ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಕಾಡಾನೆ ಹಾವಳಿ; ‌ಚಾಲಕರಿಗೆ ಹಲಸು ಉಚಿತ!

Published 4 ಜುಲೈ 2023, 6:38 IST
Last Updated 4 ಜುಲೈ 2023, 6:38 IST
ಅಕ್ಷರ ಗಾತ್ರ

ಶರಣ್ ಎಚ್.ಎಸ್.

ಶನಿವಾರಸಂತೆ: ಕಾಡಾನೆ ದಾಳಿಯಿಂದ ಉಂಟಾದ ನಷ್ಟದಿಂದ ಬೇಸತ್ತಿರುವ ಇಲ್ಲಿನ ರೈತರು ತಮ್ಮ ತೋಟದಲ್ಲಿರುವ ಹಲಸಿನ ಹಣ್ಣನ್ನು, ಹೊರಜಿಲ್ಲೆಯಿಂದ ಬರುವ ‌ಸರಕು ಸಾಗಣೆ ವಾಹನ ಚಾಲಕರಿಗೆ ಉಚಿತವಾಗಿ ಹಂಚಲಾರಂಭಿಸಿದ್ದಾರೆ. ಪಡೆದವರು ತಮ್ಮೂರುಗಳಲ್ಲಿ ಅವುಗಳನ್ನು ಮಾರಿ ಲಾಭ ಗಳಿಸುತ್ತಿದ್ದಾರೆ.

ಇಲ್ಲಿನ ಕಾಫಿ ತೋಟಗಳಲ್ಲಿರುವ ಹಲಸಿನ ಮರಗಳಲ್ಲಿ ಕಳಿತ ಹಣ್ಣಿನ ಸುವಾಸನೆ ಕಾಡಾನೆಗಳನ್ನು ಸೆಳೆಯುತ್ತದೆ. ಕಾಡುಕೋಣ ಹಾಗೂ ಕಾಡೆಮ್ಮೆಗಳೂ ಬಂದು, ಹಲಸನ್ನಷ್ಟೇ ಅಲ್ಲದೆ. ತೋಟದ ಇತರೆ ಬೆಳೆಗಳನ್ನೂ ನಾಶಪಡಿಸುತ್ತಿವೆ. 

ಹೀಗಾಗಿ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಹಾಗೂ ತಮಿಳುನಾಡಿನ ಮಾರಾಟಗಾರರಿಗೆ ರೈತರು ಹಲಸನ್ನು ಉಚಿತವಾಗಿ ಕೊಡುತ್ತಿದ್ದಾರೆ.

‘ಕಳೆದ ವಾರ ನಮ್ಮ ಕಾಫಿ ತೋಟಕ್ಕೆ ರಸಗೊಬ್ಬರ ಹಾಕಲು ಕಾರ್ಮಿಕರೊಂದಿಗೆ ಹೋದಾಗ ಹಲಸಿನ ಮರದ ಹತ್ತಿರವಿದ್ದ ಕಾಡೆಮ್ಮೆಯು ಕಾರ್ಮಿಕರ ಎದುರಿಗೇ ಜಿಗಿದು ಓಡಿ ಹೋಗಿತ್ತು. ನಾವೆಲ್ಲರೂ ಓಡಿ ಸ್ವಲ್ಪದರಲ್ಲೇ ದೊಡ್ಡ ಅಪಾಯದಿಂದ ಪಾರಾದೆವು’ ಎಂದು  ಚಿಕ್ಕಾರ ಗ್ರಾಮದ ಹೇಮಂತ್ ಸ್ಮರಿಸಿದರು.

‘ಹಲಸಿನಿಂದ ತೊಂದರೆಯಾಗುತ್ತದೆ ಎಂಬ ಕಾರಣಕ್ಕೇ ನಮ್ಮ ತೋಟದ ಕಾಯಿಗಳನ್ನು ಉಚಿತವಾಗಿ ಕೊಂಡೊಯ್ಯುವಂತೆ ಮಾರಾಟಗಾರರಿಗೆ ಹೇಳಿರುವೆ’ ಎಂದು ‘‍ಪ್ರಜಾವಾಣಿ’ಗೆ ತಿಳಿಸಿದರು.

ಉಚಿತ ಹಣ್ಣಿನ ಮಾರಾಟ!:

ದಾವಣಗೆರೆಯಿಂದ ಸೋಮವಾರ ಪೇಟೆ ಭಾಗಕ್ಕೆ ಅವಲಕ್ಕಿ ಮತ್ತು ದಿನಸಿ ಪದಾರ್ಥಗಳನ್ನು ತರುವ ಚಾಲಕರು ಉಚಿತವಾಗಿ ದೊರಕಿದ ಹಲಸಿನ ಕಾಯಿಗಳನ್ನು ತಮ್ಮೂರಿಗೆ ಒಯ್ದು ಕಾಯೊಂದಕ್ಕೆ ₹100ರಿಂದ ₹150ರ ದರದಲ್ಲಿ ಮಾರಿ ಆದಾಯ ಗಳಿಸುತ್ತಿದ್ದಾರೆ. ಇನ್ನೂ ಕೆಲವರು ಬೆಂಗಳೂರಿನ ಆಹಾರ ತಯಾರಿಕಾ ಕೈಗಾರಿಕೆ, ಹೋಟೆಲ್‌ಗಳಿಗೆ ಮಾರುತ್ತಿದ್ದಾರೆ.

ಹಲಸಿನ ಚಿಪ್ಸ್, ಹಪ್ಪಳ, ಉಪ್ಪಿನಕಾಯಿ, ಸಾಂಬಾರು, ಪಲ್ಯ, ಕಬಾಬ್ ತಯಾರಿಸಲು ಅವುಗಳನ್ನು ಬಳಸಲಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ. ‌

ಕೊಡಗು ಜಿಲ್ಲೆಯ ಶನಿವಾರಸಂತೆ ಭಾಗದಲ್ಲಿ ರೈತರು ತಮ್ಮ ತೋಟಗಳಲ್ಲಿರುವ ಹಲಸಿನ ಕಾಯಿ, ಹಣ್ಣುಗಳನ್ನು ಉಚಿತವಾಗಿ ವಾಹನಗಳ ಚಾಲಕರಿಗೆ ನೀಡಿರುವುದು
ಕೊಡಗು ಜಿಲ್ಲೆಯ ಶನಿವಾರಸಂತೆ ಭಾಗದಲ್ಲಿ ರೈತರು ತಮ್ಮ ತೋಟಗಳಲ್ಲಿರುವ ಹಲಸಿನ ಕಾಯಿ, ಹಣ್ಣುಗಳನ್ನು ಉಚಿತವಾಗಿ ವಾಹನಗಳ ಚಾಲಕರಿಗೆ ನೀಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT