ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಕಾಡಾನೆ ದಾಳಿಗೆ ಮತ್ತೊಬ್ಬ ಸಾವು

ಮೂರೂವರೆ ತಿಂಗಳಿನಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ
Published 16 ಏಪ್ರಿಲ್ 2024, 6:10 IST
Last Updated 16 ಏಪ್ರಿಲ್ 2024, 6:10 IST
ಅಕ್ಷರ ಗಾತ್ರ

ಮಡಿಕೇರಿ: ಜನವರಿಯಿಂದ ಇಲ್ಲಿಯವರೆಗೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದೆ. ಇವುಗಳಲ್ಲಿ 3 ಸಾವು ಕೇವಲ 30 ದಿನಗಳಲ್ಲಿ ಸಂಭವಿಸಿದ್ದು, ಕೊಡಗು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಪೊನ್ನಂಪೇಟೆ ತಾಲ್ಲೂಕಿನ ಬೀರುಗ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕಾಡಾನೆ ದಾಳಿಗೆ ಸ್ಥಳದಲ್ಲೇ ಮೃತಪಟ್ಟ ಅಯ್ಯಮಾಡ ಮಾದಯ್ಯ (63) ಅವರ ಸಾವು ಸ್ಥಳೀಯರ ಹೃದಯಗಳನ್ನು ಅಕ್ಷರಶಃ ಕಲುಕಿದವು. ಬೆಂಗಳೂರಿನಲ್ಲಿ ವಾಸವಿದ್ದ ಇವರು ಬೀರುಗ ಗ್ರಾಮದಲ್ಲಿ ನೂತನವಾಗಿ ಕಟ್ಟಿಸಿದ್ದ ಮನೆಯ ಗೃಹಪ್ರವೇಶಕ್ಕೆ ಕರೆಯಲು ಶನಿವಾರವಷ್ಟೇ ಬಂದಿದ್ದರು. ಮುಂದಿನ ವಾರವಷ್ಟೇ ಇವರ ಮನೆಯ ಗೃಹಪ್ರವೇಶವಿತ್ತು. ಸೋದರನ ಮನೆಯಲ್ಲಿ ತಂಗಿದ್ದ ಮಾದಯ್ಯ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದಾಗ ಕಾಡಾನೆಯೊಂದು ದಾಳಿ ನಡೆಸಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರುತ್ತಿದ್ದಂತೆ ಸ್ಥಳೀಯರ ಆಕ್ರೋಶದ ಕಟ್ಟೆ ಒಡೆಯಿತು. ‘ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗೆ ನಾಚಿಕೆ ಇಲ್ಲ’ ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು.

‘ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ಉದ್ಯೋಗಿ ಆನೆ ದಾಳಿಯಿಂದ ಮೃತಪ‍ಟ್ಟರೆ ₹ 50 ಲಕ್ಷ ಹಣ ಪರಿಹಾರ ಸಿಗುತ್ತದೆ. ಈ ಜೀವ ಬೇರೆ, ನಿಮ್ಮ ಜೀವ ಬೇರೆಯೇ’ ಎಂದೂ ಪ್ರಶ್ನಿಸಿದರು.

‘ಒಂದೂವರೆ ವರ್ಷದಿಂದ ಈ ಕಾಡಾನೆ ದಾಳಿ ನಡೆಸುತ್ತಿದೆ. ಸುಮಾರು 30ರಿಂದ 40 ಕಾಡಾನೆಗಳು ಇಲ್ಲಿಯೇ ಸುತ್ತುತ್ತಿವೆ. 5ರಿಂದ 6 ಒಂಟಿ ಸಲಗಗಳೇ ಅಲೆಯುತ್ತಿವೆ. ಇವೆಲ್ಲವೂ ಗೊತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಕಿಡಿಕಾರಿದರು.

ಸ್ಥಳಕ್ಕೆ ಬಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ಕುಮಾರ್ ತ್ರಿಪಾಠಿ ಸ್ಥಳೀಯರ ಮನವೊಲಿಸುವ ಪ್ರಯತ್ನ ಮಾಡಿದರು. ಪರಿಹಾರ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು, ಕಾಡಾನೆಗಳನ್ನು ಕಾಡಿಗೆ ಓಡಿಸಲಾಗುವುದು, ಮತ್ತೆ ಮತ್ತೆ ಬರುವ ಕಾಡಾನೆಯನ್ನು ಸೆರೆ ಹಿಡಿಯಲು ಪ್ರಸ್ತಾವ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಮೃತ ಅಯ್ಯಮಾಡ ಮಾದಯ್ಯ ಅವರ ಪುತ್ರಿ ಪ್ರತಿಕ್ರಿಯಿಸಿ, ‘ಇಂತಹ ಸಾವು ಇನ್ನು ಯಾರ ಮನೆಯಲ್ಲೂ ಸಂಭವಿಸಬಾರದು. ನಮ್ಮ ಮನೆಯ ಆಧಾರ ಸ್ಥಂಭವನ್ನೇ ಕಳೆದುಕೊಂಡಿದ್ದೇವೆ’ ಎಂದು ಕಣ್ಣೀರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT