ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಣ: ಶಿಸ್ತು ಕ್ರಮಕ್ಕೆ ಶಿಫಾರಸು

ಸಾಮಾನ್ಯ ಸಭೆಯಲ್ಲಿ ನಗರಸಭೆ ಪೌರಾಯುಕ್ತೆ ಬಿ. ಶುಭಾ ಮಾಹಿತಿ
Last Updated 26 ಜುಲೈ 2018, 12:29 IST
ಅಕ್ಷರ ಗಾತ್ರ

ಮಡಿಕೇರಿ: ಮೂರು ವರ್ಷಗಳ ಹಿಂದೆ ಇಲ್ಲಿನ ನಗರಸಭೆಯಲ್ಲಿ ನಡೆದಿದ್ದ ತೆರಿಗೆ ಹಗರಣದಲ್ಲಿ ಇಬ್ಬರು ನೌಕರರ ವಿರುದ್ಧ ಶಿಸ್ತುಕ್ರಮಕ್ಕೆ ತನಿಖಾ ತಂಡವು ಶಿಫಾರಸು ಮಾಡಿದ್ದು, ಆ ಪ್ರತಿಯನ್ನು ಪೌರಾಡಳಿತ ಇಲಾಖೆ ನಿರ್ದೇಶಕರಿಗೆ ಕಳುಹಿಸಿಕೊಡಲಾಗಿದೆ ಎಂದು ಪೌರಾಯುಕ್ತೆ ಬಿ. ಶುಭಾ ಹೇಳಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಸದಸ್ಯ ಅಮಿನ್‌ ಮೊಹಿಸಿನ್‌ ಅವರ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿದರು.

‘ನಗರಸಭೆಯಲ್ಲಿ ಲಕ್ಷಾಂತರ ರೂಪಾಯಿ ಹಗರಣ ನಡೆದಿದ್ದರೂ ಕ್ರಮವಾಗಿಲ್ಲ. ತನಿಖೆ ಎಲ್ಲಿಗೆ ಬಂತು? ಯಾರೂ ಈ ಬಗ್ಗೆ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ’ ಎಂದು ಅಮಿನ್‌ ಸಭೆಯ ಗಮನಕ್ಕೆ ತಂದರು. ಅದಕ್ಕೆ ಶುಭಾ ಪ್ರತಿಕ್ರಿಯಿಸಿ, ‘₹ 54 ಲಕ್ಷ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಸಾಕ್ಷಿಗಳ ವಿಚಾರಣೆ ನಡೆಸಿ ಕ್ರಮಕ್ಕೆ ಶಿಫಾರಸು ಮಾಡಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಎ.ಸಿ ಅವರು ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದರು. ಜೂನ್‌ 23ರಂದು ಒಂದು ಪತ್ರ, ಅದೇ 29ರಂದು ಮತ್ತೊಂದು ಪತ್ರ ನಮ್ಮ ಕೈಸೇರಿದೆ. ಸುಜಿತ್‌ ಹಾಗೂ ಸ್ವಾಮಿ ಅವರ ವಿರುದ್ಧ ನಿರ್ದೇಶಕರು ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದು ಹೇಳಿದರು.

ದರ ಪರಿಷ್ಕರಣೆ: ಹೊಸದಾಗಿ ಮನೆ ನಿರ್ಮಾಣ ಮಾಡುವವರಿಗೆ ಪರವಾನಗಿಯಲ್ಲಿ ಸಾಕಷ್ಟು ಗೊಂದಲಗಳಿದ್ದು ಅದನ್ನು ಪರಿಹರಿಸಬೇಕು. ಮನೆ ನಿರ್ಮಾಣ ವಿಳಂಬವಾದರೆ ಪ್ರತಿವರ್ಷವೂ ತೆರಿಗೆ ಪಾವತಿಸಬೇಕು. ದರ ಪರಿಷ್ಕರಣೆ ಮಾಡಬೇಕು ಎಂದು ಸದಸ್ಯ ಪಿ.ಡಿ. ಪೊನ್ನಪ್ಪ ಒತ್ತಾಯಿಸಿದರು.

ಆರಂಭದಲ್ಲಿ ಮನೆ ನಿರ್ಮಾಣಕ್ಕೆ ಪೂರ್ಣ ತೆರಿಗೆ ಪಾವತಿಸಬೇಕು. ವಿಳಂಬವಾದರೆ 2ನೇ ವರ್ಷದಲ್ಲಿ ಶೇ 50ರಷ್ಟು, ಮೂರನೇ ವರ್ಷದಲ್ಲಿ ಶೇ 25ರಷ್ಟು ಪಾವತಿಸಲು ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ಬೈಲಾ ತಿದ್ದುಪಡಿಯಾದ ಬಳಿಕವಷ್ಟೇ ಹೊಸ ದರ ಜಾರಿಗೆ ಬರಲಿದೆ.

ಸಿಎಂ ಬಳಿಗೆ ನಿಯೋಗ: ನಗರಸಭೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಲೆಕ್ಕ ಪರಿಶೋಧನೆ ನಡೆದಿಲ್ಲ. ಹೀಗಾಗಿ, ಬೆಂಗಳೂರಿನಿಂದ ಲೆಕ್ಕ ಪರಿಶೋಧಕರನ್ನು ಕರೆಸಿ ಲೆಕ್ಕ ಪರಿಶೋಧನೆ ನಡೆಸಲು ಸಭೆ ತೀರ್ಮಾನಿಸಿತು. ಅದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಬಳಿಗೆ ನಿಯೋಗ ತೆರಳಲೂ ಸಭೆ ತೀರ್ಮಾನಿಸಿತು. ನಿಯೋಗದಲ್ಲಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್‌. ಪ್ರಕಾಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಉನ್ನೀಕೃಷ್ಣ, ಅಮಿನ್‌ ಮೊಹಿಸಿನ್‌, ಮನ್ಸೂರ್‌, ಕೆ.ಜಿ. ಪೀಟರ್‌, ಕೆ.ಎಸ್‌. ರಮೇಶ್‌, ಪಿ.ಡಿ. ಪೊನ್ನಪ್ಪ ಇದ್ದಾರೆ.

ತನಿಖೆಗೂ ತೀರ್ಮಾನ: ವಾಣಿಜ್ಯ ಕಟ್ಟಡಗಳ ತೆರಿಗೆ ವಿಚಾರದಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ತನಿಖೆ ನಡೆಸಬೇಕು ಎಂದು ಹಿರಿಯ ಸದಸ್ಯ ಚುಮ್ಮಿ ದೇವಯ್ಯ ಒತ್ತಾಯಿಸಿದರು.

‘ತನಿಖೆ ನಡೆಸಲಾಗುವುದು. ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ತೆರಿಗೆ ತೆಗೆದುಕೊಂಡು ನಗರಸಭೆ ಆದಾಯಕ್ಕೆ ಕುಂದು ತಂದಿದ್ದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು’ ಎಂದು ಶುಭಾ ಹೇಳಿದರು.

ಅಧಿಕಾರಿಗಳ ವಿರುದ್ಧ ಕಿಡಿ: ‘ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ. ಫಾರಂ– 3 ಅನ್ನು ನೀಡುತ್ತಿಲ್ಲ. ಅಧ್ಯಕ್ಷರ ಹಿಡಿತದಲ್ಲಿ ಅಧಿಕಾರಿಗಳು ಇಲ್ಲ. ಮಧ್ಯವರ್ತಿಗಳ ಮೂಲಕ ಬಂದವರ ಕೆಲಸಗಳು ನಡೆಯುತ್ತಿವೆ. ಮಧ್ಯವರ್ತಿಗಳನ್ನು ದೂರ ಮಾಡಬೇಕು’ ಎಂದು ಸದಸ್ಯ ಕೆ.ಎಸ್‌. ರಮೇಶ್‌ ಆಗ್ರಹಿಸಿದರು. ವ್ಯವಸ್ಥಾಪಕ ತಾಹೀರ್‌, ಎಲ್ಲ ಅಧಿಕಾರಿಗಳೂ ಒಂದೇ ರೀತಿಯಲ್ಲಿ ನೋಡುವುದು. ಬೇಜವಾಬ್ದಾರಿ ಅಧಿಕಾರಿಗಳೂ ಇರಬಹುದು. ಅಂತಹ ಅಧಿಕಾರಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಿ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬಾರದು ಎಂದು ಕೋರಿದರು.

‘ಅಧಿಕಾರಿಗಳಿಗೆ ನೋಟಿಸ್‌ ಕೊಡಬೇಡಿ’ ಎನ್ನುವ ವಿಚಾರದಲ್ಲಿ ಪೌರಾಯುಕ್ತೆ ಹಾಗೂ ಅಧ್ಯಕ್ಷರ ನಡುವೆ ಮಾತಿನ ಸಮರಕ್ಕೆ ಕಾರಣವಾಯಿತು. ಪೌರಾಯುಕ್ತರೇ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ಕೆಲಸ ಮಾಡಿಸಬೇಕು ಎಂದು ಬಹುತೇಕ ಸದಸ್ಯರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT