ಮಂಗಳವಾರ, ನವೆಂಬರ್ 12, 2019
20 °C
ನೆರೆ ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿ ಮತ್ತು ಚೇತರಿಕೆ ಕ್ರಮಗಳ ಕುರಿತು ಸಭೆ

ನೆರವು: ಪ್ರಸ್ತಾವ ಸಲ್ಲಿಸಲು ಡಿ.ಸಿ ಕೋರಿಕೆ

Published:
Updated:
Prajavani

ಮಡಿಕೇರಿ: ಸ್ವಯಂ ಸೇವಾ ಸಂಸ್ಥೆಗಳು, ಕೊಡಗು ನೆರೆ ಸಂತ್ರಸ್ತರಿಗೆ ಸಾಕಷ್ಟು ನೆರವು ನೀಡಿದ್ದು, ಇನ್ನುಮುಂದೆಯೂ ನೆರವು ನೀಡುವ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬುದನ್ನು ಪ್ರಸ್ತಾವದ ಮೂಲಕ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಕೋರಿದರು.

ಜಿಲ್ಲಾಡಳಿತದ ವತಿಯಿಂದ ಸರ್ಕಾರೇತರ ಸಂಸ್ಥೆಗಳು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ವಿಭಾಗ, ನಾಗರಿಕ ಸಮಾಜ ಸಂಸ್ಥೆಗಳು, ಉದಾರ ದಾನಿಗಳು ಹಾಗೂ ಇತರ ಪಾಲುದಾರರನ್ನು ಒಳಗೊಂಡ ಸಮಿತಿ ಸಭೆಯು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ‘ಕಳೆದ ಎರಡು ವರ್ಷಗಳಿಂದ ಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ನಷ್ಟವಾಗಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 1 ಲಕ್ಷ ಜನರು ಇದರಿಂದ ಬಾಧಿತರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಸಾವು– ನೋವು: 2018 ಹಾಗೂ 2019ರಲ್ಲಿ ಪ್ರಾಕೃತಿಕ ವಿಕೋಪದಿಂದ 40 ಮಂದಿ ಮೃತಪಟ್ಟಿದ್ದಾರೆ. 352 ಜಾನುವಾರುಗಳು ಮೃತಪಟ್ಟಿವೆ. ಸುಮಾರು 6,397 ಮನೆಗಳು, 265 ಅಂಗನವಾಡಿಗಳು, 239 ಶಾಲೆಗಳು ಹಾಗೂ 20 ಆರೋಗ್ಯ ಕೇಂದ್ರ ಕಟ್ಟಡಗಳು ಹಾನಿಗೊಳಗಾಗಿವೆ. ₹1,736 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ವಿವರಿಸಿದರು.

ಪ್ರಸ್ತುತ ದೀರ್ಘಾವಧಿ ಕೆಲಸಗಳ ಅಗತ್ಯತೆ ಕುರಿತು ಮಾಹಿತಿ ನೀಡಿದ ಅನೀಸ್ ಕಣ್ಮಣಿ, ‘ಶಾಲಾಮಟ್ಟದಲ್ಲಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಪ್ರಕೃತಿ ವಿಕೋಪದ ಮುನ್ನೆಚ್ಚರಿಕೆ ತರಬೇತಿ ನೀಡುವುದು, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಶಾಲೆಗಳಲ್ಲಿ ಮೂಲಸೌಕರ್ಯ ಒದಗಿಸುವುದು, ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ನಿರ್ವಹಿಸಬೇಕು’ ಎಂದು ತಿಳಿಸಿದರು.

ಕಳೆದ ವರ್ಷ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು, ಈ ವರ್ಷ ಮನೆ ಕಳೆದುಕೊಂಡವರಿಗೆ ಅವರ ಖಾತೆಗೆ ನೇರ ಹಣ ವರ್ಗಾವಣೆ ಮಾಡಿ ಮನೆ ಕಟ್ಟಿಕೊಳ್ಳಲು ನೆರವು ನೀಡಲು ಸಹಕರಿಸಲಾಗುತ್ತದೆ. ಈಗಾಗಲೇ ಜಿಲ್ಲೆಯ 14 ಸಾವಿರ ರೈತರಿಗೆ ಬೆಳೆ ಪರಿಹಾರ ಬಾಬ್ತು ₹57 ಕೋಟಿ ಪರಿಹಾರ ತಲುಪಿದೆ ಎಂದರು.

ಜಿಲ್ಲಾ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಂ.ಬಿ.ದೇವಯ್ಯ ಮಾತನಾಡಿ, ‘ಪ್ರಕೃತಿ ವಿಕೋಪದಿಂದ ಕಾವೇರಿ ನದಿ ಪಾತ್ರದಲ್ಲಿ ಮನೆ ಕಳೆದುಕೊಂಡವರಿಗೆ ಬದಲಿ ಜಾಗದಲ್ಲಿ ಮನೆ ನಿರ್ಮಾಣಕ್ಕೆ ‘ಸಿ’ ಮತ್ತು ‘ಡಿ’ ಜಾಗ ಮತ್ತು ಖಾಸಗಿ ಜಾಗ ಖರೀದಿಸಿ ಮನೆ ನಿರ್ಮಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ರೋಟರಿ ಅಧ್ಯಕ್ಷ ರತನ್ ತಮ್ಮಯ್ಯ ಮಾತನಾಡಿ, ‘ಅತಿವೃಷ್ಟಿಯಿಂದ ಭಾಗಶಃ ಹಾನಿಗೊಳಗಾದ ಮನೆಗಳಿಗೆ ಸರ್ಕಾರದಿಂದ ಇನ್ನಷ್ಟು ಸೌಲಭ್ಯಗಳು ಕಲ್ಪಿಸಬೇಕು. ಕಾವೇರಿ ನದಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಮರಳು ತೆರವು ಕಾರ್ಯಕ್ಕೆ ಮುಂದಾಗಬೇಕು’ ಎಂದು ಕೋರಿದರು.

ಕೊಡಗು ಸೇವಾ ಕೇಂದ್ರದ ಪ್ರಮೋದ್ ಮಾತನಾಡಿ, ‘ಲೋಕೋಪಯೋಗಿ ಇಲಾಖೆಯಿಂದ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಬದಿಯ ಮೋರಿಗಳಲ್ಲಿ ತುಂಬಿರುವ ಹೂಳು ತೆರವುಗೊಳಿಸಬೇಕು. ರಸ್ತೆ ನಿರ್ವಹಣೆಗೆ ಸರ್ಕಾರ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿ ವಿಶ್ವನಾಥ್‌ ಮಾತನಾಡಿ, ‘ಅತಿವೃಷ್ಟಿ ಉಂಟಾದ ಪ್ರದೇಶದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿಕೊಡಲು ಸಂಸ್ಥೆ ಮುಂದೆ ಬಂದಿದೆ. ಸೂಕ್ತ ಸ್ಥಳ ನೀಡಿದರೆ ಅಲ್ಲಿ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗುವುದು. ಕಾಫಿ ತೋಟ ಕಳೆದುಕೊಂಡವರಿಗೆ ಎಕರೆಗೆ ₹12 ಲಕ್ಷದಂತೆ ನಷ್ಟ ಪರಿಹಾರ ನೀಡಬೇಕು ಎಂದು ಕೋರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್‌, ಯುನಿಸೆಫ್ ಪ್ರತಿನಿಧಿ ಮನೋಹರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)