ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ವಿತರಣೆಗೆ ಬೋಪಯ್ಯ ತಾಕೀತು

ಮಡಿಕೇರಿ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆ
Last Updated 30 ಜೂನ್ 2018, 10:25 IST
ಅಕ್ಷರ ಗಾತ್ರ

ಮಡಿಕೇರಿ: ‘ಅರಣ್ಯ ಇಲಾಖೆಗೆ ನೀಡಿದ್ದ ಸಿ ಮತ್ತು ಡಿ ಭೂಮಿಯನ್ನು ವಾಪಸ್‌ ಪಡೆಯುವ ಸುತ್ತೋಲೆ ಹಲವು ತಿಂಗಳ ಹಿಂದೆಯೇ ಬಂದಿದ್ದು, ಅದರಲ್ಲಿ ನಿವೇಶನ ರಹಿತರಿಗೆ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ತಹಶೀಲ್ದಾರ್‌ ಕುಸುಮಾಗೆ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ‘ಅರಣ್ಯ ಇಲಾಖೆ ಮಾತಿಗೆ ಮನ್ನಣೆ ನೀಡದೇ ನಿವೇಶನ ವಿತರಣೆ ಮಾಡಬೇಕು; 2020ರ ವೇಳೆಗೆ ಎಲ್ಲರಿಗೂ ಮನೆ ಸಿಗಬೇಕು. ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆಯಲ್ಲಿ ನಿವೇಶನ ಕೊಡಬೇಕು’ ಎಂದು ತಾಕೀತು ಮಾಡಿದರು.
ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮಿ ಮಾತನಾಡಿ, ‘ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಇದುವರೆಗೆ 3 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ಮಾಹಿತಿ ನೀಡಿದರು.

ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನಂದ ಮಾತನಾಡಿ, ‘ಕಳೆದ ವರ್ಷ ಅರ್ಜಿ ಸಲ್ಲಿಸಿದ್ದವರಿಗೆ ಇನ್ನೂ ನಿವೇಶನ ವಿತರಿಸಿಲ್ಲ. ಮತ್ತೆ ಅರ್ಜಿ ಆಹ್ವಾನಿಸಿರುವ ಉದ್ದೇಶವೇನು? ಸ್ಮಶಾನವನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು ಕಳೆದ ಸಭೆಯಲ್ಲಿ ತೆರವಿಗೆ ಅಧ್ಯಕ್ಷರೇ ಆದೇಶ ನೀಡಿದ್ದರೂ ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ’ ಎಂದು ಆಪಾದಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಬೋಪಯ್ಯ, ‘ಒತ್ತುವರಿ ತೆರವಿಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

3 ಲಕ್ಷ ಸಸಿ: ಅರಣ್ಯ ಇಲಾಖೆಯು ರೈತರಿಗೆ ನೀಡಲು 3 ಲಕ್ಷ ಸಸಿ ಬೆಳೆಸಿದ್ದು 80 ಸಾವಿರ ಸಸಿಗಳ ವಿತರಣೆ ಮಾಡಲಾಗಿದೆ. 2 ಲಕ್ಷ ಸಿಲ್ವರ್‌, ಉಳಿದಂತೆ ಸಂಪಿಗೆ, ಬಳಂಜಿ, ನೇರಳೆ ಸಸಿ ಬೆಳೆಸಲಾಗಿದೆ. ಪ್ರತಿ ಸಸಿಗೆ ₨ 1 ನಿಗದಿ ಪಡಿಸಿದ್ದೇವೆ ಎಂದು ಸಭೆ ಅರಣ್ಯಾಧಿಕಾರಿ ತಿಳಿಸಿದರು. ಯಾವುದೇ ಕಾರಣಕ್ಕೆ ಅಕೇಶಿಯಾ ಬೆಳೆಸಬಾರದು ಎಂದು ಬೋಪಯ್ಯ ಸೂಚನೆ ನೀಡಿದರು.

ಕಂದಾಯ ನಿರೀಕ್ಷಕರ ವಿರುದ್ಧ ಆಪಾದನೆ: ಕಂದಾಯ ನಿರೀಕ್ಷಕರು ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಿದ್ದಾರೆ. 10 ಎಕರೆ ಜಮೀನು ಇದ್ದವರಿಗೆ ₨ 40 ಸಾವಿರ ಆದಾಯ ನಿಗದಿ ಮಾಡಿದ್ದಾರೆ. ಅದೇ ಮೂರು ಗುಂಟೆ ಜಾಗ ಉಳ್ಳವರಿಗೆ ₨ 4 ಲಕ್ಷ ನಿಗದಿ ಪಡಿಸಿದ್ದಾರೆ. ಇದ್ಯಾಕೆ ಈ ರೀತಿಯ ತಾರತಮ್ಯ ಎಂಬ ಆರೋಪಗಳು ಸಭೆಯಲ್ಲಿ ವ್ಯಕ್ತವಾದವು.

ವೈದ್ಯರ ಕೊರತೆ: ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ತಜ್ಞ ವೈದ್ಯರ ಕೊರತೆಯಿದೆ. ಕರಿಕೆ ಆಸ್ಪತ್ರೆಗೆ ಎಂಬಿಬಿಎಸ್‌ ವೈದ್ಯರು ಸಿಗುತ್ತಿಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ಪಾರ್ವತಿ ಸಭೆಯ ಗಮನಕ್ಕೆ ತಂದರು. ಆಯುಷ್‌ ಇಲಾಖೆಯಲ್ಲಿ ಔಷಧಿಯ ದಾಸ್ತಾನು ಇದ್ದರೂ, ವೈದ್ಯರ ಕೊರತೆಯಿದೆ ಎಂದು ಅಧಿಕಾರಿಗಳು ಹೇಳಿದರು.

ಗೊಬ್ಬರ ಸಮಸ್ಯೆ ಇಲ್ಲ: ತಾಲ್ಲೂಕು ವ್ಯಾಪ್ತಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಡಿಎಪಿ, ಕಾಂಪ್ಲೆಕ್ಸ್‌ ಸೇರಿದಂತೆ ರೈತರಿಗೆ ಅಗತ್ಯವಿರುವ ಗೊಬ್ಬರ ದಾಸ್ತಾನು ಇದೆ ಎಂದು ಸಹಾಯಕ ಕೃಷಿ ಅಧಿಕಾರಿ ಮಂಜುನಾಥ್‌ ಹೇಳಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್‌, ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಹಾಜರಿದ್ದರು.

ಗಮನಕ್ಕೆ ಬಾರದ ತಪ್ಪು ಮಾಹಿತಿ!
ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ಅಧಿಕಾರಿ ಮಂಜುನಾಥ್‌, ಈ ಬಾರಿ ಮಳೆ ಹೆಚ್ಚಾಗಿದೆ; ಕಳೆದ ವರ್ಷ ಇದೇ ವೇಳೆಗೆ 30 ಮಿ.ಮೀ. ಮಳೆಯಾಗಿತ್ತು. ಈ ಬಾರಿ 65 ಮಿ.ಮೀ. ಮಳೆಯಾಗಿದೆ ಎಂದರು. ಆರು ತಿಂಗಳ ಮಾಹಿತಿ ಹೇಳುವ ಬದಲಿಗೆ ಯಾವುದೋ ಒಂದು ದಿನದ ಮಾಹಿತಿ ನೀಡಿ ಪೇಚಿಗೆ ಸಿಲುಕಿದರು. ವೇದಿಕೆಯ ಮೇಲಿದ್ದವರ ಗಮನಕ್ಕೂ ಅದು ಬರಲಿಲ್ಲ. ವಾಸ್ತವದಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ 1,819.39 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 911.90 ಮಿ.ಮೀ. ಮಳೆ ಸುರಿದಿತ್ತು.

ಗ್ರಾಮೀಣ ಭಾಗದಲ್ಲಿ ಮನೆ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೀಟ್ ವ್ಯವಸ್ಥೆ ಹೆಚ್ಚಿಸಬೇಕು. ಅಪರಾಧ ಪ್ರಕರಣಗಳು ಹೆಚ್ಚಾಗದಂತೆ ನಿಗಾ ವಹಿಸಬೇಕು
– ಕೆ.ಜಿ. ಬೋಪಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT