ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಂದಾಯ, ಅರಣ್ಯ ಇಲಾಖೆ ವಿರುದ್ಧ ಜನರ ದೂರು

ಸೋಮವಾರಪೇಟೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
Published 13 ಜೂನ್ 2024, 3:17 IST
Last Updated 13 ಜೂನ್ 2024, 3:17 IST
ಅಕ್ಷರ ಗಾತ್ರ

ಸೋಮವಾರಪೇಟೆ: ‘ಸುಪ್ರಿಂ ಕೋರ್ಟ್ ನಿರ್ದೇಶನದಂತೆ ನಾಗರಿಕರಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಕಡ್ಡಾಯವಾಗಿ ನೀಡಲೇಬೇಕಾಗಿದೆ. ಅಲ್ಲದೆ, ಅದಕ್ಕೆ ಧಕ್ಕೆ ಬಂದಲ್ಲಿ  ಕಾನೂನು ಮೂಲಕ ಇತ್ಯರ್ಥಪಡಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ’ ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ಅಧಿಕಾರಿಗಳಿಗೆ ತಿಳಿಸಿದರು.

ಕೊಡಗು ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಸಿದ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಕೊಡ್ಲಿಪೇಟೆ ಹೋಬಳಿಯ ಹೇಮಾವತಿ ಹಿನ್ನೀರಿನಲ್ಲಿ ಅವ್ಯಾಹತವಾಗಿ ಇಟ್ಟಿಗೆ ಮಾಡಲು ಹೊಳೆಯ ದಂಡೆಯ ಮಣ್ಣನ್ನು ತೆಗೆಯುತ್ತಿರುವ ಬಗ್ಗೆ ಕೊಡ್ಲಿಪೇಟೆಯ ತೇಜ್ ಕುಮಾರ್ ದೂರಿದರು.

‘ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ. ಇಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಮಾಡಲಾಗಿದೆ. ಆದರೆ, ಇದರಲ್ಲಿ ಸದಸ್ಯರಾಗಿರುವ ಅಧಿಕಾರಿಗಳಿಗೆ ತಿಳಿಸಿದರೆ, ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಅರಣ್ಯ ಇಲಾಖೆಯವರು ಸ್ವಂತ ಜಾಗದಲ್ಲಿ ಮರ ಕಡಿದು ಸ್ವಂತಕ್ಕೆ ಬಳಸಿದರೆ ದೂರು ದಾಖಲಿಸುತ್ತಾರೆ. ಆದರೆ, ಇಲ್ಲಿ ನೂರಾರು ಮರಗಳನ್ನು ಕಡಿದು 10 ಲಕ್ಷ ಇಟ್ಟಿಗೆ ಸುಡಲು ಸೌದೆ ಮಾಡಿ ಬಳಸುತ್ತಿದ್ದರೂ, ಅರಣ್ಯ ಇಲಾಖೆಯವರು ಕ್ರಮ ತೆಗೆದುಕೊಳ್ಳುತ್ತಿಲ್ಲ. ಯಾವುದೇ ಅನುಮತಿ ಇಲ್ಲದೆ, ರಾತ್ರಿ 11ರಿಂದ ಬೆಳಿಗ್ಗೆ 4ರ ವರೆಗೆ ಗಣಿಗಾರಿಕೆ ನಡೆಯುತ್ತಿದೆ. ದೂರು ನೀಡಿದರೆ ಸ್ಥಳಕ್ಕೆ ಮಡಿಕೇರಿಯಿಂದ ಅಧಿಕಾರಿಗಳು ಬರುವ ಸಂದರ್ಭ ಯಾವುದೇ ಕುರುಹು ಸಹ ಇಲ್ಲದ ಹಾಗೆ ಮಾಡಲಾಗುತ್ತಿದೆ. ಇವುಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಲು’ ಎಂದು ಮನವಿ ಮಾಡಿದರು.

ತಹಶೀಲ್ದಾರ್ ನವೀನ್ ಕುಮಾರ್ ಮಾತನಾಡಿ, ‘ಕೊಡ್ಲಿಪೇಟೆಯಲ್ಲಿ ಇಟ್ಟಿಗೆ ಮಾಡುವ ಸ್ಥಳಕ್ಕೆ ತೆರಳಿ ಸ್ಥಳ ಮಹಜರು ಮಾಡಲಾಗಿದೆ’ ಎಂದು ಸಭೆಗೆ ತಿಳಿಸಿದರು.

ಮರ ಕಡಿತಲೆ ಬಗ್ಗೆ ಅರಣ್ಯ ಇಲಾಖೆಯ ಶನಿವಾರಸಂತೆ ರೇಂಜರ್ ಗಾನಶ್ರೀ ಮಾತನಾಡಿ, ‘ಮರಗಳ ಮೇಲಿನ ಕೊಂಬೆಗಳನ್ನು ಕಡಿದು ಬಳಸಿದಲ್ಲಿ ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಬುಡ ಸಹಿತ ಕಡಿದಲ್ಲಿ ಮಾತ್ರ ದೂರು ದಾಖಲಿಸಬಹುದು’ ಎಂದು ತಿಳಿಸಿದರು.

ಕೊಡ್ಲಿಪೇಟೆಯ ಹೇಮಂತ್ ಕುಮಾರ್ ಅವರು ಒಂದು ಎಕರೆ ಕೃಷಿ ಭೂಮಿಯನ್ನು ಅಕ್ರಮ ಸಕ್ರಮದಲ್ಲಿ ಅರ್ಜಿ ನೀಡಿ, ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಮಂಜೂರಾದರೂ, ಅಧಿಕಾರಿ ಸತೀಶ್ ಅವರು ಸೂಕ್ತ ದಾಖಲಾತಿ ನೀಡದೆ, ಸತಾಯಿಸುತ್ತಿದ್ದಾರೆ. ನಮ್ಮೊಂದಿಗೆ ನೀಡಿದ ಅನೇಕರಿಗೆ ಭೂಮಿಯ ದಾಖಲಾತಿ ಮಾಡಿ ಕೊಟ್ಟಿದ್ದಾರೆ. ನನಗೆ ಮಾತ್ರ ನೀಡುತ್ತಿಲ್ಲ. ಸೂಕ್ತ ಕ್ರಮ ಕೈಗೊಂಡು ದಾಖಲಾತಿ ಕೊಡಿಸಿ ಎಂದು ಮನವಿ ಮಾಡಿದರು.

‘ಅಕ್ಕ ಪಕ್ಕದವರಿಗೆ ನೀಡಿರುವ ದಾಖಲಾತಿಯೊಂದಿಗೆ ಅರ್ಜಿಯಲ್ಲಿ ಸಂಬಂಧಿಸಿದ ಅಧಿಕಾರಿಯ ವಿರುದ್ಧ ದೂರು ನೀಡುವಂತೆ ಡಿವೈಎಸ್ಪಿ ತಿಳಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧದ ದೂರುಗಳನ್ನು ಸಾರ್ವಜನಿಕರು ನಿಗದಿತ ಪತ್ರದಲ್ಲಿ ನೀಡಬಹುದು.  ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಡಿವೈಎಸ್ಪಿ ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗೆ ಮಡಿಕೇರಿ ಲೋಕಾಯುಕ್ತ ಪೊಲೀಸ್ ಕಚೇರಿ, ದೂ.ಸಂ. 08272-295297 ನ್ನು ಸಂಪರ್ಕಿಸಬಹುದು ಎಂದು ಡಿವೈಎಸ್ಪಿ ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ಲೋಕಾಯುಕ್ತ ಇನ್‌ಸ್ಪೆಕ್ಟರ್ ಲೋಕೇಶ್, ಸಿಬ್ಬಂದಿ ಮಂಜುನಾಥ್, ಲೋಹಿತ್, ಪೃಥ್ವಿಷಾ ಇದ್ದರು.

ಸೋಮವಾರಪೇಟೆಯಲ್ಲಿ ಕೊಡಗು ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕುಂದು ಕೊರತೆ ಸಭೆಯನ್ನು ಲೋಕಾಯುಕ್ತ ಡಿವೈಎಸ್ಪಿ ಪವನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು
ಸೋಮವಾರಪೇಟೆಯಲ್ಲಿ ಕೊಡಗು ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕುಂದು ಕೊರತೆ ಸಭೆಯನ್ನು ಲೋಕಾಯುಕ್ತ ಡಿವೈಎಸ್ಪಿ ಪವನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು

ದಾರಿ ಸಮಸ್ಯೆ ಇತ್ಯರ್ಥಕ್ಕೆ ಸೂಚನೆ

ತಮ್ಮ ಜಮೀನಿಗೆ ತೆರಳಲು ಸೂಕ್ತ ದಾರಿ ಇಲ್ಲ ಎಂದು ಹೇಳಿ ತಲ್ತಾರ್ ಶೆಟ್ಟಳ್ಳಿ ಗ್ರಾಮದ ಕೆ.ಡಿ. ಗುರಪ್ಪ ‘2020ರಿಂದ ದೂರು ನೀಡಿ ಕಂದಾಯ ಇಲಾಖೆಗೆ ಅಲೆಯುತ್ತಿದ್ದೇನೆ. ಎದುರುದಾರರಿಂದ ಕೊಲೆ ಬೆದರಿಕೆ ಇದ್ದು ಪೊಲೀಸ್ ಠಾಣೆಗೆ ದೂರು ನೀಡಿದರೂ ಇಲ್ಲಿಯವರೆಗೆ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ’ ಎಂದು ದೂರಿದರು. ಈ ಸಂದರ್ಭ ಡಿವೈಎಸ್ಪಿ ಮಾತನಾಡಿ ‘ಯಾರೇ ದೂರು ನೀಡಿದರೂ ಪೊಲೀಸ್ ಇಲಾಖೆಗೆ ಕರೆಸಿ ಇಬ್ಬರನ್ನು ಮುಖಾಮುಖಿ ಕೂರಿಸಿ ವಿಷಯವನ್ನು ಚರ್ಚಿಸಿ ಇತ್ಯರ್ಥ ಪಡಿಸಬೇಕು. ಒಂದು ಕಡೆಯಿಂದ ಕರೆದು ಚರ್ಚಿಸಿದರೆ ಯಾವುದೇ ಪ್ರಯೋಜನವಿಲ್ಲ. ಕೂಡಲೇ ಇಬ್ಬರನ್ನು ಕರೆದು ಸಮಸ್ಯೆ ಪರಿಹರಿಸುವಂತೆ’ ಪಿಎಸ್ಐ ರಮೇಶ್ ಅವರಿಗೆ ಸೂಚಿಸಿದರು. ಕಂದಾಯ ಇಲಾಖಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪೈಸಾರಿ ಜಾಗವಾದಲ್ಲಿ ಕೂಡಲೇ ಬಿಡಿಸಿಕೊಡುವ ಕೆಲಸ ಮಾಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT