ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ: ದೇವಿ ದರ್ಶನ, ಮದ್ದುಗುಂಡುಗಳ ಪ್ರದರ್ಶನ

ಶಿರಂಗಾಲ: ಶ್ರೀ ಮಂಟಿಗಮ್ಮದೇವಿಯ ಜಾತ್ರೋತ್ಸವ ಸಂಭ್ರಮ
Last Updated 11 ಮಾರ್ಚ್ 2023, 4:43 IST
ಅಕ್ಷರ ಗಾತ್ರ

ಕುಶಾಲನಗರ: ಉತ್ತರ ಕೊಡಗಿನ ಗಡಿ ಗ್ರಾಮ ಶಿರಂಗಾಲ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ದೇವಿಯ ದ್ವೈವಾರ್ಷಿಕ ಜಾತ್ರೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಶ್ರೀ ಮಂಟಿಗಮ್ಮ ದೇವಾಲಯ ಸಮಿತಿಯಿಂದ 2 ವರ್ಷಗೊಳಿಗೊಮ್ಮೆ ಶಕ್ತಿ ದೇವತೆ ಮಂಟಿಗಮ್ಮ ದೇವಿಯ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸಿದರು.

ಕೊಡಗು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮೀಣ ಭಾಗದ ಅತಿ ದೊಡ್ಡ ಜಾತ್ರೆಗಳಲ್ಲಿ ಶ್ರೀ ಮಂಟಿಗಮ್ಮ ದೇವಿಯ ಉತ್ಸವ ಒಂದಾಗಿದ್ದು, ಸಾವಿರಾರು ಭಕ್ತಾರು ಪಾಲ್ಗೊಂಡಿದ್ದರು.

ಗ್ರಾಮದ ಕೋಟೆಯ ಗದ್ದಿಗೆಯಲ್ಲಿ ರಾತ್ರಿ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತಾದಿಗಳು ತಮಟೆ ಮತ್ತು ಮಂಗಳವಾದ್ಯದೊಂದಿಗೆ ಪವಿತ್ರ ಬನಕ್ಕೆ ದೇವಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ದೇವಿಯ ಬನದಲ್ಲಿ ಹಾಕಿದ ಅಗ್ನಿಕೊಂಡವನ್ನು ಹರಕೆ ಹೊತ್ತ ಭಕ್ತಾದಿಗಳು ತುಳಿದು ದೇವರ ದರ್ಶನ ಪಡೆದರು.

ಸಂತೆಮಾಳ ಮೈದಾನದಲ್ಲಿ ಏರ್ಪಡಿಸಿದ್ದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಎಲ್ಲರ ಗಮನ‌ ಸೆಳೆಯಿತು. ದೇವಸ್ಥಾನ ಮತ್ತು ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು.

ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಪ್ಪ ಮತ್ತು ಕಾರ್ಯದರ್ಶಿ ಎಸ್.ಎಸ್.ಮಹೇಶ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ಗಳು ನೆರವೇರಿದವು. ದೇವಾಲಯದ ಪ್ರಧಾನ ಅರ್ಚಕ ಚಂದ್ರಪ್ಪ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ಬನದಲ್ಲಿ ಸೇರಿದ್ದ ಜಾತ್ರೆ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಕೆ.ಪ್ರಸನ್ನ, ಹಣಕಾಸು ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಕಾರ್ಯದರ್ಶಿ ಬಿ.ಎಸ್.ಬಸವಣ್ಣಯ್ಯ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಅಭಿಲಾಷ್, ಮುಖಂಡರಾದ ಎಂ.ಎಸ್.ಗಣೇಶ್, ಸಿ.ಎನ್.ಲೋಕೇಶ್, ಚೇತನ್, ಬಿ.ಬಿ.ಲೋಕೇಶ್, ಎಸ್.ವಿ.ಕಾಳಿಂಗಪ್ಪ, ಎಸ್.ಇ.ರಾಜು, ಹುಚ್ಚಯ್ಯ, ಎಸ್.ಆರ್.ಮೋಹನ್, ಸಿ.ಎನ್.ಲೋಕೇಶ್, ಸುಮೇಶ್, ಧನುಕುಮಾರ್ ಎಸ್.ಎನ್.ಚಂದ್ರಪ್ಪ ಇದ್ದರು.
13 ರಂದು ರಥೋತ್ಸವ: ಶ್ರೀ ಉಮಾಮಹೇಶ್ವರ ಸ್ವಾಮಿಯ ರಥೋತ್ಸವ ಮಾ.13 ರಂದು ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಮಂಗಳವಾದ್ಯ ಹಾಗೂ ಪೂಜಾ ಕುಣಿತ, ನಂದಿಧ್ವಜ ಕುಣಿತ, ವೀರಭದ್ರೇಶ್ವರ ಕುಣಿತ, ಕಂಸಾಳೆ, ಕೀಲು ಕುದುರೆಗಳೊಂದಿಗೆ ಶ್ರೀ ಉಮಾಮಹೇಶ್ವರ ರಥೋತ್ಸವ ಜರುಗಲಿದೆ.

15 ರಂದು ಸಂಜೆ 6ಕ್ಕೆ ತೆಪ್ಪೋತ್ಸವ ನಡೆಯಲಿದ್ದು, ಮೂಡಲುಕೊಪ್ಪಲು, ನಲ್ಲೂರುಕೊಪ್ಪಲು, ಸಾಲುಕೊಪ್ಪಲು, ಶಿರಂಗಾಲ ಗೇಟ್, ಮಣಜೂರು, ಶಿರಂಗಾಲ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿದ ನಂತರ ಕಾವೇರಿ ನದಿಯಲ್ಲಿ ತೆಪ್ಪೋತ್ಸವ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT