ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ : ಬೇಸಿಗೆ ಬೆಳೆಗೆ ನೀರು ಹರಿಸಲು ರೈತರ ಒತ್ತಾಯ

ಶಿರಂಗಾಲ ಪ್ರಥಮ ಜನಸ್ಪಂದನ ಸಭೆ; ಹಾರಂಗಿ ಜಲಾಶಯದಿಂದ
Last Updated 15 ಫೆಬ್ರುವರಿ 2020, 14:38 IST
ಅಕ್ಷರ ಗಾತ್ರ

ಕುಶಾಲನಗರ: ಉತ್ತರ ಕೊಡಗಿನ ಗಡಿಭಾಗದ ರೈತರು ತುಂಡು ಹಿಡುವಾಳಿದರರಾಗಿದ್ದು, ಹಾರಂಗಿ ಜಲಾಶಯದಿಂದ ಗಡಿಭಾಗ ನಲ್ಲೂರಿನಲ್ಲಿರುವ ಕೊನೆಯ ತುಂಬಿನವರೆಗೆ ಬೇಸಿಗೆ ಬೆಳೆಗೆ ನೀರು ಪೂರೈಸುವ ಉದ್ದೇಶದಿಂದ ₹17 ಲಕ್ಷ ವೆಚ್ಚದಲ್ಲಿ ಗೇಟು ನಿರ್ಮಾಣ ಮಾಡಲಾಗಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಬೇಸಿಗೆ ಬೆಳೆಗೆ ನೀರು ಹರಿಸುತ್ತಿಲ್ಲ. ಇದರಿಂದ ಈ ಭಾಗದ ರೈತರಿಗೆ ತುಂಬ ಅನ್ಯಾಯವಾಗಿದೆ ಎಂದು ಜನಸ್ಪಂದನ ಸಭೆಯಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ವತಿಯಿಂದ ಶನಿವಾರ ಜಿಲ್ಲೆಯ ಗಡಿಗ್ರಾಮ ಶಿರಂಗಾಲದ ನಾಮಧಾರಿ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ಪ್ರಥಮ ಜನಸ್ಪಂದನ ಸಭೆಯಲ್ಲಿ ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಕಿವಿಯಾದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಸಿ.ಎನ್.ಲೋಕೇಶ್, ರೈತ ಸಂಘದ ಅಧ್ಯಕ್ಷ ಜವರಪ್ಪ, ಕೊಡಗು ಜಿಲ್ಲೆಯಲ್ಲಿ ಹಾರಂಗಿ ಅಣೆಕಟ್ಟೆ ನಿರ್ಮಾಣವಾದರೂ ಕೂಡ ಇಲ್ಲಿನ ರೈತರ ಕೃಷಿ ಚಟುವಟಿಕೆಗೆ ಸಮರ್ಪಕ ನೀರಾವರಿ ವ್ಯವಸ್ಥೆ ಇಲ್ಲ. ಇದರಿಂದ ಈ ಭಾಗದ ರೈತರು, ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದ್ದರಿಂದ ಈ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬೇಸಿಗೆ ಬೆಳೆಗೆ ನೀರು ಪೂರೈಸುವ‌ ಮೂಲಕ ರೈತರ ಕೃಷಿಗೆ ಹಾಗೂ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್ ಮಾತನಾಡಿ, ಕಳೆದ ಆಗಸ್ಟ್ ನಲ್ಲಿ ನೆರೆ ಪ್ರವಾಹದಿಂದ ಸಂಗ್ರಹವಾಗಿದ್ದ ಮರಳನ್ನು ಹೊರ ಜಿಲ್ಲೆಗೆ ಸಾಗಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಕೊಡಗು ಜಿಲ್ಲೆಯಲ್ಲಿ ಸೀಮಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಸಾಲುಕೊಪ್ಪಲು ಗ್ರಾಮಕ್ಕೆ ಹೋಗುವ ರಸ್ತೆಯನ್ನು ಅತಿ ಕ್ರಮಿಸಿ ಕೊಂಡಿದ್ದು, ಕೂಡಲೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸ್ಮಶಾನಕ್ಕೆ ಜಾಗ ಮಂಜೂರು ಮಾಡಿ: ಗ್ರಾಮದ ದಲಿತ ಸಮುದಾಯಕ್ಕೆ ಶವಸಂಸ್ಕಾರಕ್ಕೆ ಜಾಗದ ಕೊರತೆಯಿದ್ದು, ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಕೊಡಬೇಕು ಎಂದು ದಲಿತ ಮುಖಂಡರು ಮನವಿ ಮಾಡಿದರು. ಸರ್ಕಾರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಆಶಾ ಮಾತನಾಡಿ, ಶಾಲೆಗೆ ತಡೆಗೋಡೆ, ಮೈದಾನ ಸಮತಟ್ಟು ಹಾಗೂ ಊಟದ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಗ್ರಾ.ಪಂ.ವತಿಯಿಂದ ಈ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಪಿಡಿಒ ಹರೀಶ್ ಸೂಚನೆ ನೀಡಿದರು.

ನಿವೃತ್ತ ಮುಖ್ಯ ಶಿಕ್ಷಕ ರಾಜಶೇಖರ್ ಗ್ರಾಮದ ಹಿನ್ನೆಲೆಯಲ್ಲಿ ಕುರಿತು ಮಾಹಿತಿ ನೀಡಿದರು. ಜನಸ್ಪಂದನ ಹರಿಬಂದ ಜನಸಾಗರದಿಂದ ನೂರಾರು ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಿದರು.

ಖಾತೆ ವರ್ಗಾವಣೆ, ಪಿಂಚಣಿ ಸೌಲಭ್ಯ, ರಸ್ತೆ ಅಭಿವೃದ್ಧಿ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಮ್ಮುಖದಲ್ಲಿ ಅಹವಾಲನ್ನು ಸಲ್ಲಿಸಿದರು. ನೂರಾರು ಅರ್ಜಿಗಳು ಸ್ವೀಕರಿಸಿದ ಅಧಿಕಾರಿಗಳು ಮುಂದಿನ ಒಂದು ತಿಂಗಳ ಒಳಗೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಉಪ ವಿಭಾಗಾಧಿಕಾರಿ ಜವರೇಗೌಡ ಮಾತನಾಡಿ, ಕಂದಾಯ ಇಲಾಖೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಸಭೆ ಏರ್ಪಡಿಸಲಾಗಿದೆ.ಆರ್.ಟಿ.ಸಿ.ವರ್ಗಾವಣೆ, ಪೋಡಿ ಸಮಸ್ಯೆ, ಆರ್.ಟಿ.ಸಿ.ದೋಷ, ಅರ್ಹವ್ಯಕ್ತಿಗಳಿಗೆ ಸರ್ಕಾರಿ ಸೌಲಭ್ಯಗಳಿಂದ ವಂಚಿತಗೊಂಡಿದ್ದರೆ ಈ ಕುರಿತು ಅರ್ಜಿ ಸಲ್ಲಿಸಿದರೆ ಮುಂದಿನ ಒಂದು ತಿಂಗಳ ಒಳಗೆ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯತಿ ಸದಸ್ಯ ಎನ್.ಎಸ್.ಜಯಣ್ಣ, ಜಿ.ಪಂ.ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್, ಭೂಮಾಪನ ಇಲಾಖೆ ಡಿಡಿಎಲ್ಆರ್ ಶ್ರೀನಿವಾಸ್, ತಹಶೀಲ್ದಾರ್ ಗೋವಿಂದರಾಜ್, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಸುನೀಲ್,ಕೃಷಿ ಇಲಾಖೆಯ ಸಹಾಯ ನಿರ್ದೇಶಕ ಎಚ್.ಎಸ್.ರಾಜಶೇಖರ್, ಜಿ.ಪಂ.ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಮಹೇಂದ್ರ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ‌ ನಿರ್ದೇಶಕ ಶೇಖರ್ ,ಕಂದಾಯ ನಿರೀಕ್ಷ ಮಧು,ಗ್ರಾ.ಪಂ.ಪಿಡಿಓ ಎಚ್.ಡಿ.ಹರೀಶ್, ಗ್ರಾ.ಪಂ.ಸದಸ್ಯರು,ದೇವಸ್ಥಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ತಾಲ್ಲೂಕು ಅಧಿಕಾರಿ ಉಮೇಶ್ ನಿರೂಪಿಸಿದರು.ಉಪ ತಹಶೀಲ್ದಾರ್ ಚಿಣ್ಣಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT