ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಬ್ಬರಿಸಿ ತಣ್ಣಗಾದ ಮಳೆ; ಮುಂದುವರಿದ ಮುನ್ಸೂಚನೆ

ಬೀಸುತ್ತಿದೆ ಶೀತಗಾಳಿ, ಕೃಷಿ ಕಾರ್ಯಕ್ಕೆ ಮುಂದಾದ ರೈತರು
Published 28 ಜೂನ್ 2024, 3:26 IST
Last Updated 28 ಜೂನ್ 2024, 3:26 IST
ಅಕ್ಷರ ಗಾತ್ರ

ಮಡಿಕೇರಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ ಅಬ್ಬರಿಸಿದ ಮಳೆ ಗುರುವಾರ ಇಡೀ ದಿನ ತಣ್ಣಗಾಯಿತು. ಒಂದೇ ರಾತ್ರಿ ಒಂದೇ ಸಮನೆ ಸುರಿದ ಮಳೆ ಶೀತಮಯ ವಾತಾವರಣ ಸೃಷ್ಟಿಸಿ, ಜನರು ಥರಗುಟ್ಟುವಂತೆ ಮಾಡಿತು.

ಬಲವಾಗಿ ಬೀಸುತ್ತಿದ್ದ ಶೀತ ಗಾಳಿ, ದಟ್ಟವಾಗಿ ಕವಿದ ಮೋಡಗಳು, ಆವರಿಸಿದ ಮಂಜಿನಿಂದ ಮಡಿಕೇರಿಯಲ್ಲಿ ಇಡೀ ದಿನ ಮಂದ ಬೆಳಕು ಇತ್ತು. ಸೂರ್ಯ ಒಂದು ಇಣುಕಿಯೂ ಹಾಕದೇ ಒಂದು ಬಗೆಯಲ್ಲಿ ಹಿಂಜಿದಂತಹ ಅನುಭವವನ್ನು ನೀಡಿದ. ಇದರ ನಡುವೆ ಜನರು ತಮ್ಮ ದೈನಂದಿನ ಕೆಲಸಗಳಿಗೆ ಹೊರಟರು. ರೈತರೂ ತಮ್ಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಅತ್ತ ಭಾಗಮಂಡಲದ ಘಟ್ಟ ಪ್ರದೇಶದಲ್ಲೂ ಮಳೆ ಗುರುವಾರ ಇಳಿಮುಖವಾಗಿತ್ತು. ಆದರೆ, ಬುಧವಾರ ಆರ್ಭಟಿಸಿದ ಮಳೆಯ ನೀರು ಇನ್ನೂ ತಗ್ಗಿರಲಿಲ್ಲ. ತ್ರಿವೇಣಿ ಸಂಗಮ, ನೂತನ ಉದ್ಯಾನ ಜಲಾವೃತವಾಗಿಯೇ ಇತ್ತು.

ಮತ್ತೊಂದು ಕಡೆ ದಕ್ಷಿಣ ಕೊಡಗಿನಲ್ಲೂ ಧಾರಾಕಾರ ಮಳೆ ಸುರಿದಿದ್ದರಿಂದ ಅಲ್ಲಿನ ಲಕ್ಷ್ಮಣತೀರ್ಥ, ಕೀರೆಹೊಳೆ ಸೇರಿದಂತೆ ಹೊಳೆಗಳೆಲ್ಲವೂ ಮೈದುಂಬಿ ಹರಿಯ ತೊಡಗಿದವು. ಇತ್ತ ಕುಶಾಲನಗರದಲ್ಲಿ ಮಳೆ ಕಡಿಮೆಯಾಗಿದ್ದರೂ ಬೆಟ್ಟ, ಗುಡ್ಡ ಪ್ರದೇಶದಲ್ಲಿ ಬಿರುಸಿನ ಮಳೆಯಾಗಿದ್ದರಿಂದ ಕಾವೇರಿ ನದಿ ನೀರಿನ ಮಟ್ಟವೂ ಏರಿಕೆಯಾಯಿತು.

ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದಲ್ಲಿ, ತ್ಯಾಗರಾಜ ಕಾಲೊನಿಯಲ್ಲಿ, ರಾಜಾಸೀಟ್ ಉದ್ಯಾನದ ಒಂದು ಬದಿಯಲ್ಲಿ ಮಣ್ಣು ಕುಸಿತದಂತಹ ಘಟನೆಗಳು ನಡೆದವು. ತಕ್ಷವೇ ಸ್ಪಂದಿಸಿದ ಮಡಿಕೇರಿ ನಗರಸಭೆ ಸಿಬ್ಬಂದಿ ಮಣ್ಣು ತೆರವುಗೊಳಿಸಿದರು. ಪೌರಾಯುಕ್ತ ವಿಜಯ್ ಹಾಗೂ ಪರಿಸರ ಎಂಜಿನಿಯರ್ ಸೌಮ್ಯಾ ಸೇರಿದಂತೆ ಅಧಿಕಾರಿಗಳ ತಂಡ ಮಣ್ಣು ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಮಳೆಯ ಪ್ರಮಾಣ ತಗ್ಗಿತ್ತು. ಬುಧವಾರ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂದ ಎಮ್ಮೆಮಾಡು ಗ್ರಾಮದ ಅಬ್ದುಲ್ ಹಫೀಲ್ ಅವರ ಮನೆಯ ಹಿಂಭಾಗದ ಬರೆ ಕುಸಿದು ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ತೆರಳಿ ಪರಿಶೀಲನೆ ನಡೆಸಿದರು.

ಕೊಯನಾಡಿನ ಶಾಲೆಯ ಮೇಲೆ ಕಲ್ಲು, ಮಣ್ಣುಗಳು ಕುಸಿದಿದ್ದು, 6ನೇ ತರಗತಿಯ ಕೊಠಡಿಗೆ ಹಾನಿಯಾಗಿದೆ. ರಜೆ ಇದ್ದುದ್ದರಿಂದ ಮಕ್ಕಳಿಗೆ ಯಾವುದೇ ಅಪಾಯವಾಗಿಲ್ಲ.

ವಿರಾಜಪೇಟೆಯಲ್ಲಿ ಇಳಿಮುಖವಾದ ಮಳೆ

ವಿರಾಜಪೇಟೆ: ಕಳೆದ ಎರಡು ಮೂರು ದಿನಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಮಳೆಯು ಗುರುವಾರ ಇಳಿಮುಖಗೊಂಡಿದೆ.

ಬುಧವಾರ ದಿನವಿಡಿ ಸುರಿದ ಮಳೆಯು ರಾತ್ರಿಯಾಗುತ್ತಿದ್ದಂತೆ ಹೆಚ್ಚಿನ ಬಿರುಸು ಪಡೆದುಕೊಂಡಿತು. ಬುಧವಾರ ರಾತ್ರಿಯಿಡಿ ಧಾರಾಕಾರವಾಗಿ ಮಳೆ ಸುರಿಯಿತು. ನದಿ ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ವಿಶೇಷವಾಗಿ ಸಮೀಪದ ಕದನೂರು ಹಾಗೂ ಭೇತ್ರಿಯಲ್ಲಿನ ಕಾವೇರಿ ಹೊಳೆಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಉಂಟಾಗಿದೆ.

ಮಳೆಯಿಂದಾಗಿ ಸಮೀಪದ ಕದನೂರು ಹಾಗೂ ಅರಮೇರಿ ಗ್ರಾಮಗಳ ವ್ಯಾಪ್ತಿಯಲ್ಲಿನ ಭತ್ತದ ಗದ್ದೆಗಳು ಜಲಾವೃತಗೊಂಡಿತ್ತು.

ಮಳೆ ಬಿರುಸುಗೊಂಡಿರುವುದರಿಂದ ಭತ್ತದ ಕೃಷಿಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಸಮೀಪದ ಕೆದಮುಳ್ಳೂರು ಗ್ರಾಮದ ಕೋಟೋಳಿ ನಿವಾಸಿ ಸರಸು ಹಾಗೂ ಬಾಡಗದ ಕಂಡಂಗಾಲ ಗ್ರಾಮದ ಮಾಣಿರ ಗಂಗಮ್ಮ ಅವರ ಮನೆ ಎಂಬುವವರ ಮನೆ ಮಳೆಯಿಂದ ಕುಸಿದಿದ್ದು ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಕಂದಾಯ ಪರಿವೀಕ್ಷಕ ಹರೀಶ್ ಮಾಹಿತಿ ನೀಡಿದ್ದಾರೆ.

ಸಿದ್ದಾಪುರದಲ್ಲಿ ತಪ್ಪಿದ ಅಪಾಯ

ಸಿದ್ದಾಪುರ: ಇಲ್ಲಿಗೆ ಸಮೀಪದ ಹೊಸಕೋಟೆ ಗ್ರಾಮದಲ್ಲಿ ಮರವೊಂದು ಬಿದ್ದು, ವಿದ್ಯುತ್ ತಂತಿ ತುಂಡಾಗಿ ಕಾರಿಗೆ ಹಾನಿಯಾಗಿದೆ. ಆದರೆ, ಈ ಕಾರಿನಲ್ಲಿ ಮಕ್ಕಳಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ.

ಅಮ್ಮತ್ತಿ ಸಮೀಪದ ಹೊಸಕೋಟೆ ಗ್ರಾಮದ ನಿವಾಸಿ ಐಮಣಿಯಂಡ ನವೀನ್ ಬುಧವಾರ ಸಂಜೆ ಎಂದಿನಂತೆ ಶಾಲೆಯಿಂದ ಮಕ್ಕಳನ್ನು ಮನೆಗೆ ತಮ್ಮ ಕಾರಿನಲ್ಲಿ ಕರೆತರುತ್ತಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿರುವ ಮರವೊಂದು ಬಿಳುತ್ತಿದ್ದು, ತಕ್ಷಣ ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ಮರವು ರಸ್ತೆಗೆ ಉರುಳಿದ್ದು, ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ. ವಾಹನ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಮಳೆಯಿಂದಾಗಿ ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದ ಅಬ್ದುಲ್ ಹಫೀಲ್  ಅವರ ಮನೆಯ ಹಿಂಭಾಗದ ಬರೆ ಕುಸಿದು ಹಾನಿ ಸಂಭವಿಸಿದೆ.
ಮಳೆಯಿಂದಾಗಿ ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದ ಅಬ್ದುಲ್ ಹಫೀಲ್  ಅವರ ಮನೆಯ ಹಿಂಭಾಗದ ಬರೆ ಕುಸಿದು ಹಾನಿ ಸಂಭವಿಸಿದೆ.
ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದ ಕೋಟೋಳಿ ನಿವಾಸಿ ಸರಸು ಎಂಬುವವರ ಮನೆಗೆ ಹಾನಿಯಾಗಿದೆ
ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದ ಕೋಟೋಳಿ ನಿವಾಸಿ ಸರಸು ಎಂಬುವವರ ಮನೆಗೆ ಹಾನಿಯಾಗಿದೆ

ದಕ್ಷಿಣ ಕೊಡಗಿನಲ್ಲಿ ತುಂಬಿ ಹರಿದ ತೊರೆ ತೋಡುಗಳು

ಗೋಣಿಕೊಪ್ಪಲು: ಮುಂಗಾರು ಮಳೆಯ ನಿರಂತರ ಓಟಕ್ಕೆ ದಕ್ಷಿಣ ಕೊಡಗಿನ ತೊರೆ ತೋಡುಗಳು ಮೈದುಂಬಿ ಹರಿಯುತ್ತಿವೆ. ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನ ನದಿಗಳಾದ ಲಕ್ಷ್ಮಣತೀರ್ಥ ಕಕ್ಕಟ್ಟುಹೊಳೆ ಬರಪೊಳೆ ಆಡುಗುಂಡಿ ಹೊಳೆ ಕೀರೆಹೊಳೆ ಮೊದಲಾದವು ಮೈದುಂಬಿಕೊಂಡು ಗಾಂಭೀರ್ಯದಿಂದ ಹರಿಯುತ್ತಿವೆ. ಶ್ರೀಮಂಗಲ ಕುಟ್ಟ ಕುರ್ಚಿ ಬಳಿಯ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಉತ್ತಮ ಮಳೆ ಬೀಳುತ್ತಿರುವುದರಿಂದ ಇರ್ಪುಜಲಪಾತ ಭೋರ್ಗರೆಯುತ್ತಿದೆ. ಬಂಡೆ ಕಲ್ಲುಗಳ ನಡುವೆ ಹಾಲ್ನೊರೆ ಚೆಲ್ಲುತ್ತಾ ಧುಮ್ಮಿಕ್ಕುವ ಜಲಪಾತದ ಸೊಬಗು ನೋಡುಗರ ಮನೆ ಸೆಳೆಯುತ್ತಿದೆ. ಈ ಜಲಪಾತದ ನೀರು ಮುಂದೆ ನದಿ ಸೇರಿ ಲಕ್ಷ್ಮಣತೀರ್ಥವಾಗುತ್ತದೆ. ಈ ನದಿ ಪೂಜೆಕಲ್ಲು ಶ್ರೀಮಂಗಲ ಹರಿಹರಬಲ್ಯಮಂಡೂರು ಕಾನೂರು ಮಾರ್ಗವಾಗಿ ಬಾಳೆಲೆ ನಿಟ್ಟೂರು ಭಾಗದಲ್ಲಿ ಗದ್ದೆ ಬಯಲಿಗೆ ಹರಡಿ ಸಾಗರದಂತೆ ಕಂಡು ಬರುತ್ತಿದೆ. ಬಿ.ಶೆಟ್ಟಿಗೇರಿ ಬಳಿಯ ಕಕ್ಕಟ್ಟುಹೊಳೆ ಬರಪೊಳೆಗಳೂ ಕೂಡ ರಭಸದಿಂದ ಹರಿಯುತ್ತಿವೆ. ಅಮ್ಮತ್ತಿ ಗೋಣಿಕೊಪ್ಪಲು ಕಿರುಗೂರು ನಲ್ಲೂರು ಭಾಗದ ಕೀರೆಹೊಳೆಯೂ ಕೂಡ ತುಂಬಿ ಹರಿಯುತ್ತಿದೆ. ಕೋಣನಕಟ್ಟೆ ರಾಜಾಪುರ ದೇವನೂರು ಭಾಗದ ಕೀರೆಹೊಳೆಯೂ ಮೈ ದುಂಬಿಕೊಂಡಿದೆ. ಹಳ್ಳದ ಗದ್ದೆಗಳು ತುಂಬಿ ಜಲಾವೃತಗೊಂಡಿವೆ. ಕಾಲುವೆ ಮೂಲಕ ನೀರನ್ನು ಹೊರಹಾಕಿ ಕೆಲವರು ಗದ್ದೆಗಳನ್ನು ಉಳುಮೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಬೀಜ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT