ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಕಾಂಗ್ರೆಸ್ ಅಲೆ; ಟಿ.ಎಂ.ಶಾಹೀದ್

‘ಡಬಲ್ ಎಂಜಿನ್’ ಸರ್ಕಾರದ ಬಗ್ಗೆ ಜನರಲ್ಲಿ ಅತೃಪ್ತಿ
Last Updated 14 ಮಾರ್ಚ್ 2023, 4:18 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗಿನಲ್ಲಿ ಕಾಂಗ್ರೆಸ್ ಅಲೆ ಬೀಸುತ್ತಿದೆ. ಸದ್ಯದ ಸರ್ಕಾರ ಹಾಗೂ ಇಲ್ಲಿನ ಜನಪ್ರತಿನಿಧಿಗಳ ಬಗ್ಗೆ ಜನರಲ್ಲಿ ಜಿಗುಪ್ಸೆ ಮೂಡಿದೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರ ಟಿ.ಎಂ.ಶಾಹೀದ್ ತಿಳಿಸಿದರು.

ಕಾಂಗ್ರೆಸ್‌ನ ಎಲ್ಲ ನಾಯಕರ ಒಗ್ಗಟ್ಟಿನ ಬಲದಿಂದ ಪಕ್ಷ ಕೊಡಗಿನಲ್ಲಿ ಬಲಿಷ್ಠವಾಗುತ್ತಿದೆ. ಆರ್.ಧ್ರುವನಾರಾಯಣ ಅವರ ಅಕಾಲಿಕ ಸಾವು ಪಕ್ಷಕ್ಕೆ ಬರಸಿಡಿಲಿನಂತೆ ಎರಗಿರುವುದು ನಿಜ. ಈಗ ಎದ್ದಿರುವ ಕಾಂಗ್ರೆಸ್ ಅಲೆಯ ಹಿಂದೆ ಧ್ರುವನಾರಾಯಣ ಅವರ ಶ್ರಮವೂ ಇದೆ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಡಬಲ್ ಎಂಜಿನ್’ ಸರ್ಕಾರದ ಬಗೆಗೆ ಜನರಲ್ಲಿ ಅತೃಪ್ತಿ ಇದೆ. ಕಳೆದ ಹಲವು ಚುನಾವಣೆಗಳಲ್ಲಿ ಗೆಲ್ಲಿಸಿದವರನ್ನೇ ಗೆಲ್ಲಿಸಿದ ಜನರ ಆಶೋತ್ತರಗಳು ಇನ್ನೂ ಈಡೇರಿಲ್ಲ. ಎಲ್ಲ ಕಡೆ ಬಿಜೆಪಿಯೇ ಇದ್ದರೂ ಯಾವುದೇ ದೊಡ್ಡ ಕೊಡುಗೆ ಕೊಡಗಿಗೆ ಸಿಕ್ಕಿಲ್ಲ. ಹಾಗಾಗಿ, ಜನರು ಇಲ್ಲಿ ಬದಲಾವಣೆ ಬಯಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು.

ಕನಿಷ್ಠ ಪಕ್ಷ ನದಿಗಳಲ್ಲಿ ತುಂಬಿರುವ ಹೂಳು ತೆಗೆಸುವ ಪ್ರಯತ್ನವನ್ನೂ ನಡೆಸಿಲ್ಲ. ಮತ್ತೆ ಮಳೆಯಾದರೆ ಕೃಷಿಭೂಮಿ ಮುಳುಗಡೆಯಾಗುತ್ತದೆ. ಕಳೆದ ಮಳೆಗಾಲದಲ್ಲಿ ಬೆಳೆ ಹಾನಿಗೆ ಸರಿಯಾದ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಅವರು ದೂರಿದರು.

ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾನವ– ಪ್ರಾಣಿ ಸಂಘರ್ಷವನ್ನು ತಡೆಯುವ ಪ್ರಯತ್ನಗಳನ್ನು ಸರ್ಕಾರ ನಡೆಸಿಲ್ಲ. ಮಳೆಯಿಂದ ಮನೆ ಕಳೆದುಕೊಂಡವರಿಗೆ ಮನೆ ಕೊಡುವ ದಿಕ್ಕಿನಲ್ಲೂ ಸರ್ಕಾರ ಚಿಂತಿಸಿಲ್ಲ. ಜನಸಾಮಾನ್ಯರಿಗೆ ಈ ಎಲ್ಲ ಕಾರಣಗಳಿಂದ ಅಸಮಾಧಾನವಿದೆ ಎಂದರು.

‘ಈಗ ಇರುವ ಸರ್ಕಾರಕ್ಕೆ ದೂರಾಲೋಚನೆಯೂ ಇಲ್ಲ, ಮುಂದಾಲೋಚನೆಯೂ ಇಲ್ಲ. ಭ್ರಷ್ಟಾಚಾರದಿಂದ ಸರ್ಕಾರ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಸದ್ಯ, ಶೇ 50ರಷ್ಟು ಭ್ರಷ್ಟ ಅಧಿಕಾರಿಗಳೇ ತುಂಬಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ನಡೆಯುವ ಚುನಾವಣೆ. ಇದರಲ್ಲಿ ಬಿಜೆಪಿ 60ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ’ ಎಂದು ಅವರು ಹೇಳಿದರು.

ಸಂಪಾಜೆಯ ಗ್ರಾಮ ಪಂಚಾಯಿತಿ ಸದಸ್ಯ ಅಬುಸಾಲಿ ಗೂನಡ್ಕ ಮಾತನಾಡಿ, ‘ಮಳೆಯಿಂದ ಕೃಷಿಗೆ ₹ 6ರಿಂದ 7 ಲಕ್ಷ ನಷ್ಟವಾಗಿದ್ದರೂ ₹ 22 ಸಾವಿರವಷ್ಟೇ ಪರಿಹಾರ ನೀಡಲಾಗಿದೆ. 41 ಮನೆಗಳಿಗೆ ಹಾನಿಯಾಗಿದ್ದರೂ ₹ 5,200 ಮಾತ್ರವೇ ದೊರಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‍‘ಪಯಸ್ವಿನಿ ನದಿಯಲ್ಲಿ ಹೂಳು ತುಂಬಿದ್ದು, ಅದರ ಹರಿವು ವಿಸ್ತಾರಗೊಳ್ಳುತ್ತಿದೆ. ಕೃಷಿಭೂಮಿಯನ್ನು ಆಫೋಶನ್ ತೆಗೆದುಕೊಳ್ಳುತ್ತಿದೆ. ಅಡಿಕೆಗೆ ರೋಗಗಳು ಬಂದಿದ್ದು, ಬೆಳೆಗಾರರ ಪರಿಸ್ಥಿತಿ ಶೋಚನೀಯವಾಗಿದ್ದರೂ ಸರ್ಕಾರ ಗಮನ ಹರಿಸಿಲ್ಲ’ ಎಂದರು.

ಪಕ್ಷದ ಮುಖಂಡರಾದ ಕೆ.ಐ.ಮಹಮ್ಮದ್ ರಫಿ, ಎಂ.ಎ.ಉಸ್ಮಾನ್, ಅಬ್ದುಲ್ ಖಾದರ್, ಜುರೈದ್ ತೆಕ್ಕಿಲ್ ಇದ್ದರು.

‘ಅಲ್ಪಸಂಖ್ಯಾತರ ಸತಾಯಿಸುತ್ತಿರುವ ಅಧಿಕಾರಿಗಳು’

‘ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು ಅಲ್ಪಸಂಖ್ಯಾತರನ್ನು ಅಧಿಕಾರಿಗಳು ಸತಾಯಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರ ಟಿ.ಎಂ.ಶಾಹೀದ್ ಆರೋಪಿಸಿದರು.

‘18 ವರ್ಷ ತುಂಬಿದ ನನ್ನ ಮಗನ ಹೆಸರನ್ನು ಸುಳ್ಯದಲ್ಲಿ ಮತದಾರರ ಪಟ್ಟಿಗೆ ಸೇರಿಸಲು ತಳಮಟ್ಟದ ಅಧಿಕಾರಿಗಳು ಸಾಕಷ್ಟು ಅಲೆದಾಡಿಸಿದರು. ಕೊನೆಗೆ, ತಹಶೀಲ್ದಾರ್ ಬಳಿ ಏರುಧ್ವನಿಯಲ್ಲಿ ಪ್ರಶ್ನಿಸಿದಾಗ ಹೆಸರು ಸೇರ್ಪಡೆಗೊಂಡಿತು. ಒಂದು ಪಕ್ಷದ ಪದಾಧಿಕಾರಿಯಾದ ನನಗೇ ಹೀಗಾದರೆ ಇನ್ನು ಬಡ ಅಲ್ಪಸಂಖ್ಯಾತರ ಪಾಡೇನು’ ಎಂದು ಪ್ರಶ್ನಿಸಿದರು.

‘ಬಿಜೆಪಿ ಸರ್ಕಾರದಲ್ಲಿ, ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬಾರದಂತೆ ತಡೆಯುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT