ಬುಧವಾರ, ಮಾರ್ಚ್ 29, 2023
31 °C
ಎಪಿಎಂಸಿ ಆವರಣದಲ್ಲಿ ನೂತನ ತಾಲ್ಲೂಕು ಉದ್ಘಾಟಿಸಿದ ಸಚಿವ ಆರ್.ಅಶೋಕ

ಕುಶಾಲನಗರ ತಾಲ್ಲೂಕು: ಅಧಿಕೃತ ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಐದನೇ ತಾಲ್ಲೂಕಾಗಿ ರಚನೆಗೊಂಡಿರುವ ಕುಶಾಲನಗರ ತಾಲ್ಲೂಕಿನ ಅಧಿಕೃತ ಕಾರ್ಯಾರಂಭಕ್ಕೆ ಮಂಗಳವಾರ ಕಂದಾಯ ಸಚಿವ ಆರ್.ಅಶೋಕ ಚಾಲನೆ ನೀಡಿದರು.

ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ವತಿಯಿಂದ ಇಲ್ಲಿನ ಎಪಿಎಂಸಿ ಆವರಣದಲ್ಲಿ ಆಯೋ ಜಿಸಿದ್ದ ನೂತನ ತಾಲ್ಲೂಕು ಉದ್ಘಾಟನಾ ಸಮಾರಂ ಭದಲ್ಲಿ ಅವರು ಮಾತನಾಡಿದರು.

‘ಕಾವೇರಿ ನೀರು ಕುಡಿದು ಬದುಕುತ್ತಿದ್ದೇವೆ. ಈ ತಾಯಿಯ ಋಣ ತೀರಿಸಲು ಕುಶಾಲನಗರ ಹಾಗೂ ಪೊನ್ನಂಪೇಟೆ ನೂತನ
ತಾಲ್ಲೂಕುಗಳನ್ನು ರಚನೆ ಮಾಡಿ 2020ರ ಡಿ.31ರಂದು ಅಧಿಸೂಚನೆ ಹೊರಡಿಸಿದ್ದೇನೆ’ ಎಂದರು.

‘ಶಾಸಕ ಅಪ್ಪಚ್ಚುರಂಜನ್ ಹಾಗೂ ಸಂಸದ ಪ್ರತಾಪ್ ಸಿಂಹ, ಜಿ.ಪಂ. ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ತಾಲ್ಲೂಕು ರಚನೆಗೆ ಒತ್ತಾಯಿಸಿದ್ದರು. ರಂಜನ್ ನಮ್ಮ ಕಚೇರಿಗೆ 30ಕ್ಕೂ ಹೆಚ್ಚು ಬಾರಿ ಬಂದು ಮನವಿ ಸಲ್ಲಿಸಿದ್ದರು. ತಾಲ್ಲೂಕು ರಚನೆಗೆ ಮೂಲ ಕಾರಣ ಅವರೇ’ ಎಂದು ಹೇಳಿದರು.

‘ನೂತನ ತಾಲ್ಲೂಕು ರಚನೆ ಕಾರ್ಯಕ್ರಮಕ್ಕೆ ₹50 ಲಕ್ಷ ಅನುದಾನ ಬಿಡುಗಡೆ ಮಾಡ
ಲಾಗಿದೆ. ಜೊತೆಗೆ 12 ಹುದ್ದೆಗಳನ್ನು ಸೃಷ್ಟಿಸಲಾಗಿದ್ದು, ಸದ್ಯದಲ್ಲಿಯೇ ಎಲ್ಲ ಹುದ್ದೆಗಳಿಗೆ ಸಿಬ್ಬಂದಿ ನಿಯೋಜಿಸಲಾಗುವುದು’ ಎಂದರು.

‘ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ದೂರದ ಊರುಗಳಿಂದ ಜನರು ನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಅಲೆಯುವುದನ್ನು ತಪ್ಪಿಸಿ ಅವರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ನೂತನ ತಾಲ್ಲೂಕು ಕೇಂದ್ರಗಳನ್ನು ರಚನೆ ಮಾಡಲಾಗಿದೆ’ ಎಂದು ಹೇಳಿದರು.

‘ಕೊಡಗಿಗೆ 2020-21ನೇ ಸಾಲಿನಲ್ಲಿ ವಿಪತ್ತು ನಿರ್ವಹಣಾ ನಿಧಿಯಡಿ ₹132 ಕೋಟಿ ಅನುದಾನವನ್ನು ಒದಗಿಸಿದ್ದೇನೆ. ಇದರಲ್ಲಿ ಪ್ರವಾಹಕ್ಕೆ ₹84 ಕೋಟಿ, ಬೆಳೆ ಪರಿಹಾರಕ್ಕೆ ₹32 ಕೋಟಿ, ಹಾಗೂ ತುರ್ತು ಕೆಲಸಗಳಿಗೆ ₹4 ಕೋಟಿ ನೀಡಿದ್ದೇನೆ. ಅದೇ ರೀತಿ ಕಂದಾಯ ಇಲಾಖೆ ವತಿಯಿಂದ ಕೋವಿಡ್ ನಿರ್ವಹಣೆಗಾಗಿ ₹646 ಕೋಟಿ ಅನುದಾನವನ್ನು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೊಡಗು ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಹಾಗೂ ಮಳೆ ಹಾನಿ ಉಪಯೋಗಕ್ಕಾಗಿ ₹106 ಕೋಟಿ ಅನುದಾನ ಕಾಯ್ದಿರಿಸಲಾಗಿದೆ’ ಎಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ‘ಕುಶಾಲನಗರ ತಾಲ್ಲೂಕು ಶೀಘ್ರ ಗತಿಯಲ್ಲಿ ಹಾಗೂ ವಿಸ್ತಾರವಾಗಿ ಬೆಳವಣಿಗೆ ಹೊಂದಿ ಜಿಲ್ಲೆಯಲ್ಲಿ ಮಾದರಿ ತಾಲ್ಲೂಕಾಗಿ ರೂಪುಗೊಳ್ಳಲಿದೆ’ ಎಂದರು.

‘ಇಲ್ಲಿ ವ್ಯಾಪಾರ ವಹಿವಾಟು
ಹಾಗೂ ಪ್ರವಾಸೋದ್ಯಮ ಅಭಿ ವೃದ್ಧಿಗೆ ತುಂಬಾ ಅವಕಾಶವಿದೆ.
ತಾಲ್ಲೂಕು ಸರ್ವತೋಮುಖ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ಶಾಸಕಿ ವೀಣಾ ಅಚ್ಚಯ್ಯ ಮಾತನಾಡಿ, ‘ಕುಶಾಲನಗರ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹಾಗೂ ಪೊನ್ನಂಪೇಟೆ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಮಾಚಯ್ಯ ನೇತೃತ್ವದಲ್ಲಿ ನಡೆಸಿದ ಹೋರಾಟದ ಫಲವಾಗಿ ಎರಡು ನೂತನ ತಾಲ್ಲೂಕುಗಳು ರಚನೆಯಾಗಿವೆ. ತಾಲ್ಲೂಕು ರಚನೆಗಾಗಿ ಹೋರಾಟ ನಡೆಸಿದ ಎಲ್ಲ ಜನಪ್ರತಿನಿಧಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಲಾಗುವುದು’ ಎಂದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಿದೆ ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಅಶೋಕ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು. ಕುಶಾಲನಗರ ತಾಲ್ಲೂಕಿಗೆ ಮಿನಿ‌ ವಿಧಾನಸೌಧ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಬೇಕು. ಒಂದೇ ಕಟ್ಟಡದಲ್ಲಿ 26 ಇಲಾಖೆಗಳು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ.ಜೈವರ್ಧನ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಈಶ್ವರ್‌ ಕುಮಾರ್ ಖಂಡು, ಸೋಮವಾರಪೇಟೆ ತಹಶೀಲ್ದಾರ್ ಆರ್.ಗೋವಿಂದರಾಜ್, ಕುಶಾಲನಗರ  ತಹಶೀಲ್ದಾರ್ ಬಿ.ಎಂ.ಪ್ರಕಾಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವ ಆರ್‌. ಅಶೋಕ ಅವರು ಎಪಿಎಂಸಿ ಆವರಣದಲ್ಲಿ ಗಿಡ ನೆಟ್ಟು ನೀರು ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.