕ್ತಿಯ ಕೊರತೆಯಿಂದಾಗಿ ಹೋರಾಟ ಸಮರ್ಪಕವಾದ ಫಲ ನೀಡಲಿಲ್ಲ. ಈಗ ಕಾಫಿ ಮಂಡಳಿ ಇದ್ದೂ ಇಲ್ಲದಂತಾಗಿದೆ. ‘ಕೋಮಾರ್ಕ್’ ಎಂಬ ಅಂತರರಾಜ್ಯ ಸಹಕಾರಿ ಸಂಸ್ಥೆ ಹಾಗೂ ‘ಎಬಿಸಿ’ ಸಮಸ್ಯೆ ಸುಳಿಯಲ್ಲಿ ಸಿಲುಕಿವೆ. ಹೀಗಾಗಿ, ದಲ್ಲಾಳಿಗಳ ಹಿಡಿತಕ್ಕೆ ಸಿಲುಕಿ ಕಾಫಿ ಬೆಳೆಗಾರರು ನಲುಗಿದ್ದಾರೆ. ಇದಕ್ಕೆ ಸಹಕಾರಿ ಮಾರುಕಟ್ಟೆಯನ್ನು ಬಲಪಡಿಸುವುದೇ ಪರಿಹಾರ ಎಂದು ಅವರು ಪ್ರತಿಪಾದಿಸಿದ್ದಾರೆ.

ಮೂರೂ ಜಿಲ್ಲೆಗಳಲ್ಲಿ ಸಂಘಟನೆ ಕಟ್ಟುವ ಕಾರ್ಯ ನಡೆದಿದೆ. ಯುವಕರು ಸಹಕಾರಿ ಆಂದೋಲನದಲ್ಲಿ ಧುಮುಕಲು ಸಿದ್ಧರಿದ್ದಾರೆ. ಸಹಕಾರಿ ವ್ಯವಸ್ಥೆ ಸ್ಥಾಪಿಸಿಕೊಳ್ಳುವ ಆಸಕ್ತರು ಮೊ: 9945853543 ಸಂಪರ್ಕಿಸಬಹುದು ಎಂದು ಮನವಿ ಮಾಡಿದ್ದಾರೆ.

ಮೂರು ದಶಕಗಳ ಹಿಂದೆಯೇ ಕಾಫಿ ಚಳವಳಿಯನ್ನು ಬರಹಗಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮಾರ್ಗದರ್ಶನ ಮಾಡಿ ಮುನ್ನಡೆಸಿದ್ದರು. ಅವರ ಮೂಲ ಆಶಯವೇ ಕಾಫಿ ಬೆಳೆಗಾರರು, ಹೋಬಳಿ ಮಟ್ಟದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡು ತಮ್ಮ ಉತ್ಪನ್ನವನ್ನು ದೇಶೀಯವಾಗಿ ಮಾರಾಟ ಮಾಡಬೇಕು ಹಾಗೂ ಹೊರದೇಶಗಳಲ್ಲಿ ನೇರವಾಗಿ ರಫ್ತು ಮಾಡಿ ವಿದೇಶಿ ವಿನಿಮಯ ಗಳಿಸಿ ಮಾರುಕಟ್ಟೆ ಸ್ವಾಮ್ಯವನ್ನು ಹೊಂದಬೇಕು ಎಂದಾಗಿತ್ತು. ಅವರ ಕನಸು, ಚಿಂತನೆಯ ಫಲವಾಗಿ ‘ಚಿಹಾಕೊ ಕಾಫಿ’ ಸಹಕಾರ ಸಂಗಮ ಆರಂಭಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT