ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಗಾಯದ ಮೇಲೆ ಬರೆ ಎಳೆದ ಮಳೆ

ಬೆಳೆಯೂ ಇಲ್ಲ, ಬೆಲೆಯೂ ಇಲ್ಲ; ಸಮಸ್ಯೆಯ ಸುಳಿಯಲ್ಲಿ ಕಾಫಿ ಬೆಳೆಗಾರರು
Last Updated 27 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಮೊದಲೇ ಕೊರೊನಾದಿಂದ ಕಂಗಾಲಾಗಿದ್ದ ಕೊಡಗಿನ ರೈತರಿಗೆ ಈ ವರ್ಷವೂ ಮಹಾಮಳೆ ಗಾಯದ ಮೇಲೆ ಬರೆ ಎಳೆದುಬಿಟ್ಟಿದೆ.

ಆಗಸ್ಟ್‌ ಮೊದಲ ವಾರ ಹಾಗೂ ಸೆಪ್ಟೆಂಬರ್‌ ಮಧ್ಯದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಕಾಫಿ, ಶುಂಠಿ, ಕಾಳುಮೆಣಸು, ಕಿತ್ತಳೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಜಿಲ್ಲೆಯ ಉತ್ತರ ಭಾಗದಲ್ಲೂ ಬೆಳೆಯುವ ಬೆಳೆಗಳೂ ಹವಾಮಾನ ವೈಪರೀತ್ಯದಿಂದ ಇಳುವರಿ ಕುಸಿದಿದೆ. ಕೊಳೆರೋಗ ತಗುಲಿದೆ. ಕೇಂದ್ರ ತಂಡವು ಇತ್ತೀಚೆಗೆ ಜಿಲ್ಲೆಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ತೆರಳಿದೆ. ಈ ವರ್ಷವಾದರೂ ಕೇಂದ್ರದಿಂದ ದೊಡ್ಡಮೊತ್ತದ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ಕಾಫಿ ನಾಡಿನ ರೈತರಿದ್ದಾರೆ.

ಎಷ್ಟು ಹಾನಿ: ಅತಿವೃಷ್ಟಿಯಿಂದ ಈ ವರ್ಷ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತು ಸದನದಲ್ಲೂ ಚರ್ಚೆಯಾಗಿದೆ. ಜಿಲ್ಲೆಯ ಶಾಸಕರು ಎಷ್ಟು ಪ್ರಮಾಣದ ಹಾನಿ ಸಂಭವಿಸಿದೆ ಎಂಬ ಮಾಹಿತಿಯನ್ನೂ ಕಂದಾಯ ಸಚಿವರಲ್ಲಿ ಕೇಳಿದ್ದು ಅವರು ವಿವರಣೆ ನೀಡಿದ್ದಾರೆ.

41,026 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ₹ 601 ಕೋಟಿಯ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಅದೇ ರೀತಿ 35 ಜಾನುವಾರು ಕೊಟ್ಟಿಗೆಗಳು, 342 ಮನೆಗಳಿಗೆ ಹಾನಿಯಾಗಿದೆ. ಐವರು ಮೃತಪಟ್ಟಿದ್ದಾರೆ. 17 ಜಾನುವಾರುಗಳು ಸಾವನ್ನಪ್ಪಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಸಿಗದ ಕನಿಷ್ಠ ಬೆಲೆ: ಇನ್ನು ಅತಿಯಾದ ಮಳೆಯಿಂದ ಕಾಳು ಮೆಣಸು ಬಳ್ಳಿಗೆ ಕೊಳೆರೋಗ ತಗುಲಿದೆ. ಹಳದಿ ಬಣ್ಣಕ್ಕೆ ಕಾಳು ಮೆಣಸಿನ ಬಳ್ಳಿಗಳು ತಿರುಗಿವೆ. ಜೊತೆಗೆ ಇಳುವರಿ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರವೇ ಕಾಳು ಮೆಣಸಿಗೆ ಕನಿಷ್ಠ ಬೆಲೆ ನಿಗದಿಪಡಿಸಿತ್ತು. ಪ್ರತಿ ಕೆ.ಜಿ ಕಾಳು ಮೆಣಸಿಗೆ ಕನಿಷ್ಠ ₹ 500 ಬೆಲೆಯಲ್ಲಿ ಖರೀದಿಸುವ ಬೆಲೆ ನೀಡಲಾಗಿತ್ತು. ಆದರೆ, ಕಾಳು ಮೆಣಸಿನ ದರ ಮಾತ್ರ ಮೇಲಕ್ಕೆ ಏರಿಕೆ ಕಾಣಿಸುತ್ತಿಲ್ಲ. ಪ್ರತಿ ಕೆ.ಜಿ ಕಾಳು ಮೆಣಸಿನ ದರ ₹325 ಇದೆ.

ಏಲಕ್ಕಿಗೆ ಬಂಪರ್‌ ಬೆಲೆ: ಏಲಕ್ಕಿಗೆ ಬಂಪರ್‌ ಬೆಲೆ ಬಂದಿದೆ. ಆದರೆ, ಬೆಳೆ ಮಾತ್ರ ಇಲ್ಲ. ‘ಸಾಂಬಾರ ಪದಾರ್ಥಗಳ ರಾಣಿ’ ಎಂದೇ ಏಲಕ್ಕಿಗೆ ಕರೆಯ ಲಾಗುತ್ತಿದೆ. ಕಟ್ಟೆರೋಗ, ಕೊಳೆರೋಗ ದಿಂದ ಬೆಳೆಗೆ ಹಾನಿ ಯಾಗಿದೆ. ನಿರ್ವಹಣೆ ವೆಚ್ಚ, ಬೆಲೆಯ ಅನಿಶ್ಚಿತತೆಯಿಂದ ಬೆಳೆಗಾರರು ಏಲಕ್ಕಿ ಬೆಳೆಯನ್ನೇ ಬೆಳೆಯುವುದನ್ನು ಬಿಟ್ಟಿದ್ದಾರೆ ಎಂದು ಬೆಳೆಗಾರರು ಹೇಳುತ್ತಾರೆ.

ಭಾಗಮಂಡಲ, ನಾಪೋಕ್ಲು, ಕಕ್ಕಬ್ಬೆ, ಶಾಂತಳ್ಳಿ, ಅಪ್ಪಂಗಳ ಹೆಚ್ಚಾಗಿ ಏಲಕ್ಕಿ ಬೆಳೆಯಾಗುತ್ತಿದೆ. ಬೆಲೆಯಿದ್ದರೂ ಬೆಳೆಯಿಲ್ಲದೇ ರೈತರು ಕೈಸುಟ್ಟುಕೊಳ್ಳುವ ಪರಿಸ್ಥಿತಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT