ಜಿಂಕೆ, ಕಾಡುಕುರಿ ಕೊಂಬು ಮಾರಾಟ ಯತ್ನ: ಬಂಧನ

ಶನಿವಾರಸಂತೆ: ಸಮೀಪದ ಕಿಬ್ಬೆಟ್ಟ ಗ್ರಾಮದ ಬಸ್ ತಂಗುದಾಣದ ಬಳಿ ಜಿಂಕೆ, ಕಾಡುಕುರಿಯ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕು ಸಿಐಡಿ ಅರಣ್ಯ ಘಟಕದ ಅಧಿಕಾರಿ ಎಂ.ಡಿ.ಅಪ್ಪಾಜಿ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಹಾಸನ ಜಿಲ್ಲೆಯ ಹೊಳೆನರಸೀಪುರದ ಫ್ಲೋರ್ ಮಿಲ್ ಆಪರೇಟರ್ ಆರೋಪಿ ಎಚ್.ಎಂ.ಪ್ರಮೋದ್ ಎಂಬಾತನನ್ನು ಬಂಧಿಸಿದ್ದಾರೆ. ಶನಿವಾರಸಂತೆ ಹೋಬಳಿಯ ನಿಡ್ತ ಕೊಪ್ಪಲು ಗ್ರಾಮದ ಎನ್.ಎನ್.ಯತೀಶ್ ಪರಾರಿಯಾದ ಆರೋಪಿ.
ಇಬ್ಬರೂ ಜಿಂಕೆ, ಕಾಡುಕುರಿಯ ಕೊಂಬುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಖಚಿತ ಮಾಹಿತಿ ಅನ್ವಯ ದಾಳಿ ನಡೆಸಿದ ಅರಣ್ಯ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಚೀಲದಲ್ಲಿದ್ದ ಕಾಡುಕುರಿ 1 ಹಾಗೂ ಜಿಂಕೆಯ 2 ಕೊಂಬುಗಳನ್ನು ಮತ್ತು ಸ್ಥಳದಲ್ಲಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ಘಟಕದ ಅಧಿಕಾರಿ ಎಂ.ಡಿ. ಅಪ್ಪಾಜಿ, ಹೆಡ್ ಕಾನ್ಸ್ಟೆಬಲ್ಗಳಾದ ಕೆ.ಎಸ್.ಚಂಗಪ್ಪ, ಎನ್.ಆರ್.ರಮೇಶ್, ಎನ್.ಎಂ.ಗಣೇಶ್, ಸಿಬ್ಬಂದಿ ಚಂದ್ರಶೇಖರ್, ಯೋಗೇಶ್ ಪಾಲ್ಗೊಂಡಿದ್ದರು.
ಸಿ.ಐ.ಡಿ.ಅರಣ್ಯ ಘಟಕದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.