ಬುಧವಾರ, ಜನವರಿ 29, 2020
29 °C
ತಪ್ಪಾದ ಅಕ್ಷರಗಳು, ಮುದ್ರಣ ದೋಷ, ಅಪೂರ್ಣ ಪ್ರಶ್ನೆಗಳು...

‘ತೆರೆದ ಪರೀಕ್ಷೆ'ಯಲ್ಲಿ ಶಿಕ್ಷಣ ಇಲಾಖೆ ಯಡವಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ‘ತೆರೆದ ಪುಸ್ತಕ’ ಪರೀಕ್ಷೆ ಗೊಂದಲದ ಗೂಡಾಗಿದೆ.

ವಿದ್ಯಾರ್ಥಿಗಳ ಸಾಮರ್ಥ್ಯ, ಜ್ಞಾನ ಗಳಿಕೆ ಹಾಗೂ ಪಠ್ಯಪುಸ್ತಕದ ವಿಚಾರಗಳನ್ನು ಸಮರ್ಥವಾಗಿ ಅಭ್ಯಾಸ ಮಾಡಿದ್ದಾರೆಯೇ? ಎಂಬುದನ್ನು ಅರಿಯಲು ‘ತೆರೆದ ಪುಸ್ತಕ ಪರೀಕ್ಷೆ’ಯನ್ನು ಜಿಲ್ಲಾಮಟ್ಟದಲ್ಲಿ ಆರಂಭಿಸಲಾಗಿದೆ. ಆದರೆ, ಈ ಪರೀಕ್ಷೆ ಉದ್ದೇಶ ಸಫಲಗೊಳಿಸುವಲ್ಲಿ ವಿಫಲವಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ವಿದ್ಯಾರ್ಥಿಗಳ ಸಾಮರ್ಥ್ಯ ಅರಿಯಲು ಆಂತರಿಕ ಮೌಲ್ಯಮಾಪನ ನಡೆಸಲು ಉದ್ದೇಶಿಸಲಾಗಿದೆ.

ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಿಂದ ರೂಪಣಾತ್ಮಕ ಮೌಲ್ಯಮಾಪನ ಹಾಗೂ ತೆರೆದ ಪುಸ್ತಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಜಿಲ್ಲಾ ಹಂತದಲ್ಲಿ ತಯಾರಾಗಿ ಎಲ್ಲ ಶಾಲೆಗಳ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತಿದೆ. ಇದನ್ನು ಆಯಾ ಶಾಲೆಯಲ್ಲಿ ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದು ವಿದ್ಯಾರ್ಥಿಗಳಿಗೆ ವಿತರಿಸಿ ಪರೀಕ್ಷೆ ಬರೆಸಬೇಕು. ಆದರೆ, ಬಹತೇಕ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಅನುದಾನದ ಕೊರತೆಯಿದೆ. ಇದರಿಂದ ಕೆಲವು ಶಾಲೆಯಲ್ಲಿ ಶಿಕ್ಷಕರು ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳನ್ನು ಬೋರ್ಡ್ ಮೇಲೆ ಬರೆದು ಪರೀಕ್ಷೆ ನಡೆಸುವಂತಾಗಿದೆ ಎಂದು ಕೆಲವು ಶಿಕ್ಷಕರ ಹೇಳಿದ್ದಾರೆ.

ಅಲ್ಲದೇ, ತೆರೆದ ಪುಸ್ತಕ ಪರೀಕ್ಷೆಯಲ್ಲಿ ಹಲವು ಲೋಪದೋಷಗಳು ಕಂಡುಬಂದಿವೆ. ತಪ್ಪಾದ ಅಕ್ಷರಗಳು, ಮುದ್ರಣ ದೋಷ, ಅಪೂರ್ಣ ಪ್ರಶ್ನೆಗಳು, ಪ್ರಶ್ನೆಗಳ ಸಂಖ್ಯೆಗಳನ್ನು ಸರಿಯಾಗಿ ನಮೂದು ಮಾಡದೇ ಇರುವುದು ಕಂಡುಬಂದಿದೆ.

ಐವತ್ತು ಅಂಕಗಳ ಹಿಂದಿ ಪ್ರಶ್ನೆ ಪತ್ರಿಕೆಯನ್ನು ಕೈಬರಹದ ಮೂಲಕ ಸಿದ್ಧಪಡಿಸಿ ಮೂರು ಪುಟಗಳನ್ನು ಬಳಸಿ ಪ್ರಶ್ನೆಯನ್ನು ತಯಾರಿಸಿಲಾಗಿದೆ. ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಚಿತ್ರಗಳು, ವರ್ಗಮೂಲ ಹಾಗೂ ಕೆಲವು ಸಂಕೇತಗಳನ್ನು ಕೈಯಲ್ಲಿ ಬರೆಯಲಾಗಿದೆ. ಕೈಬರಹದ ಪ್ರಶ್ನೆ ಪತ್ರಿಕೆ ತಯಾರು ಮಾಡಿ ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಲಾಗಿದೆ. ವಿಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ‘ಸುಣ್ಣದ ಕಲ್ಲು ಕಾಯಿಸಿದಾಗ...’ ಎನ್ನುವ ಪದದ ಬದಲಾಗಿ ‘ಸುಣ್ಣದ ಕಲ್ಲು ಸಾಯಿಸಿದಾಗ...’ ಎಂದು ಮುದ್ರಣಗೊಂಡಿದೆ. ತಪ್ಪಾಗಿ ಮುದ್ರಿತಗೊಂಡಿರುವ ಪ್ರಶ್ನೆಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿಯೂ ಪರೀಕ್ಷೆಯ ಭಯ ಮೂಡುವಂತಾಗಿದೆ ಎಂದು ಶಿಕ್ಷಕರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು