ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಸಂಭ್ರಮಕ್ಕೆ ಜತೆಯಾದ ಸಾಂಸ್ಕೃತಿಕ ಕಾರ್ಯಕ್ರಮಗಳು

ಮೊದಲ ದಿನ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ, ದಿನ ಕಳೆದಂತೆ ಹೆಚ್ಚಳವಾಗುವ ನಿರೀಕ್ಷೆ
Last Updated 28 ಸೆಪ್ಟೆಂಬರ್ 2022, 10:38 IST
ಅಕ್ಷರ ಗಾತ್ರ

ಮಡಿಕೇರಿ: ಜಗಮಗಿಸುವ ವರ್ಣರಂಜಿತ ಸಾಲು ಸಾಲು ವಿದ್ಯುತ್ ದೀಪಗಳ ಬೆಳಕು, ಕಿವಿಗಡಚಿಕ್ಕುವ ಧ್ವನಿವರ್ಧಕಗಳ ಶಬ್ದಗಳು, ಅರ್ಚಕರ ದೈವಿಕ ಮಂತ್ರಗಳ ಜಪದೊಂದಿಗೆ ಇಲ್ಲಿನ ಗಾಂಧಿ ಮೈದಾನದಲ್ಲಿ ಮಡಿಕೇರಿ ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳ ದಿಬ್ಬಣ ಮಂಗಳವಾರ ಸಂಜೆ ಆರಂಭಗೊಂಡಿತು.

ಮಡಿಕೇರಿ ನಗರ ದಸರಾ ಸಮಿತಿ ಇಲ್ಲಿ ನಿರ್ಮಿಸಿದ್ದ ಕಲಾಸಂಭ್ರಮ ವೇದಿಕೆಯಲ್ಲಿ ಕುಶಾಲನಗರದ ಕುಂದನ ನೃತ್ಯಾಲಯದ ತಂಡದವರು ‘ಸ್ವಾಗತ ನೃತ್ಯ’ ನಡೆಸಿಕೊಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವಕ್ಕೆ ನಾಂದಿ ಹಾಡಿದರು.

ನಂತರ, ರಾತ್ರಿಯವರೆಗೂ ವೈವಿಧ್ಯಮಯ ಕಾರ್ಯಕ್ರಮಗಳ ರಸದೌತಣಗಳನ್ನು ವಿವಿಧ ಕಲಾವಿದರು ನೋಡಗರಿಗೆ ಉಣ ಬಡಿಸಿದರು.

ಕುಂದನ ನೃತ್ಯಾಲಯದವರ ‘ನೃತ್ಯ ವೈವಿಧ್ಯ’ದ ನಂತರ ಆರಂಭವಾದ ರಿಯಾಲಿಟಿ ಶೋ ಖ್ಯಾತಿಯ ಚೈತಾಲಿ ಚಿಲಾತ ಅವರ
‘ನೃತ್ಯ’ ಸಾಂಸ್ಕೃತಿಕ ಕಾರ್ಯಕ್ರಮಗಳ ಮೊದಲ ದಿನಕ್ಕೆ ಕಳಸವಿಟ್ಟಿತು. ನಂತರ, ಹಲವು ಕಲಾವಿದರು ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ನೆನಪಾದ ಕೋವಿಡ್, ಪ್ರಾಕೃತಿಕ ದುರಂತ

ಕಾರ್ಯಕ್ರಮದ ಆರಂಭದಲ್ಲೇ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಕೋವಿಡ್ ಮತ್ತು ಪ್ರಾಕೃತಿಕ ದುರಂತಗಳನ್ನು ನೆನಪಿಸಿಕೊಂಡರು. ಈ ವೇಳೆ ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರ ನೆರವೇರಿಸಿದ ನಗರಸಭಾ ಸದಸ್ಯ ಅರುಣ್‌ಶೆಟ್ಟಿ ಅವರನ್ನು ವೇದಿಕೆ ಮೇಲೆ ಕರೆದು ಪ್ರೇಕ್ಷಕರು ಕರತಾಡನ ಮಾಡುವಂತೆ ಮಾಡಿದರು. ಇದಾದ ನಂತರ, ವೇದಿಕೆ ಮೇಲೆ ಈ ಎರಡೂ ದುರಂತಗಳ ದೃಶ್ಯಗಳ ವಿಡಿಯೊ ತುಣುಕುಗಳಿರುವ ‘ಯುವ ದಸರೆ’ಯ ಟೀಜರ್‌ನ್ನೂ ಪ್ರದರ್ಶಿಸಲಾಯಿತು. ಈ ವೇಳೆ ಪ್ರೇಕ್ಷಕರ ಕಣ್ಣೆವೆಗಳು ಒದ್ದೆಯಾದವು.

‘ಗ್ರೇಟರ್ ರಾಜಾಸೀಟ್‌’ನ ದೃಶ್ಯಗಳಿರುವ ‘ರಾಜಾಸೀಟ್‌ ರೀ ಡಿಸ್ಕವರಿ’ ಕಿರುಚಿತ್ರವು ಪ್ರೇಕ್ಷಕರಿಗೆ ರೋಮಾಂಚನದ ಅನುಭೂತಿ ನೀಡುವಲ್ಲಿ ಸಫಲವಾಯಿತು. ‘ನಮ್ಮ ದಸರೆ ನಮ್ಮ ಹೆಮ್ಮೆ’ ಎಂಬ ಸ್ಲೋಗನ್‌ ಕಾರ್ಯಕ್ರಮದುದ್ದಕ್ಕೂ ಕೇಳಿ ಬಂದಿತು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಪ್ರಾಸ್ತವಿಕವಾದ ಮಾತುಗಳನ್ನಾಡಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್‌ ಯಲ್ಲಪ್ಪ, ಖಜಾಂಚಿ ಶ್ವೇತಾ ಪ್ರಶಾಂತ್ ಇದ್ದರು.

ಅನುದಾನ ಸಾಕಾಗದು: ಅಳಲು

ನಗರ ದಸರಾ ಸಮಿತಿಯ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಬಿ.ಎಂ.ಹರೀಶ್‌ ಅಣ್ವಿಕರ್ ಅವರು ವೇದಿಕೆಯ ಮೇಲೆಯೇ ಸಮಿತಿಗೆ ನೀಡಿರುವ ಅನುದಾನ ಏನೇನೂ ಸಾಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಕ್ಕಿರುವ ಅತ್ಯಲ್ಪ ಅನುದಾನದಲ್ಲಿ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂದಿನ ವರ್ಷವಾದರೂ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಎಲ್ಲೆಲ್ಲೂ ಖಾಲಿ ಕುರ್ಚಿಗಳು: ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯ ಮೊದಲ ದಿನ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸುಮಾರು 900ಕ್ಕೂ ಅಧಿಕ ಆಸನ ವ್ಯವಸ್ಥೆ ಮಾಡಲಾಗಿತ್ತಾದರೂ ಬೆರಳೆಣಿಕೆಯಷ್ಟು ಪ್ರೇಕ್ಷಕರು ಮಾತ್ರವೇ ಅಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT