ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರಿ ವಾಹನ ನಿಷೇಧಿಸಿ, ರಸ್ತೆ ಉಳಿಸಿ

ನಿಷೇಧ ಇದ್ದರೂ ಭಾರಿ ವಾಹನ ಸಂಚಾರ; ಬಿಳಿಗೇರಿ ಗ್ರಾಮದ ಕೆಲವು ಬೆಳೆಗಾರರ ಆರೋಪ
Published 10 ಜುಲೈ 2024, 5:39 IST
Last Updated 10 ಜುಲೈ 2024, 5:39 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಮಳೆಗಾಲ ಮುಗಿಯುವವರೆಗೂ ಕಟ್ಟುನಿಟ್ಟಾಗಿ ತಡೆದು, ಗ್ರಾಮೀಣ ರಸ್ತೆಗಳನ್ನು ರಕ್ಷಿಸಬೇಕು ಎಂದು ಬೆಳೆಗಾರರಾದ ಬಿಳಿಗೇರಿ ಗ್ರಾಮದ ಮಂಞ್ಙೀರ ಉಮೇಶ್ ಅಪ್ಪಣ್ಣ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದರೆ, ಅದು ಇನ್ನೂ ಜಾರಿಯಾಗಿಲ್ಲ. ಒಮ್ಮೆ ಜಿಲ್ಲೆಯ ಗ್ರಾಮೀಣ ರಸ್ತೆಗಳಲ್ಲಿ ಹೋಗಿ ಬಂದರೆ ಭಾರಿ ವಾಹನಗಳ ಸಂಚಾರವನ್ನು ನೋಡಬಹುದು ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಹತ್ತು ಚಕ್ರಗಳ ಬೃಹತ್ ವಾಹನಗಳು ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸಿ ರಸ್ತೆಗಳನ್ನು ಹಾಳುಗೆಡಹುತ್ತಿದೆ. ಇದರಿಂದ ಕೊಡಗು ಜಿಲ್ಲೆಯ ರಸ್ತೆಗಳು ಪದೇ ಪದೇ ದುರಾವಸ್ಥೆಗೆ ಒಳಗಾಗುತ್ತಿವೆ. ಜನಪ್ರತಿನಿಧಿಗಳೂ ಇದರತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

‘ಟಿಂಬರ್ ಮಾಫಿಯಾ’ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ವಾಹನಗಳ ಮೇಲೆ ನಿಗದಿಪಡಿಸಿದಕ್ಕಿಂತಲೂ ಹೆಚ್ಚು ಭಾರ ಹಾಕಿ ಸಾಗಾಣಿಕೆ ಮಾಡಲಾಗುತ್ತಿದೆ. ಭಾರಿ ಗಾತ್ರದ ವಾಹನಗಳು ಕಿರಿದಾದ ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸುವಾಗ ದ್ವಿಚಕ್ರ ವಾಹನ ಸವಾರರು ಜೀವ ಕೈಲಿಡಿದು ವಾಹನ ಚಾಲನೆ ಮಾಡಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂತಹ ವಾಹನಗಳ ಸಂಚಾರದಿಂದಾಗಿ ಬಿಳಿಗೇರಿ ಗ್ರಾಮದ ರಸ್ತೆಯು ಹಾಳಾಗುತ್ತಿದೆ. ಗುಂಡಿಗಳು ನಿರ್ಮಾಣವಾಗುತ್ತಿವೆ. ಸರ್ಕಾರ ರಸ್ತೆ ದುರಸ್ತಿ ಮಾಡಿಸಿರುವುದು, ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಿರ್ಮಾಣ ಚಟುವಟಿಕೆಗಳನ್ನೂ ಮಳೆಗಾಲದಲ್ಲಿ ತಡೆಯಬೇಕು. ಜೆಸಿಬಿಯನ್ನು ಕೇವಲ ತುರ್ತು ಕೆಲಸಗಳಿಗೆ ಮಾತ್ರವೇ ಬಳಸಬೇಕು. ಯಾವುದೇ ಕಾರಣಕ್ಕೂ ತುರ್ತು ಕೆಲಸ ಬಿಟ್ಟು, ಅನ್ಯ ಉದ್ದೇಶಗಳಿಗೆ ಮಳೆಗಾಲ ಸಂದರ್ಭದಲ್ಲಿ ಬಳಸಲೇಬಾರದು ಎಂದು ಆಗ್ರಹಿಸಿದರು.

ಬೆಳೆಗಾರರಾದ ತುಂತಜೆ ತಿಮ್ಮಯ್ಯ, ಪ‍ರ್ಲಕೋಟಿ ಮಾಚಯ್ಯ, ಕೋಟೇರ ಶರಿ ಮುದ್ದಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT