ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಲೂಟಿಗಾಗಿ ‘ಕೂರ್ಗ್‌ ವಿಲೇಜ್‌’: ಆರೋಪ

ಕಾಮಗಾರಿ ಸ್ಥಗಿತಕ್ಕೆ ಮಾಜಿ ಸಚಿವ ಎಂ.ಸಿ.ನಾಣಯ್ಯ ಆಗ್ರಹ
Last Updated 3 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್‌ ಸಮೀಪದ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿ ‘ಕೂರ್ಗ್‌ ವಿಲೇಜ್‌’ ನಿರ್ಮಾಣ ಮಾಡುತ್ತಿರುವುದು ಸರ್ಕಾರದ ಅನುದಾನವನ್ನು ಲೂಟಿ ಮಾಡಲು’ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘10 ಮಂದಿಯ ಸ್ವಾರ್ಥಕ್ಕೆ ಕೂರ್ಗ್ ವಿಲೇಜ್‌ಗೆ ಬೆಂಬಲ ನೀಡಲಾಗುತ್ತಿದೆ. ಇದರಿಂದ ನಾಲ್ಕು ಲಕ್ಷ ಮಂದಿಗೆ ತೊಂದರೆ ಆಗುವುದಿಲ್ಲವೇ? ಕೂಡಲೇ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಮಧ್ಯ ಪ್ರವೇಶಿಸಿ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಲೋಕಾಯುಕ್ತಕ್ಕೆ ಪತ್ರ ಬರೆಯುತ್ತೇನೆ’ ಎಂದು ಎಚ್ಚರಿಸಿದರು.

‘ಎರಡು ವರ್ಷದಿಂದ ಕೊಡಗು ಜಿಲ್ಲೆಯು ಪ್ರಾಕೃತಿಕ ವಿಕೋಪಕ್ಕೆ ತತ್ತರಿಸಿದೆ. ಅದರ ನಡುವೆಯೂ ಇಲ್ಲಿನ ಅಸ್ತಿತ್ವ ಉಳಿಸಿಕೊಳ್ಳಲಾಗಿದೆ. ಕೊಡಗು ಪ್ರಕೃತಿ ಸೌಂದರ್ಯ ಹೊಂದಿದೆ. ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮ ಇರಬೇಕೇ ಹೊರತು, ಪರಿಸರವನ್ನೇ ನಾಶ ಪಡಿಸಿ ಪ್ರವಾಸಿಗರನ್ನು ಸೆಳೆಯುವ ಕೆಲಸ ಆಗಬಾರದು’ ಎಂದು ಹೇಳಿದರು.

‘ರಾಜಾಸೀಟ್‌ ಬಳಿಯ ನನ್ನ ಕುಟುಂಬಸ್ಥರಿಗೆ ಸೇರಿದ್ದ ಜಾಗವನ್ನು ಹಿಂದೆ ರಾಜಾಸೀಟ್‌ಗೆ ನೀರು ಪೂರೈಸಲು ಸರ್ಕಾರವು ಆ ಜಾಗವನ್ನು ಖರೀದಿಸಿತ್ತು. ಅಲ್ಲಿ ಸಣ್ಣ ಕೆರೆಯಿದೆ. ಗಿಡ ಮರಗಳಿವೆ. ಅಂತರ್ಜವೂ ಇದೆ. ಕೂರ್ಗ್ ವಿಲೇಜ್‌ ನಿರ್ಮಾಣದಿಂದ ಪರಿಸರ ನಾಶವಾಗಿ ಹಾಳು ಕೊಂಪೆಯಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

‘1969ರಲ್ಲಿ ಮಡಿಕೇರಿ ಪುರಸಭೆಯ ಅಧ್ಯಕ್ಷನಾಗಿದ್ದೆ. ಆ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಪರಿಸರ ಉಳಿಸುವ ಕೆಲಸ ಮಾಡಿದ್ದೆ. ಆದರೆ, ಈಗ ಅಧಿಕಾರಿಗಳು ನರ್ಸರಿ ಬೆಳೆಸುವ ಉದ್ದೇಶಕ್ಕೆ ಖರೀದಿಸಿದ್ದ ಜಾಗದಲ್ಲಿ ಕೂರ್ಗ್‌ ವಿಲೇಜ್‌ ನಿರ್ಮಾಣಕ್ಕೆ ಮುಂದಾಗಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ಪ್ರವಾಸೋದ್ಯಮ ಇಲಾಖೆ ₹ 98 ಲಕ್ಷ ಅನುದಾನದಲ್ಲಿ ತೋಟಗಾರಿಕೆ ಜಾಗದಲ್ಲಿ ಗೂಡಾಂಗಡಿ ನಿರ್ಮಾಣ ಮಾಡಲಾಗುತ್ತಿದೆ. ಅದರ ಬದಲಿಗೆ ರಾಜಾಸೀಟ್‌ನಲ್ಲಿ ಪರಿಸರ ಪೂರಕವಾಗಿ ವಾಕ್‌ ಪಾಥ್‌ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಮಾಡಬಹುದು. ಕೂಡಲೇ ಕೂರ್ಗ್‌ ವಿಲೇಜ್ ಕಾಮಗಾರಿ ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.

ಅನಧಿಕೃತ ಹೋಮ್‌ಸ್ಟೇ ವಿರುದ್ಧ ಕಿಡಿ:‘ನಾನು ಹೋಮ್‌ ಸ್ಟೇ ಸಂಸ್ಕೃತಿ ವಿರೋಧಿಸುತ್ತಿಲ್ಲ. ಆದರೆ, ಅನಧಿಕೃತ ಹೋಮ್‌ ಸ್ಟೇ ಹಾವಳಿ ಹೆಚ್ಚಾಗಿದೆ. ಅಂದಾಜು ಮೂರುವರೆ ಸಾವಿರ ಅನಧಿಕೃತ ಹೋಮ್‌ ಸ್ಟೇಗಳಿವೆ. ಇಲ್ಲಿ ಮೋಜು ಮಸ್ತಿ ಮಾಡಲಾಗುತ್ತಿದೆ. ರೇವ್‌ ಪಾರ್ಟಿ ನಡೆಯುತ್ತಿವೆ. ದಂಧೆಯ ಕೇಂದ್ರವಾಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೊಡಗಿನಲ್ಲಿ ಮೂಲ ನಿವಾಸಿಗಳು ನೂರಾರು ವರ್ಷದಿಂದ ನೆಲೆಸಿದ್ದಾರೆ. ಆದರೆ, ಹೊರಗಿನಿಂದ ಬಂದವರು ರೆಸಾರ್ಟ್‌ ನಿರ್ಮಾಣಕ್ಕೆ ಗುಡ್ಡಗಳನ್ನೇ ಬೋಳು ಮಾಡಿ ಹಾಳು ಮಾಡಲಾಗಿದೆ. ಮಾನವ ನಿರ್ಮಿತ ಭೂಕುಸಿತವೆಂದೂ ಭೂವಿಜ್ಞಾನಿಗಳು ವರದಿ ಸಲ್ಲಿಸಿದ್ದಾರೆ. ಈಗ ‘ಕೂರ್ಗ್‌ ವಿಲೇಜ್‌’ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ನೋಡಿದರೆ, ಬೇಸರ ಉಂಟಾಗುತ್ತಿದೆ’ ಎಂದು ನಾಣಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT