ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲಾ ಕೇಂದ್ರದಲ್ಲಿಲ್ಲ ಡಾ.ಅಂಬೇಡ್ಕರ್ ಪ್ರತಿಮೆ!

ಸಮಾಜ ಕಲ್ಯಾಣ ಇಲಾಖೆ ವತಿಯ ಅಂಬೇಡ್ಕರ್ ಭವನವೂ ಮಡಿಕೇರಿಯಲ್ಲಿಲ್ಲ
Published 14 ಏಪ್ರಿಲ್ 2024, 7:13 IST
Last Updated 14 ಏಪ್ರಿಲ್ 2024, 7:13 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯಾಗಲಿ, ಸಮಾಜ‌ ಕಲ್ಯಾಣ ಇಲಾಖೆಗೆ ಸೇರಿದ‌ ಡಾ.ಬಿ.ಆರ್.ಅಂಬೇಡ್ಕರ್ ಭವನವಾಗಲಿ ಇಲ್ಲ.

ರಾಜ್ಯದ ಬೇರೆ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಅಂಬೇಡ್ಕರ್ ಭವನ, ಪ್ರತಿಮೆಗಳಿವೆ. ಆದರೆ, ಕೊಡಗು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಅಂಬೇಡ್ಕರ್ ಅವರ ನೆನಪನ್ನು ಚಿರಸ್ಥಾಯಿಯಾಗಿಸುವ ಭವನ, ಪ್ರತಿಮೆ ಇಲ್ಲ. ಸದ್ಯ ಇರುವ ಅಂಬೇಡ್ಕರ್ ಭವನ ಸಮಾಜ ಕಲ್ಯಾಣ ಇಲಾಖೆಗೆ ಸೇರಿಲ್ಲ. ಖಾಸಗಿಯಾಗಿ ಈ ಭವನವನ್ನು ನಿರ್ವಹಣೆ ಮಾಡಲಾಗುತ್ತಿದೆ. ಇನ್ನು ಅಂಬೇಡ್ಕರ್ ಅವರ ಪ್ರತಿಮೆಯಂತೂ ಮಡಿಕೇರಿಯಲ್ಲಿ ಎಲ್ಲೂ ಇಲ್ಲ.

5 ತಾಲ್ಲೂಕುಗಳ ಪೈಕಿ 2ರಲ್ಲಿ ಮಾತ್ರ ಭವನ!: ಕೊಡಗು ಜಿಲ್ಲೆಯಲ್ಲಿರುವ ಒಟ್ಟು 5 ತಾಲ್ಲೂಕುಗಳ ಪೈಕಿ ಕೇವಲ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕುಗಳಲ್ಲಿ ಮಾತ್ರವೇ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಅಂಬೇಡ್ಕರ್ ಭವನಗಳಿವೆ. ಉಳಿದಂತೆ, ಹಳೆಯ ತಾಲ್ಲೂಕು ಎನಿಸಿದ ಮಡಿಕೇರಿ ಹಾಗೂ ಹೊಸ ತಾಲ್ಲೂಕು ಎನಿಸಿದ ಕುಶಾಲನಗರ ಹಾಗೂ ಪೊನ್ನಂಪೇಟೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಅಂಬೇಡ್ಕರ್ ಭವನ ಇಲ್ಲ. ಸೋಮವಾರಪೇಟೆಯಲ್ಲಿ ಮಾತ್ರವೇ ಅಂಬೇಡ್ಕರ್ ಪುತ್ಥಳಿ ಇದೆ. ಉಳಿದಂತೆ, ಪ್ರತಿಮೆ ಕೂಡಾ ಎಲ್ಲೂ ಇಲ್ಲ.

ಭವನ, ಪ್ರತಿಮೆ ಬೇಕು: ದಲಿತ ಸಂಘರ್ಷ ಸಮಿತಿ ಮಾತ್ರವಲ್ಲ ಜನಸಾಮಾನ್ಯರೂ ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಭವನ ನಿರ್ಮಾಣ ಆಗಬೇಕು ಎಂದು ಒತ್ತಾಯಿಸುತ್ತಾರೆ. ಆದರೆ, ಇಲ್ಲಿಯವರೆಗೆ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಂಭೀರ ಯತ್ನ ನಡೆಸಿಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ‘ಜಿಲ್ಲಾಡಳಿತವು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಬದ್ಧವಾಗಿದೆ. ಮಡಿಕೇರಿ ನಗರದ ಅಂಬೇಡ್ಕರ್ ಭವನದ ಬಳಿ ಸುದರ್ಶನ ವೃತ್ತಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸುವ ಸಂಬಂಧ ಪ್ರಸ್ತಾವವಿದ್ದು, ಇದಕ್ಕೆ ಸಮುದಾಯದ ವಿವಿಧ ಮುಖಂಡರ ಹಂತದಲ್ಲಿ ಸಭೆ ನಡೆಸಿ, ಒಮ್ಮತದ ತೀರ್ಮಾನ ಕೈಗೊಂಡು ಜಾಗ ಅಂತಿಮಗೊಳಿಸುವ ಸಂಬಂಧ ಒಪ್ಪಿಗೆ ಪತ್ರವನ್ನು ಲಿಖಿತ ರೂಪದಲ್ಲಿ ಜಿಲ್ಲಾಡಳಿತಕ್ಕೆ ನೀಡಿದ ಪಕ್ಷದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಬಗ್ಗೆ ನಿಯಮಾನುಸಾರ ಕ್ರಮ ವಹಿಸಲಾಗುವುದು' ಎಂದರು.

ಕೊಡಗು ಜಿಲ್ಲಾ ಕೇಂದ್ರದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ನಾನು ಪ್ರತಿ ಸಭೆಯಲ್ಲೂ ಪ್ರಸ್ತಾಪಿಸಿರುವೆ ಒತ್ತಾಯಿಸಿರುವೆ. ಕೂಡಲೇ ಜಿಲ್ಲಾಡಳಿತ ಈ ಕುರಿತ ಕ್ರಮ ಕೈಗೊಳ್ಳಬೇಕು
ದಿವಾಕರ್ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ)

ಪ್ರತಿಮೆ ಭವನ ಕಲಿಕೆಯ ತಾಣವಾಗಲಿ

ಡಾ.ಬಿ.ಆರ್.ಅಂಬೇಡ್ಕರ್ ಭವನ ಅಥವಾ ಪ್ರತಿಮೆಗಳು ಭೌತಿಕ ಸ್ವರೂಪದ ರಚನೆಗಳಾಗದೆ ಅವು ಅಂಬೇಡ್ಕರ್ ಕುರಿತ ಜ್ಞಾನವನ್ನು ಹೆಚ್ಚಿಸುವ ತಾಣವಾಗಬೇಕು.‌ ಅವರು ಬರೆದ ಪುಸ್ತಕಗಳ ಪ್ರದರ್ಶನ‌ ಮಾರಾಟ ಹಾಗೂ ಅವರ ಸಿದ್ಧಾಂತಗಳ ಕುರಿತ ಅರಿವಿನ ಕೇಂದ್ರಗಳಾಗಬೇಕು ಎಂದು ಜನಸಾಮಾನ್ಯರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT