ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಮತ್ತೆ ಮಳೆಗಾಲದ ರೋಗಗಳು ಲಗ್ಗೆ!

ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಳ, ಚಿಕಿತ್ಸೆಗೂ ಪರದಾಟ, ವೈದ್ಯರ ಕೊರತೆ
Last Updated 13 ಜುಲೈ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ಮಳೆನಾಡು ಜಿಲ್ಲೆ ಕೊಡಗಿನಲ್ಲಿ ಆಷಾಢದ ಈ ತಿಂಗಳಲ್ಲಿ ಧೋ... ಎಂದು ಸುರಿಯಬೇಕಿದ್ದ ಮಳೆ ಮಾಯ ಆಗಿದೆ. ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಜುಲೈನಲ್ಲಿ ಹಳ್ಳ, ಕೊಳ್ಳಗಳು ಮೈದುಂಬಿ ಹರಿಯಬೇಕಿತ್ತು. ಆದರೆ, ವಾತಾವರಣದಲ್ಲಿ ಏರುಪೇರಾಗಿದ್ದು ಜಿಲ್ಲೆಯಲ್ಲಿ ವರುಣ ಕಣ್ಣಾಮುಚ್ಚಾಲೆ ಆಡುತ್ತಿದೆ.

ಒಮ್ಮೆ ಜೋರು ಮಳೆ, ಮತ್ತೊಮ್ಮೆ ಇಡೀ ದಿನ ತುಂತುರು ಮಳೆ, ಇಲ್ಲವೇ ಬಿಸಿಲು, ಮಂಜು ಮುಸುಕಿದ ವಾತಾವರಣ... ಹೀಗೆ ಕಳೆದ ಒಂದು ತಿಂಗಳಿಂದ ವಾತಾವರಣದಲ್ಲಿ ಬದಲಾವಣೆ ಕಂಡಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದ್ದು ಸಾರ್ವಜನಿಕರಲ್ಲಿ ಆತಂಕ ತಂದಿದೆ.

ಕುಶಾಲನಗರ ಸಮೀಪದ ತೊರೆನೂರು ಗ್ರಾಮದ 30ಕ್ಕೂ ಹೆಚ್ಚು ಕುಟುಂಬಗಳಿಗೆ ಸಾಮೂಹಿಕವಾಗಿ ಜ್ವರ ಬಾಧಿಸಿದೆ. ಚಿಕಿತ್ಸೆ ಪಡೆದರೂ ಜ್ವರ ಕಡಿಮೆಯಾಗಿಲ್ಲ. ಮತ್ತೆ ಆಸ್ಪತ್ರೆಗೆ ತೆರಳುವ ಸ್ಥಿತಿಯಿದೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ. ಹಲವು ಮೈಸೂರಿನತ್ತಲೂ ಚಿಕಿತ್ಸೆಗೆ ತೆರಳಿದ್ದಾರೆ.

ಜಿಲ್ಲೆಯಲ್ಲಿ ಡೆಂಗಿ, ಚಿಕೂನ್‌ಗುನ್ಯಾ ಭೀತಿ ಎದುರಾಗಿದೆ. ತುಂತುರು ಮಳೆಯಿಂದ ಅಲ್ಲಲ್ಲಿ ನೀರು ನಿಂತು, ಹಲವು ಗ್ರಾಮಗಳಲ್ಲಿ ಶುಚಿತ್ವದ ಕೊರತೆಯಿದೆ. ರೋಗ ಉಲ್ಬಣಕ್ಕೂ ದಾರಿ ಮಾಡಿಕೊಟ್ಟಿದೆ.

ಆಸ್ಪತ್ರೆಯಲ್ಲಿ ದಟ್ಟಣೆ:
ವಾರದಿಂದ ಖಾಸಗಿ ಕ್ಲಿನಿಕ್‌, ಖಾಸಗಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದು ವಾಪಸ್‌ ಆಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಜಿಲ್ಲಾ ಮಕ್ಕಳ ಆಸ್ಪತ್ರೆಯಲ್ಲಿ ಕಾಯಿಲೆಗೆ ತುತ್ತಾದವರ ದೊಡ್ಡ ದಂಡೇ ಶನಿವಾರ ಕೂಡ ಕಂಡುಬಂತು. ಬಹುತೇಕರು ಜ್ವರದಿಂದ ಬಳಲುತ್ತಿದ್ದ ಮಕ್ಕಳನ್ನು ಚಿಕಿತ್ಸೆಗೆ ಕರೆ ತಂದಿದ್ದರು. ಆದರೆ, ಜಿಲ್ಲಾ ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ ವೈದ್ಯರಿಲ್ಲದೇ ಜ್ವರ ಪೀಡಿತ ಮಕ್ಕಳು ಪರದಾಡಿದರು. ಕೊಡಗು ವೈದ್ಯಕೀಯ ಸಂಸ್ಥೆಯ ವಿದ್ಯಾರ್ಥಿಗಳಿಂದ ತಪಾಸಣೆ ನಡೆಸಲಾಗುತ್ತಿದೆ. ತಜ್ಞ ವೈದ್ಯರಿಲ್ಲ. ಕೇಳಿದರೆ ಸರಿಯಾದ ಉತ್ತರವನ್ನೂ ನೀಡುತ್ತಿಲ್ಲವೆಂದು ಅನೇಕ ಪೋಷಕರು ದೂರಿದರು.

ವೈದ್ಯರ ಕೊರತೆ:
ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿದ್ದು ಜ್ವರ ಸೇರಿದಂತೆ ಸಣ್ಣಪುಟ್ಟ ಕಾಯಿಲೆಗೂ ಚಿಕಿತ್ಸೆ ಪಡೆಯಲು ರೋಗಿಗಳಿಗೆ ಸಾಧ್ಯವಾಗುತ್ತಿಲ್ಲ. ಇನ್ನೂ ಜಿಲ್ಲಾ ಆಸ್ಪತ್ರೆ ಸ್ಥಿತಿಯೂ ಅದೇ. ಅಲ್ಲೂ ತಜ್ಞ ವೈದ್ಯರಿಲ್ಲ.

ಡೆಂಗಿ, ಚಿಕೂನ್‌ ಗುನ್ಯ:
ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೂ ಒಟ್ಟು 10 ಎಚ್1ಎನ್1, 6 ಡೆಂಗಿ, 3 ಚಿಕೂನ್‌ ಗುನ್ಯ, 165 ಟೈಪಾಯ್ಡ್‌ ಪ್ರಕರಣಗಳು ವರದಿಯಾಗಿವೆ. ಜೂನ್ ಹಾಗೂ ಜುಲೈನಲ್ಲೇ ಸಾಂಕ್ರಾಮಿಕ ರೋಗಗಳು ಉಲ್ಪಣಗೊಂಡಿವೆ.

ವೈದ್ಯರ ಸಲಹೆ ಏನು?:
ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆ ಆಗುವುದು, ವಾಕರಿಕೆ, ತಲೆ, ಕೀಲು ನೋವು ಹಾಗೂ ನಿರಂತರ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ತೋರದೆ ತಕ್ಷಣವೇ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಅಲ್ಲದೇ, ಜ್ವರ ಪೀಡಿತರು ಮಾತ್ರವಲ್ಲ. ಆರೋಗ್ಯವಂತರೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಒಳಿತು. ವಾತಾವರಣದಲ್ಲಿ ಏರುಪೇರಾಗಿದೆ. ಕೊಡಗಿನಲ್ಲೂ ವಾತಾವರಣ ಒಂದೇ ರೀತಿಯಲ್ಲಿ ಇಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ನಾವೇನು ಮಾಡಬೇಕು?:
ಶೀತ ವಾತಾರಣದಿಂದ ಪುಟ್ಟ ಮಕ್ಕಳಲ್ಲಿ ಜ್ವರ ಕಾಣಿಸುತ್ತಿದೆ. ಅದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಮಳೆಗಾಲದಲ್ಲಿ ಇದು ಸಾಮಾನ್ಯ. ರೋಗ ಲಕ್ಷಣ ಕಂಡುಬಂದರೆ ಅದನ್ನು ಉಲ್ಬಣವಾಗಲು ಅವಕಾಶ ನೀಡಬಾರದು. ತೆರೆದ ತೊಟ್ಟಿ ಹಾಗೂ ತೆಂಗಿನ ಚಿಪ್ಪುಗಳಲ್ಲಿ ಮಳೆಯ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಆಗಾಗ ನೀರಿನ ತೊಟ್ಟಿ ಶುಚಿಗೊಳಿಸಬೇಕು, ಕಾಯಿಸಿ ಆರಿಸಿದ ನೀರನ್ನೇ ಸೇವಿಸಬೇಕು, ಥಂಡಿ ವಾತಾವರಣವಿದ್ದು ಆದಷ್ಟು ಬಿಸಿಯಾದ ಆಹಾರವನ್ನೇ ಸೇವಿಸಿದರೆ ಒಳಿತು ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT