ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಕೋವಿಡ್‌ನಿಂದ 8 ದಿನದಲ್ಲಿ 10 ಮಂದಿ ಸಾವು

ಸೋಂಕಿತ ಪ್ರಕರಣಗಳಲ್ಲೂ ಏರಿಕೆ!: ಕೈಚೆಲ್ಲಿತೇ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ?
Last Updated 8 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ಕೋವಿಡ್–19‌ ಸೋಂಕಿತ ಪ್ರಕರಣಗಳು ಹಾಗೂ ಕೋವಿಡ್‌ ಪೀಡಿತರ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ಆತಂಕ ತಂದಿದೆ. ಎಂಟು ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ.

ಆರಂಭದಲ್ಲಿ ಹಸಿರು ವಲಯದಲ್ಲಿದ್ದ ಕೊಡಗು ಜಿಲ್ಲೆಯೂ ಈಗ ಹಳಿ ತಪ್ಪಿದೆ ಎಂಬ ಆತಂಕವನ್ನು ಎರಡು ದಿನಗಳ ಹಿಂದೆ ಮಡಿಕೇರಿಗೆ ಆಗಮಿಸಿದ್ದ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್‌ ಅವರೇ ವ್ಯಕ್ತಪಡಿಸಿದ್ದಾರೆ.

‘ಸೋಂಕು ಹಾಗೂ ಸಾವಿನ ಪ್ರಮಾಣ ತಗ್ಗಿಸಬೇಕು’ ಎಂದು ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದರೂ, ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂಬ ಆಪಾದನೆ ಬಲವಾಗಿದೆ.ಆರಂಭಿಕ ದಿನಗಳಲ್ಲಿ ಬಿಗಿಯಾದ ಕ್ರಮಕ್ಕೆ ಮುಂದಾಗಿದ್ದ ಆರೋಗ್ಯ ಇಲಾಖೆ, ಈಗ ಕೈಚೆಲ್ಲಿದೆ ಎಂಬ ಅಸಮಾಧಾನ ಹೊಗೆಯಾಡುತ್ತಿದೆ. ಕೋವಿಡ್‌ ಪೀಡಿತರೂ ಅಸಮಾಧಾನ ಹೊರಹಾಕಿದ್ದಾರೆ. ಪರೀಕ್ಷೆಯ ವರದಿ ಬರುವುದು ವಿಳಂಬವಾಗುತ್ತಿದೆ.

ಒಂದು ವಾರ ಅಂಕಿಅಂಶಗಳನ್ನು ಗಮನಿಸಿದರೆ, ಜಿಲ್ಲೆಯ ಸೋಂಕಿತ ಪ್ರಕರಣಗಳು ಹಾಗೂ ಸಾವಿನ ಪ್ರಮಾಣ ಏರಿಕೆ ಆಗಿರುವುದು ಕಂಡುಬಂದಿದೆ. ಸೆ.30ರ ತನಕ ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಾವಿನ ಸಂಖ್ಯೆ 40 ಆಗಿತ್ತು. ಅದೇ ಅ.7ರ ವೇಳೆ ಸಾವಿನ ಸಂಖ್ಯೆ 50ಕ್ಕೆ ಏರಿದೆ. ಅಲ್ಲಿಗೆ ಸಾವಿನ ಸಂಖ್ಯೆ ಅರ್ಧ ಶತಕ ಮುಟ್ಟಿದಂತಾಗಿದೆ. ಕೇವಲ 8 ದಿನಗಳಲ್ಲಿ 10 ಮಂದಿ ಸಾವನ್ನಪ್ಪಿರುವುದು ಆರೋಗ್ಯ ಇಲಾಖೆಯ ಕಾಳಜಿಯ ಬಗ್ಗೆ ಅನುಮಾನ ಹುಟ್ಟಿಸಿದೆ ಎಂದು ಕೋವಿಡ್ ಪೀಡಿತರೊಬ್ಬರು ನೋವು ತೋಡಿಕೊಂಡಿದ್ದಾರೆ.

ಅನ್‌ಲಾಕ್‌ ನಂತರ ಜಿಲ್ಲೆಯಲ್ಲೂ ಎಲ್ಲ ಚಟುವಟಿಕೆಗಳೂ ಮುಕ್ತವಾಗಿ ನಡೆಯುತ್ತಿವೆ. ಜನರ ಓಡಾಟ ಸುಗಮವಾಗಿದೆ.

ಆರಂಭಿಕ ದಿನಗಳಲ್ಲಿ ಕಾಫಿ ನಾಡು ಕೊಡಗು ಜಿಲ್ಲೆಯಲ್ಲಿ 10ರಿಂದ 20 ಪ್ರಕರಣಗಳು ನಿತ್ಯ ದೃಢ ಪಡುತ್ತಿದ್ದವು. ಕ್ರಮೇಣ 50ಕ್ಕೆ ಏರಿಕೆಯಾಗಿದೆ. ಈಗ ನಿತ್ಯ 90ರಿಂದ 100 ಪ್ರಕರಣಗಳು ದೃಢಪಡುತ್ತಿವೆ. 100 ಗಂಟಲು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದರೆ, ಅದರಲ್ಲಿ 16 ಪಾಸಿಟಿವ್‌ ಬರುತ್ತಿವೆ. ಎರಡ್ಮೂರು ವಾರಗಳಲ್ಲಿ ಅದರ ಸಂಖ್ಯೆ ಶೇ 20ಕ್ಕೆ ಏರಿಕೆಯಾಗಬಹುದು ಎಂದು ಜಿಲ್ಲಾಡಳಿತವೇ ಆತಂಕ ವ್ಯಕ್ತಪಡಿಸಿದೆ.

ಗಾಳಿ ಸುದ್ದಿಗೆ ಹೆದರಿದರೆ?:ಕೋವಿಡ್‌ ವಿಚಾರವಾಗಿ ಜಿಲ್ಲೆಯಲ್ಲಿ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ವೈದ್ಯರು ಸುಮ್ಮನೆ ಪಾಸಿಟಿವ್‌ ಎಂದು ಹೇಳುತ್ತಿದ್ದಾರೆ. ಹೆಚ್ಚು ಪಾಸಿಟಿವ್‌ ಪ್ರಕರಣಗಳು ಕಂಡುಬಂದರೆ ಅವರಿಗೆ ಹೆಚ್ಚು ಅನುದಾನ ಬರಲಿದೆ ಎಂಬ ಕಾರಣಕ್ಕೆ ಪಾಸಿಟಿವ್‌ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ಕಾರಣದಿಂದ ಕೆಲವರು ರೋಗ ಲಕ್ಷಣಗಳು ಕಾಣಿಸಿದರೂ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಹಾಗೂ ಕೊಡಗು ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಕಾರ್ಯಪ್ಪ ಅವರು ಹೇಳಿದ್ದರು.

ಸಕಾಲಿಕವಾಗಿ ಕೋವಿಡ್‌ ಆಸ್ಪತ್ರೆಗೆ ಬಂದರೆ, ಚಿಕಿತ್ಸೆ ನೀಡಿ ನಿಗಾ ವಹಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಸುಧಾಕರ್‌ ಅವರು ಮಾತನಾಡಿ, ‘ಗಾಳಿ ಸುದ್ದಿಗಳನ್ನು ಯಾರೂ ನಂಬಬಾರದು’ ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.

‘ನಾವೇ ಮನೆಗೆ ಬರಬೇಕು’:ಆರಂಭಿಕ ದಿನಗಳಲ್ಲಿ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಮೇಲೆ ಆಸ್ಪತ್ರೆಯಿಂದ ಮನೆಗೆ ಬರಲು ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುತ್ತಿತ್ತು. ಈಗ ನಾವೇ ನಡೆದು, ಇಲ್ಲವೇ ಆಟೊ ಮೂಲಕ ಮನೆಗೆ ಬರಬೇಕಿದೆ ಎಂದು ಮತ್ತೊಬ್ಬರು ಪರಿಸ್ಥಿತಿ ಬಿಚ್ಚಿಟ್ಟಿದ್ದಾರೆ.

ಪ್ರವಾಸಿ ತಾಣ: ಸಿಬ್ಬಂದಿ ಸುಳಿವೇ ಇಲ್ಲ:ಜಿಲ್ಲೆಯಲ್ಲೂ ಎಲ್ಲ ಪ್ರವಾಸಿ ತಾಣಗಳೂ ಪ್ರವಾಸಿಗರಿಗೆ ಮುಕ್ತವಾಗಿವೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡಬರುತ್ತಿದ್ದಾರೆ. ರಾಜಾಸೀಟ್‌, ದುಬಾರೆ, ಅಬ್ಬಿ ಜಲಪಾತ, ಓಂಕಾರೇಶ್ವರ ದೇಗುಲ, ನಿಸರ್ಗಧಾಮ, ಇರ್ಫು ಜಲಪಾತ, ತಲಕಾವೇರಿ... ಹೀಗೆ ಪ್ರವಾಸಿಗರು ಕಾಣಿಸುತ್ತಿದ್ದಾರೆ. ಅಲ್ಲಿಗೆ ಅರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರನ್ನು ನಿಯೋಜಿಸಬೇಕು. ಬಂದವರ ಉಷ್ಣಾಂಶ ಪರೀಕ್ಷೆ ಮಾಡಬೇಕು ಎಂಬ ಸೂಚಯಿದ್ದರೂ ಸಿಬ್ಬಂದಿ ಸುಳಿವು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT