ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಕೊಡಗಿನಲ್ಲಿ ಹಾಕಿ ಸುಗ್ಗಿ

ಕುಂಡ್ಯೋಳಂಡ ಹಾಕಿ ಕಾರ್ನಿವಲ್ 2024ಗೆ ಇಂದು ಚಾಲನೆ
Published 30 ಮಾರ್ಚ್ 2024, 7:43 IST
Last Updated 30 ಮಾರ್ಚ್ 2024, 7:43 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡಗಿನಲ್ಲಿ ಇಂದಿನಿಂದ ಆರಂಭವಾಗಲಿರುವ ‘ಹಾಕಿ ಸುಗ್ಗಿ’ಗೆ ಸರ್ವಸಿದ್ಧತೆಗಳೂ ಪೂರ್ಣಗೊಂಡಿದ್ದು, ಕ್ರೀಡಾಸಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಇಂದಿನಿಂದ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಕೊಡವ ಕುಟುಂಬಗಳ ನಡುವೆ ನಡೆಯಲಿರುವ ಪ್ರತಿಷ್ಠಿತ 24ನೇ ವರ್ಷದ ಹಾಕಿ ಪಂದ್ಯಾವಳಿಯು ಬರೋಬ್ಬರಿ 30 ದಿನಗಳ ಕಾಲ ಹಾಕಿ ಪ್ರಿಯರಿಗೆ ರಸದೌತಣ ನೀಡಲಿದೆ.

ಕುಂಡ್ಯೋಳಂಡ ಕುಟುಂಬದವರ ಸಾರಥ್ಯದಲ್ಲಿ ನಡೆಯುವ ಈ ಪಂದ್ಯಾವಳಿಯನ್ನು ‘ಕುಂಡ್ಯೋಳಂಡ ಹಾಕಿ ಕಾರ್ನಿವಲ್’ ಎಂದೇ ಕರೆಯಲಾಗಿದೆ. 30 ದಿನಗಳ ಕಾಲ ನಿತ್ಯವೂ ಇಲ್ಲಿ ನಡೆಯುವ 18 ಪಂದ್ಯಗಳನ್ನು ಕಣ್ತುಂಬಿಕೊಳ್ಳುವುದಕ್ಕೆಂದು 30 ಸಾವಿರ ಹಾಕಿಪ್ರಿಯರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. 12 ಸ್ಟೆಪ್ ಗ್ಯಾಲರಿಯ ವ್ಯವಸ್ಥೆಯೂ ಇದೆ.

ಇದಕ್ಕಾಗಿ ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 3 ಮೈದಾನಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಮೈದಾನದಲ್ಲೂ 6 ಪಂದ್ಯಗಳು ನಡೆಯಲಿವೆ. 10 ದಿನಗಳ ಬಳಿಕ ಎರಡು ಮೈದಾನದಲ್ಲಿ ಹಾಗೂ ಫ್ರೀ ಕ್ವಾಟರ್ ಬಳಿಕ ಒಂದು ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.

ಹಲವು ವಿಶೇಷ ಆಕರ್ಷಣೆಗಳು: ಇಲ್ಲಿ ಕೇವಲ ಹಾಕಿ ಪಂದ್ಯಾವಳಿಗಳು ಮಾತ್ರ ನಡೆಯುತ್ತಿಲ್ಲ. ಇದರೊಂದಿಗೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳೂ ಕ್ರೀಡಾಸಕ್ತರನ್ನು ಮಾತ್ರವಲ್ಲ ಸಾಮಾನ್ಯ ಜನರನ್ನೂ ಸೂಜಿಗಲ್ಲಿನಂತೆ ಸೆಳೆಯಲಿವೆ.

ಸೈನ್ಯಕ್ಕೆ ಸೇರಲು ಬಯಸುವ ಮಕ್ಕಳಿಗೆ ಸೇನಾಧಿಕಾರಿಗಳಿಂದ ತರಬೇತಿ, ಕೊಡವರ ಸಾಂಪ್ರದಾಯಿಕ ಆಹಾರ ಪದ್ಧತಿ ಸೇರಿದಂತೆ ವಿವಿಧ ಆಹಾರ ಪದ್ಧತಿ ಪರಿಚಯಿಸುವ ಉದ್ದೇಶದಿಂದ ಆಹಾರಮೇಳ, ವಧು-ವರರ ಸಮಾವೇಶ, ಆರೋಗ್ಯ ತಪಾಸಣಾ ಶಿಬಿರ, ಉಮ್ಮತಾಟ್, ಬೊಳಕಾಟ್ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ಹಾಕಿ ಉತ್ಸವದ ಆಕರ್ಷಣೆಯನ್ನು ಹಿಗ್ಗಿಸಿದೆ.

ಉದ್ಘಾಟನೆಗೂ ಮೊದಲು ನಾಪೋಕ್ಲುವಿನ ಶ್ರೀರಾಮ ಮಂದಿರದಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದವರೆಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆ ನಡೆಯಲಿದೆ. ಮೈದಾನದಲ್ಲಿ ಪಥಸಂಚಲನ ಮತ್ತು ಧ್ವಜಾರೋಹಣವಾದ ನಂತರ ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ಬಾಲಕಿಯರು ಹಾಗೂ ಕೂರ್ಗ್ 11ಬಾಲಕಿಯರ ನಡುವೆ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿದೆ. ಕೊಡವ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಹಾಕಿ ಹಬ್ಬ ಉದ್ಘಾಟನೆ ಮತ್ತು ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮವೂ ನಡೆಯಲಿದೆ. ಇಂಡಿಯನ್ ನೇವಿ ಹಾಗೂ ಕೂರ್ಗ್ 11 ತಂಡಗಳ ನಡುವಿನ ಉದ್ಘಾಟನಾ ಪಂದ್ಯ ಗಮನ ಸೆಳೆಯಲಿದೆ.

ನಾಪೋಕ್ಲುವಿನ ಚೆರಿಯಪರಂಬು  ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಆರಂಬಗೊಳ್ಳಲಿರುವ  ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕಾಗಿ ವೀಕ್ಷಕರ ಗ್ಯಾಲರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದು.
ನಾಪೋಕ್ಲುವಿನ ಚೆರಿಯಪರಂಬು  ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಆರಂಬಗೊಳ್ಳಲಿರುವ  ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕಾಗಿ ವೀಕ್ಷಕರ ಗ್ಯಾಲರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದು.
ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕಾಗಿ ಸಿದ್ದಗೊಂಡ ನಾಪೋಕ್ಲುವಿನ ಚೆರಿಯಪರಂಬು  ಜನರಲ್ ತಿಮ್ಮಯ್ಯ ಕ್ರೀಡಾಂಗಣ
ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕಾಗಿ ಸಿದ್ದಗೊಂಡ ನಾಪೋಕ್ಲುವಿನ ಚೆರಿಯಪರಂಬು  ಜನರಲ್ ತಿಮ್ಮಯ್ಯ ಕ್ರೀಡಾಂಗಣ
ಕುಂಡ್ಯೋಳಂಡ ರಮೇಶ್ ಮುದ್ದಯ್ಯ
ಕುಂಡ್ಯೋಳಂಡ ರಮೇಶ್ ಮುದ್ದಯ್ಯ
ನಾಪೋಕ್ಲುವಿನಲ್ಲಿ ಆರಂಭವಾಗಲಿರುವ ಹಾಕಿ ಪಂದ್ಯಾವಳಿ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಿರುವುದು
ನಾಪೋಕ್ಲುವಿನಲ್ಲಿ ಆರಂಭವಾಗಲಿರುವ ಹಾಕಿ ಪಂದ್ಯಾವಳಿ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಿರುವುದು

ಇಂದಿನಿಂದ 30 ದಿನಗಳವರೆಗೆ ನಡೆಯಲಿದೆ ಕ್ರೀಡೋತ್ಸವ 30 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಲು ವ್ಯವಸ್ಥೆ ಪಂದ್ಯಾವಳಿ ಜೊತೆ ಇವೆ ಹಲವು ವಿಶೇಷ

ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಧು-ವರರ ಸಮಾವೇಶ ಫುಡ್ ಫೆಸ್ಟ್ ಸೇರಿದಂತೆ ಹಲವು ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆ ಮಾಡಲಾಗಿದೆ.

- ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಕುಂಡ್ಯೋಳಂಡ ಹಾಕಿ ಉತ್ಸವದ ಅಧ್ಯಕ್ಷ.

ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ಹಬ್ಬದಲ್ಲಿ ಎಲ್ಲಾ ವಯೋಮಾನದವರು ಆಡುತ್ತಾರೆ. ಎಲ್ಲರಿಗೂ ಮಾದರಿಯಾಗುವ ಸ್ಫೂರ್ತಿ ನೀಡುವ ಕ್ರೀಡಾಕೂಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು.

- ಬಡಕಡ ದೀನಾ ಪೂವಯ್ಯ ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ.

ಇಂದು ಉದ್ಘಾಟನೆ 24ನೇ ಹಾಕಿ ಹಬ್ಬ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ ಮಾರ್ಚ್ 30ರಂದು ಬೆಳಿಗ್ಗೆ 10.30ಕ್ಕೆ ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹಾಕಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ನಾಣಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪಸಿಂಹ ಶಾಸಕ ಡಾ.ಮಂತರ್‌ಗೌಡ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಬರಹಗಾರ್ತಿ ಕಂಬೀರಂಡ ಕಾವೇರಿ ಪೊನ್ನಪ್ಪ ಒಲಂಪಿಯನ್ ಅಂಜಪರವಂಡ ಬಿ.ಸುಬ್ಬಯ್ಯ ಹಾಕಿ ವಿಶ್ವಕಪ್ ವಿಜೇತ ಪೈಕೆರ ಈ.ಕಾಳಯ್ಯ ಒಲಂಪಿಯನ್ ಬಾಳೆಯಡ ಕೆ.ಸುಬ್ರಮಣಿ ಇಬ್ಬನಿ ರೆಸಾರ್ಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಶೆರಿ ಸೆಬಾಸ್ಟಿನ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ವೆಂಕಟರಾಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಜಿ ಕಾನೂನು ಸಚಿವ ಮೇರಿಯಂಡ ಸಿ.ನಾಣಯ್ಯ ಮಾಜಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಕೆ.ಜಿ ಬೋಪಯ್ಯ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಮಂಡೆಪಂಡ ಸುನಿಲ್ ಸುಬ್ರಮಣಿ ಪಾಲ್ಗೊಳ್ಳಲಿದ್ದಾರೆ.

ಈ ಬಾರಿ ಯಾರಿಗೆ ಕಪ್? ಕಳೆದ ವರ್ಷ ನಾಪೋ‌ಕ್ಲುವಿನಲ್ಲಿ ನಡೆದ 23ನೇ ಕೌಟುಂಬಿಕ ಹಾಕಿ ಉತ್ಸವ ಟೂರ್ನಿಯಲ್ಲಿ ಕುಪ್ಪಂಡ (ಕೈಕೇರಿ) ತಂಡ ಕುಲ್ಲೇಟಿರ ತಂಡವನ್ನು ಮಣಿಸಿ ಮೊದಲ ಬಾರಿಗೆ ಕೊಡವ ಹಾಕಿ ಕಪ್ ಅನ್ನು ತನ್ನದಾಗಿಸಿಕೊಂಡಿತು. ಇದುವರೆಗಿನ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಪಳಂಗಂಡ ತಂಡ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕೊಡವ ಹಾಕಿ ಉತ್ಸವದಲ್ಲಿ ದಾಖಲೆ ನಿರ್ಮಿಸಿದೆ. ಕೂತಂಡ ತಂಡವು 4 ಬಾರಿ ಕಲಿಯಂಡ ಕುಲ್ಲೇಟಿರ ಹಾಗೂ ನೆಲಮಕ್ಕಳ ತಂಡಗಳು ಕ್ರಮವಾಗಿ 3 ಬಾರಿ ಅಂಜಪರವಂಡ ಮಂಡೆಪಂಡ ಕುಪ್ಪಂಡ (ಕೈಕೇರಿ) ತಂಡಗಳು ತಲಾ 1 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ. ಈ ಬಾರಿಯ ಕುಂಡ್ಯೋಳಂಡ ಕಪ್ ಅನ್ನು ಎತ್ತಿ ಹಿಡಿಯುವ ತಂಡ ಯಾವುದಾಗಿರಬಹುದು ಎಂಬ ಕುತೂಹಲ ಹಾಕಿ ಪ್ರೇಮಿಗಳಲ್ಲಿ ಮನೆ ಮಾಡಿದೆ. ಟ್ರೋಫಿಗಾಗಿ ಸೆಣೆಸಾಡಲು ಕೊಡವ ಕುಟುಂಬ ತಂಡಗಳು ಶನಿವಾರದಿಂದ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ಇಳಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT