ಹಾರಂಗಿ ಜಲಾಶಯ ಭರ್ತಿ: ನಾಲ್ಕು ಗೇಟ್‌ನಲ್ಲಿ ಧುಮ್ಮಿಕ್ಕಿದ ನೀರು

7
ರೈತರ ಮೊಗದಲ್ಲಿ ಹರ್ಷ

ಹಾರಂಗಿ ಜಲಾಶಯ ಭರ್ತಿ: ನಾಲ್ಕು ಗೇಟ್‌ನಲ್ಲಿ ಧುಮ್ಮಿಕ್ಕಿದ ನೀರು

Published:
Updated:

ಕುಶಾಲನಗರ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಶನಿವಾರ ಸಂಜೆ ಜಲಾಶಯದ ನಾಲ್ಕು ಕ್ರಸ್ಟ್‌ಗೇಟ್‌ಗಳಿಂದ ನದಿಗೆ ನೀರು ಹರಿಬಿಡಲಾಯಿತು.

ಕೆಆರ್‌ಎಸ್ ಜಲಾಶಯದ ಪ್ರಮುಖ ಜಲಸಂಪನ್ಮೂಲವಾದ ಹಾರಂಗಿ ಜಲಾಶಯವು ಪ್ರಸಕ್ತ ಸಾಲಿನಲ್ಲಿ ಭರ್ತಿಯಾದ ಮೊದಲ ಜಲಾಶಯವೆನಿಸಿದೆ.

ಜಲಾಶಯದ ಗರಿಷ್ಠಮಟ್ಟ 2,859 ಅಡಿ ಇದ್ದು ಜಲಾಶಯದ ಇಂದಿನ ನೀರಿನಮಟ್ಟ ಸಂಜೆ 5 ಗಂಟೆ ವೇಳೆಗೆ 2,856 ಅಡಿ ಇತ್ತು. ಜಲಾಶಯಕ್ಕೆ 24,470 ಕ್ಯುಸೆಕ್‌ ಒಳಹರಿವು ಇತ್ತು.

ಜಲಾಶಯಕ್ಕೆ ಶನಿವಾರ ಸಂಜೆ 4.30 ಗಂಟೆಗೆ ಅರ್ಚಕ ಗಣಪತಿ ಹೆಗಡೆ ಅವರು ನೀರಾವರಿ ಅಧಿಕಾರಿಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದ ನಂತರ ನಾಲ್ಕು ಗೇಟ್‌ಗಳನ್ನು ತೆರೆಯಲಾಯಿತು.

ಜಲಾಶಯದಿಂದ 1,200 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಒಳಹರಿವಿನ ಪ್ರಮಾಣವನ್ನು ಆಧರಿಸಿ ಹಂತ ಹಂತವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನೀರಾವರಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಪ್ರಸಾದ್ ತಿಳಿಸಿದರು.

ಜುಲೈ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆ ನಂತರ ರೈತ ಕಾಲುವೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಜಲಾಶಯದ ಭದ್ರತೆ ದೃಷ್ಟಿಯಿಂದ ನೀರಿನ ಮಟ್ಟವನ್ನು 2,856 ಅಡಿಗಳಿಗೆ ಕಾಯ್ದಿರಿಸಿ ನೀರು ಹರಿಸಲಾಗುತ್ತಿದೆ. ನದಿಪಾತ್ರದ ಜನರ ಸುರಕ್ಷತೆ ದೃಷ್ಟಿಯಿಂದ ಮೊದಲ ಹಂತವಾಗಿ 1,200 ಕ್ಯುಸೆಕ್‌ ನೀರನ್ನು ಮಾತ್ರ ನದಿಗೆ ಹರಿಬಿಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹಾಗೂ ಒಳಹರಿವಿನ ಪ್ರಮಾಣ ಆಧರಿಸಿ ನೀರು ಬೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ್ ತಿಳಿಸಿದರು.

8.5 ಟಿಎಂಸಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಇದೀಗ 7.251 ಟಿಎಂಸಿಗಳಷ್ಟು ನೀರು ಶೇಖರಣೆಯಾಗಿದೆ.

ಜಲಾಶಯದಿಂದ ನೀರು ಬಿಟ್ಟ ವಿಷಯ ತಿಳಿದ ಸುತ್ತಮುತ್ತಲಿನ ಜನರು ಹಾಗೂ ಪ್ರವಾಸಿಗರು ಅಣೆಕಟ್ಟೆ ಬಳಿ ಬಂದು ವೀಕ್ಷಿಸಿ ಸಂಭ್ರಮಿಸಿದರು. ಜಲಾಶಯದ ಕ್ರಸ್ಟ್‌ಗೇಟ್‌ಗಳ ಮೂಲಕ ಹಾಲ್ನೊರೆಯಂತೆ ಧುಮ್ಮಿಕ್ಕುವ ನೀರಿನ ದೃಶ್ಯ ನಯನ ಮನೋಹರವಾಗಿತ್ತು.

ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮವಾಗಿ ಮಳೆ ಆಗುತ್ತಿರುವ ಹಿನ್ನೆಲೆ ಜಲಾಶಯ ಭರ್ತಿಯಾಗಿದೆ. ಅಚ್ಚುಕಟ್ಟು ವ್ಯಾಪ್ತಿಯ ರೈತರು ಹರ್ಷಚಿತ್ತರಾಗಿದ್ದಾರೆ. ಕಳೆದ ವರ್ಷ ಜಲಾಶಯವು ಜುಲೈ 23ರಂದು ಭರ್ತಿಯಾಗಿತ್ತು. ಈ ವರ್ಷ ಜಿಲ್ಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ 16 ದಿನಗಳು ಮುಂಚಿತವಾಗಿ ಜುಲೈ ಮೊದಲ ವಾರದಲ್ಲಿಯೇ ಜಲಾಶಯ ಭರ್ತಿಗೊಂಡಿದೆ.

ಹಾರಂಗಿ ಜಲಾಶಯದಿಂದ ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಮತ್ತು ಕೆ.ಆರ್. ನಗರ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಸೇರಿದಂತೆ 1,34,895 ಎಕರೆ ಪ್ರದೇಶಕ್ಕೆ ನೀರು ಪೂರೈಸಲಾಗುತ್ತಿದೆ. ಹಾರಂಗಿ ಜಲಾಶಯದಿಂದ ಹರಿಯುವ ನೀರು ಕೂಡಿಗೆ ಬಳಿ ಹಾರಂಗಿ ನದಿ ಮೂಲಕ ಕಾವೇರಿ ನದಿ ಸೇರಿ ನಂತರ ಕೃಷ್ಣರಾಜ ಸಾಗರವನ್ನು ಸೇರಲಿದೆ.

ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರಾಜೇಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ್, ಎಂಜಿನಿಯರ್ ನಾಗರಾಜು, ಗೇಟ್ ರೀಡರ್ ಗಿರೀಶ್, ನೀರು ಬಳಕೆದಾರರ ಸಂಘದ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.


ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದೆ.

 

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 3

  Frustrated
 • 0

  Angry

Comments:

0 comments

Write the first review for this !