ಮಡಿಕೇರಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚಿನ ಮಳೆ ದಾಖಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅದದೇ ಪ್ರದೇಶಗಳಲ್ಲಿ ಪ್ರವಾಹ ಬಂದಿದೆ. ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರಗಳನ್ನು ತೆರೆದು, ಮಳೆ ಕಡಿಮೆಯಾಗುವವರೆಗೂ ಅವರ ಯೋಗಕ್ಷೇಮ ನೋಡಿಕೊಳ್ಳಲಾಗಿದೆ. ನಂತರ, ವಾಪಸ್ ಅವರನ್ನು ಅದೇ ಜಾಗಕ್ಕೆ ಕಳುಹಿಸಲಾಗಿದೆ.
‘ಇವರನ್ನು ಶಾಶ್ವತ ಸ್ಥಳಾಂತರ ಮಾಡುವ ಗಂಭೀರ ಪ್ರಯತ್ನಗಳು ನಡೆದಿಲ್ಲ. ಎಲ್ಲ ಸರ್ಕಾರಗಳಿಗೂ ಇಚ್ಛಾಶಕ್ತಿ ಇಲ್ಲ. ನದಿ ತೀರದ ನಿವಾಸಿಗಳ ವನವಾಸ 50 ವರ್ಷವಾದರೂ ಮುಗಿದಿಲ್ಲ’ ಎಂದು ಪ್ರವಾಹ ಸಂತ್ರಸ್ತರ ಪರವಾಗಿ ಜಿಲ್ಲೆಯಲ್ಲಿ ಹೋರಾಟ ಮಾಡುತ್ತಿರುವ ಪಿ.ಎ.ಭರತ್ ಅಸಮಾಧಾನದ ನುಡಿಗಳನ್ನಾಡುತ್ತಾರೆ. ಇವರ ಧ್ವನಿಗೆ ಇತರ ಸಂತ್ರಸ್ತರೂ ದನಿಗೂಡಿಸುತ್ತಾರೆ.
ಜಿಲ್ಲಾಡಳಿತದ ಮುಂಜಾಗ್ರತಾ ಕ್ರಮಗಳು, ಸಾರ್ವಜನಿಕರು ವಹಿಸಿದ ಮುನ್ನಚ್ಚರಿಕೆಗಳಿಂದ ಈ ಬಾರಿ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿ ಎನಿಸಿದೆ. ಮೂವರಿಗಷ್ಟೇ ಲಘು ಪ್ರಮಾಣದ ಗಾಯಗಳಾಗಿವೆ. ಆದರೆ, ಈ ವರ್ಷ ಜಾನುವಾರುಗಳ ಸಾವು ಹಾಗೂ ಹಾಳಾದ ವಿದ್ಯುತ್ ಕಂಬಗಳ ಸಂಖ್ಯೆಗಳಲ್ಲಿ ಗಣನೀಯವಾದ ಏರಿಕೆ ಕಂಡು ಬಂದಿದ್ದು, ಅಪಾರ ನಷ್ಟ ಸಂಭವಿಸಿದೆ.
ಮುಂಗಾರಿನ ಆರಂಭದಿಂದಲೆ ಮಳೆ ಅಬ್ಬರಿಸಿದ್ದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಇನ್ನೂ ಚಾಲನೆ ನೀಡಿರಲಿಲ್ಲ. ಬಹುತೇಕ ಕಡೆ ಬಿತ್ತನೆಯಾಗಿರಲಿಲ್ಲ. ಇದರಿಂದ ಕೃಷಿ ಬೆಳೆಗಳ ಹಾನಿ ಕಡಿಮೆಯಾಯಿತು. ಆದರೆ, ಹೆಚ್ಚು ಮಳೆ ಸುರಿದ ಭಾಗಗಳಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಗಳಿಗೆ ತೊಂದರೆಯಾಗಿದೆ. ಕೆಲವೆಡೆ ಕೊಳೆರೋಗ ಕಾಣಿಸಿಕೊಂಡಿದೆ.
ಮಳೆ ಮುಂದುವರಿಯುವ ಲಕ್ಷಣ ಇರುವುದರಿಂದ ಕಾಫಿ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಉಂಟಾದ ನಷ್ಟ ಕುರಿತು ಇನ್ನೂ ಸಮೀಕ್ಷೆ ಪೂರ್ಣಗೊಂಡಿಲ್ಲ. ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಸಮೀಕ್ಷಾ ಕಾರ್ಯ ನಡೆಯುತ್ತಿದೆ.
ಇನ್ನು ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಒಟ್ಟು 269 ಮಂದಿ ಬಾಧಿತರಾದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 16 ಹಳ್ಳಿಗಳು ಪ್ರವಾಹದಿಂದ ತತ್ತರಿಸಿದವು. 13 ಕಡೆ ಸಣ್ಣ ಪ್ರಮಾಣದಲ್ಲಿ ಹಾಗೂ 20 ಕಡೆ ದೊಡ್ಡಪ್ರಮಾಣದಲ್ಲಿ ಭೂಕುಸಿತಗಳು ಸಂಭವಿಸಿ ಆತಂಕ ಮೂಡಿಸಿದ್ದವು. ಆದರೆ, ಮಳೆ ನಿಯಂತ್ರಣಕ್ಕೆ ಬಂದಿದ್ದರಿಂದ ಭೂಕುಸಿತಗಳ ಸರಣಿ ನಿಂತಿತು. ಕೆಲವೊಂದು ಕಡೆ ರಸ್ತೆಗಳಿಗೆ ಹೆಚ್ಚಿನ ಹಾನಿ ಸಂಭಸಿತು. ಆದರೆ, ಸಂಪರ್ಕವೇ ತಪ್ಪಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಲಿಲ್ಲ.
ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಗೆ ಸೇರಿದ 344 ಕಿ.ಮೀ ಉದ್ದದ ರಸ್ತೆ ಹಾನಿಯಾಗಿದೆ. ಇನ್ನೂ ಹೆಚ್ಚಿನ ರಸ್ತೆಗಳು ಹದಗೆಟ್ಟು, ಸಂಚಾರ ದುಸ್ತರ ಎನ್ನುವಂತಾಗಿದೆ. ಜೊತೆಗೆ, 42 ಸೇತುವೆಗಳಿಗೂ ಹಾನಿ ಸಂಭವಿಸಿದೆ. ವಾಹನ ಸವಾರರ ಪಾಡಂತೂ ಹೇಳತೀರದಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳು ಮಾತ್ರವಲ್ಲ ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಅದರಲ್ಲೂ ಪ್ರಮುಖ ರಸ್ತೆಗಳಲ್ಲಿ ಭಾರಿ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರ ಪಾಡಂತೂ ಹೇಳತೀರದಾಗಿದೆ. ಇದುವರೆಗೂ ರಸ್ತೆಗಳ ತಾತ್ಕಾಲಿಕ ದುರಸ್ತಿ ಕಡೆಗೆ ಗಮನ ಹರಿಸದೇ ಇರುವುದು ಜನಸಾಮಾನ್ಯರ ಆಕ್ರೋಶಕ್ಕೂ ಕಾರಣವಾಗಿದೆ.
ಕೆಲವೊಂದು ಕಡೆ ಸ್ವತಃ ಚಾಲಕರೇ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಕೈಗೊಂಡಿದ್ದಾರೆ. ನಾಪೋಕ್ಲು ಸಮೀಪದ ಹಳೆಯ ತಾಲ್ಲೂಕಿನ ಪೊನ್ನು ಮುತ್ತಪ್ಪ ದೇವಾಲಯದ ಬಳಿಯ ರಸ್ತೆಹೊಂಡಗಳನ್ನು ಆಟೊ ಚಾಲಕರು ಈಚೆಗೆ ಮುಚ್ಚಿದರು. ಈ ಬಗೆಯ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಕೂಡಲೇ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚುವ ಕಾರ್ಯಾಕ್ಕಾದರೂ ಚಾಲನೆ ನೀಡಬೇಕಿದೆ.
ಜಿಲ್ಲೆಯಲ್ಲಿ ಒಟ್ಟು 90 ಮರಗಳು ಬುಡಮೇಲಾಗಿ ತಾತ್ಕಾಲಿಕವಾಗಿ ರಸ್ತೆಗಳಲ್ಲಿ ಸಂಚಾರ ವ್ಯತ್ಯಯಗೊಂಡಿತ್ತು. ಆದರೆ, ಜಿಲ್ಲಾಡಳಿತ ಇವುಗಳನ್ನು ತಕ್ಷಣವೇ ತೆರವುಗೊಳಿಸುವ ಮೂಲಕ ಹೆಚ್ಚಿನ ಹೊತ್ತು ಸಂಚಾರ ಸ್ಥಗಿತಗೊಳ್ಳದಂತೆ ಮಾಡುವಲ್ಲಿ ಸಫಲವಾಯಿತು.
238 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಒಟ್ಟು 238 ಮನೆಗಳಿಗೆ ಹಾನಿ ಸಂಭವಿಸಿದೆ. ಅವುಗಳಲ್ಲಿ 65 ಮನೆಗಳು ಸಂಪೂರ್ಣ ನಾಶವಾಗಿವೆ. ಇನ್ನುಳಿದ 173 ಮನೆಗಳು ಭಾಗಶಃ ಹಾನಿಯಾಗಿವೆ. ಸದ್ಯ ಮಳೆ ನಿಯಂತ್ರಣಕ್ಕೆ ಬಂದಿದ್ದರಿಂದ ಇನ್ನಷ್ಟು ಮನೆಗಳು ಹಾನಿಯಾಗುವುದು ತಪ್ಪಿತು.
ಮನೆಗಳಿಗೆ ನುಗ್ಗಿದ ನೀರು: ಅಧಿಕ ಮಳೆಯಿಂದ ನದಿ, ತೊರೆಗಳು ತುಂಬಿ ಹರಿದವು. ಇದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಪ್ರವಾಹ ಪರಿಸ್ಥಿತಿ ಏರ್ಪಟ್ಟಿತು. ಮುಖ್ಯವಾಗಿ, ಸಿದ್ದಾಪುರ ಸಮೀಪದ ಕರಡಿಗೋಡು ಹಾಗೂ ಕುಶಾಲನಗರ ಕೆಲವು ಬಡಾವಣೆಗಳಲ್ಲಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿತು. ಇವರನ್ನು ಕೂಡಲೇ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಯಿತು. ಒಟ್ಟು ಜಿಲ್ಲೆಯಲ್ಲಿ 14 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಅವುಗಳಲ್ಲಿ ಸದ್ಯ 2 ಮಾತ್ರ ಇನ್ನೂ ಸಕ್ರಿಯವಾಗಿವೆ.
ಸೆಸ್ಕ್‌ಗೆ ಅಪಾರ ಹಾನಿ: ಇನ್ನು ಪ್ರಸಕ್ತ ಮುಂಗಾರಿನಲ್ಲಿ ಸೆಸ್ಕ್‌ಗೆ ಅಪಾರ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟು 2,253 ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿದ್ದವು. 19 ವಿದ್ಯುತ್ ಪರಿವರ್ತಕಗಳು ಹಾನಿ ಯಾಗಿದ್ದವು.
ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಲೈನ್‌ಮನೆಗಳನ್ನು ಕರೆಸಿಕೊಂಡು ದುರಸ್ತಿ ಕಾರ್ಯ ನಡೆಸಲಾಯಿತು.
ಮಾಹಿತಿ: ರಘು ಹೆಬ್ಬಾಲೆ, ಡಿ.ಪಿ.ಲೋಕೇಶ್
ಶಾಶ್ವತ ಪರಿಹಾರಕ್ಕೆ ಇಚ್ಛಾಶಕ್ತಿ ಕೊರತೆ
ಶಾಶ್ವತ ಪರಿಹಾರಕ್ಕೆ ಇಚ್ಛಾಶಕ್ತಿ ಇಲ್ಲದ ಸರ್ಕಾರಗಳು ಸಂತ್ರಸ್ತರನ್ನು ಇಟ್ಟುಕೊಂಡು ‘ಸಿಂಪತಿ’ ಸೃಷ್ಟಿಸಿ ಮತ ಬ್ಯಾಂಕ್ ಭದ್ರ ಮಾಡಿಕೊಳ್ಳುತ್ತಿವೆ. ಎಲ್ಲ ಸರ್ಕಾರಗಳೂ ಹೀಗೆಯೇ ನಡೆದುಕೊಳ್ಳುತ್ತಿವೆ. ಅಧಿಕಾರಿಗಳು ಸಹ ಹಾಗೆಯೇ ಇದೆ. ಸಾವುಗಳು ಬಂದಾಗ ಒಂದಿಷ್ಟು ಎಚ್ಚರಗೊಳ್ಳುತ್ತಾರೆ. ನಂತರ ಮಲಗುತ್ತಾರೆ. ನದಿ ಪ್ರವಾಹದ ಜನರಿಗೆ 50 ವರ್ಷವಾದರೂ ವನವಾಸವಾದರು ಮುಗಿಯುವುದಿಲ್ಲ.
ಭರತ್, ಪ್ರವಾಹ ಸಂತ್ರಸ್ತರ ಸಮಿತಿಯ ಸಂಚಾಲಕ.
2018ರ ಹಾನಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ
2018ರ ಮಹಾಮಳೆಯ ಸಂದರ್ಭ ನಮ್ಮ ಮನೆಗೆ ಹಾನಿಯಾಗಿತ್ತು. ಅಧಿಕಾರಿಗಳು ಬಂದು ಮಾಹಿತಿ ಪಡೆದು ಹೋಗಿದ್ದು ಬಿಟ್ಟರೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಿಲ್ಲ. ಕಚೇರಿಗಳಿಗೆ ಅಳೆಯುವುದು ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಜಂಬೂರಿನಲ್ಲಿ ಉಳಿದಿರುವ ಮನೆಯನ್ನು ನೀಡಿದಲ್ಲಿ ನಮಗೆ ಅನುಕೂಲವಾಗುತ್ತದೆ.
ಎಂ.ಸಿ. ಮಾದಪ್ಪ, ಗರ್ವಾಲೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಶಿರಂಗಳ್ಳಿ ನಿವಾಸಿ.
2018ರಿಂದಲೂ ನಾವು ಸಂತ್ರಸ್ತರು
ಮಕ್ಕಂದೂರು ಗ್ರಾಮದಲ್ಲಿ 2018-19 ರಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ನಾವು ಕುಟುಂಬ ಸಮೇತ ಕುಶಾಲನಗರಕ್ಕೆ ಬಂದು ಸಾಯಿ ಬಡಾವಣೆಯಲ್ಲಿ ಭೋಗ್ಯದ ಮನೆ ಪಡೆದು ವಾಸಿಸುತ್ತಿದ್ದೇವೆ. ಇಲ್ಲಿಯೂ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು, ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಇಲ್ಲಿನ ನಿವಾಸಿಗಳು ನೆಮ್ಮದಿ ಜೀವನ ನಡೆಸುವಂತೆ ಸರ್ಕಾರ ಮಾಡಬೇಕಾಗಿದೆ.
ಬಿ.ವಿ.ಸಾವಿತ್ರಿ, ನಿವಾಸಿ, ಸಾಯಿ ಬಡಾವಣೆ. ಕುಶಾಲನಗರ.
ಮೂಲ ಸೌಕರ್ಯ ಇಲ್ಲದ ಬಡಾವಣೆ
ಕುಶಾಲನಗರದ ಕಾರು ಮಾಲೀಕರು ಮತ್ತು ಚಾಲಕರ ಬಡಾವಣೆ ಮೂಲಸೌಕರ್ಯದಿಂದ ವಂಚಿತಗೊಂಡಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ನೀರಿನಿಂದಾಗಿ ಜಲಾವೃತ. ಇದರಿಂದ ನಿವಾಸಿಗಳು ಸಮಸ್ಯೆಯ ಸಂಕೋಲೆಯಲ್ಲಿ ಬದುಕುವ ಪರಿಸ್ಥಿತಿ ಇದೆ. ರಸ್ತೆ, ಚರಂಡಿ ವ್ಯವಸ್ಥೆ ಆಗಬೇಕು.
ಸಂತೋಷ್, ಕುಶಾಲನಗರದ ಕಾರು ಮಾಲೀಕರು ಮತ್ತು ಚಾಲಕರ ಬಡಾವಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.