ಕುಶಾಲನಗರ: ‘ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರು ನಮ್ಮ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು’ ಜಾನಪದ ಪರಿಷತ್ ಜಿಲ್ಲಾ ಖಜಾಂಚಿ ಸಂಪತ್ ಕುಮಾರ್ ಸರಳಾಯ ಹೇಳಿದರು.
ಸಮೀಪದ ಕಣಿವೆ ರಾಮಲಿಂಗೇಶ್ವರ ರಥೋತ್ಸವ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ದೇವಾಲಯ ಸಮಿತಿ ವತಿಯಿಂದ ನಡೆದ ಹಳ್ಳಿ ಹಬ್ಬ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅವರು, ಕಲೆಗಳ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಿಗೆ ಜಾನಪದ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ಜನಪದೀಯ ಪ್ರತಿಭೆಗಳನ್ನು ಹುಡುಕಿ ಗೌರವಿಸುವ ಕೆಲಸ ಪರಿಷತ್ತು ಮೂಲಕ ನಡೆಯುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಿಯಾಂಕ ಗಂಗಾಧರಪ್ಪ ಮಾತನಾಡಿ, ‘ನಿರಂತರ ಕಾರ್ಯಕ್ರಮ ಚಟುವಟಿಕೆಗಳ ಮೂಲಕ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ. ಕ್ರೀಡೆಯ ಮೂಲಕ ಪರಸ್ಪರ ಉತ್ತಮ ಬಾಂಧವ್ಯ ವೃದ್ಧಿಯಾಗಲು ಸಾಧ್ಯ’ ಎಂದು ಹೇಳಿದರು.
ಕಣಿವೆ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಭಾರದ್ವಾಜ ಕೆ ಆನಂದತೀರ್ಥ, ಪರಿಷತ್ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಟಿ.ಅನಿಲ್, ಕುಶಾಲನಗರ ತಾಲ್ಲೂಕು ಘಟಕ ಅಧ್ಯಕ್ಷ ಎಂ.ಎನ್ ಚಂದ್ರಮೋಹನ್, ಗೌರವಾಧ್ಯಕ್ಷೆ ಫ್ಯಾನ್ಸಿ ಮುತ್ತಣ್ಣ, ಸಂಯೋಜಕಿ ವನಿತಾ ಚಂದ್ರಮೋಹನ್, ಕಣಿವೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕರುಂಬಯ್ಯ ಉಪಸ್ಥಿರಿದರು. ಕೊಡಗನ ಹರ್ಷ ಸ್ವಾಗತಿಸಿದರು.
ಗಮನ ಸೆಳೆದ ಗ್ರಾಮೀಣ ಆಟ: ಹಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ್ದ ಗ್ರಾಮೀಣ ಕ್ರೀಡೆಗಳು ಎಲ್ಲಾರ ಗಮನ ಸೆಳೆದವು.ಕುಂಟೆಬಿಲ್ಲೆ, ಗೋಣಿಚೀಲ ಕಟ್ಟಿ ಓಟ, ಕಣ್ಣು ಮುಚ್ಚಾಲೆ, ಎರಡು ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ತೆಂಗಿನಕಾಯಿ ಒಡೆಯುವುದು, ಬುಗರಿ ಆಟ, ಸೈಕಲ್ ಟೈರ್ ಆಟ, ಕೆರೆ- ದಡ ಆಟ, ಸೂಜಿಗೆ ದಾರ ಪೋಣಿಸುತ್ತ ಓಡುವುದು, ಮ್ಯೂಸಿಕಲ್ ಚೇರ್, ಮಡಕೆ ಒಡೆಯುವುದು, ಕಪ್ಪೆ ಓಟ ಸ್ಪರ್ಧೆಗಳು ನಡೆದವು.
ಸ್ಥಳೀಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು, ಪರಿಷತ್ ಸದಸ್ಯರು ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇಂದು ಸಮಾರೋಪ: ಸಮಾರೋಪ ಸಮಾರಂಭ ಶ್ರೀ ರಾಮಲಿಂಗೇಶ್ವರ ದೇವಾಲಯ ಆವರಣದಲ್ಲಿ ಮಾರ್ಚ್ 30ರಂದು ಸಂಜೆ 6.30ಕ್ಕೆ ನಡೆಯಲಿದ್ದು ಜಾನಪದ ಸಂಭ್ರಮ ಹಾಗೂ ಬಹುಮಾನ ವಿತರಣೆ ನಡೆಯಲಿದೆ.
ಜಿಲ್ಲಾಧಿಕಾರಿ ಡಾ ಸತೀಶ್ ಕುಮಾರ್, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ ಜಿ ಅನಂತಶಯನ, ಜಯಶ್ರೀ ಅನಂತಶಯನ ದೇವಾಲಯ ಸಮಿತಿ ಅಧ್ಯಕ್ಷ ಕೆ ಎನ್ ಸುರೇಶ್ ಪಾಲ್ಗೊಳ್ಳಲಿದ್ದಾರೆ. ವಿಜೇತರಿಗೆ ಬಹುಮಾನ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.