ಉಸ್ತುವಾರಿ ಎದುರು ಸಮಸ್ಯೆ ಸರಮಾಲೆ

7
ಕೈಹಿಡಿದೀತೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಲೆಕ್ಕಾಚಾರ

ಉಸ್ತುವಾರಿ ಎದುರು ಸಮಸ್ಯೆ ಸರಮಾಲೆ

Published:
Updated:
Deccan Herald

ಮಡಿಕೇರಿ: ಕೊನೆಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ನೇಮಕಗೊಂಡಿದ್ದಾರೆ. ಕೊಡಗಿನಲ್ಲಿ ಜಮೀನು ಹೊಂದಿರುವ ಕಾರಣಕ್ಕೆ ಜಿಲ್ಲೆಯ ಸಮಸ್ಯೆಗಳ ಅರಿವಿದೆ. ಉಸ್ತುವಾರಿ ಹೊಣೆ ನಿಭಾಯಿಸುವುದೂ ಮಹೇಶ್‌ಗೆ ಸುಲಭವಾಗಲಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲೇ ಕೇಳಿಬರುತ್ತಿವೆ.

ಆದರೆ, ಬಿಜೆಪಿ ಭದ್ರಕೋಟೆ ಆಗಿರುವ ಜಿಲ್ಲೆಯಲ್ಲಿ ರಾಜಕೀಯವಾಗಿ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಇದೀಗ ಮನೆಮಾಡಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಪಾಲುದಾರ ಪಕ್ಷವಾದರೂ ಜಿಲ್ಲೆಯಲ್ಲಿ ‘ಕೈ’ ತನ್ನ ನೆಲೆ ಕಳೆದುಕೊಂಡಿದೆ. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಏಕೈಕ ವಿಧಾನ ಪರಿಷತ್‌ ಸದಸ್ಯರೇ ಸಂಘಟನೆಯ ಬಲ! ಇನ್ನು ಸ್ವಪಕ್ಷ ಜೆಡಿಎಸ್‌ನಲ್ಲಿ ಭಿನ್ನಮತ, ಅಸಮಾಧಾನ ಹೊಗೆಯಾಡುತ್ತಿದೆ. ಮುಖ್ಯಮಂತ್ರಿ ಎದುರೇ ಸಂಕೇತ್‌ ಅವರ ವಿರುದ್ಧ ಧಿಕ್ಕಾರ ಮೊಳಗಿತ್ತು. ಇದರಿಂದ ಬೇಸತ್ತು ಜಿಲ್ಲಾ ಅಧ್ಯಕ್ಷ ಸಂಕೇತ್‌ ಪೂವಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದು ಇನ್ನೂ ಅಂಗೀಕಾರವಾಗಿಲ್ಲ.

ಹೊಸ ಅಧ್ಯಕ್ಷರ ನೇಮಕವಾಗಬೇಕೆಂದು ಒಂದು ಬಣ ಪಟ್ಟುಹಿಡಿದಿದೆ. ಮಾಜಿ ಸಚಿವ ಬಿ.ಎ. ಜೀವಿಜಯ ಅವರು ತಮ್ಮ ಪುತ್ರನನ್ನೇ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಕೇತ್‌ ಬೆಂಬಲಿಗರು ರಾಜೀನಾಮೆ ವಾಪಸ್‌ ಪಡೆಯವಂತೆಯೂ ಮನವೊಲಿಸುತ್ತಿದ್ದಾರೆ. ಪಕ್ಷದಲ್ಲಿರುವ ಗೊಂದಲ ಬಗೆಹರಿಸುವ ಜತೆಗೆ ಆಡಳಿತಕ್ಕೂ ಚುರುಕು ಮುಟ್ಟಿಸುವ ಅನಿವಾರ್ಯತೆ ಮಹೇಶ್‌ ಅವರಿಗೆ ಎದುರಾಗಿದೆ.

ಸುಗಮ ಆಡಳಿತ ವ್ಯವಸ್ಥೆಗಾಗಿ ಉಸ್ತುವಾರಿ ಸಚಿವರ ನೇಮಕವಾದರೂ ಅದರಲ್ಲಿ ರಾಜಕೀಯ ತಂತ್ರಗಾರಿಕೆಯಂತೂ ಇದ್ದೇ ಇದೆ. ಅದನ್ನು ಸಾ.ರಾ.ಮಹೇಶ್‌ ಹೇಗೆ ಎದುರಿಸುತ್ತಾರೆ ಎಂಬ ಪ್ರಶ್ನೆಗಳು ಎದುರಾಗಿವೆ.

ಸಚಿವ ಸಂಪುಟ ವಿಸ್ತರಣೆಯಾದ ದಿನದಿಂದಲೂ ಉಸ್ತುವಾರಿ ಸ್ಥಾನಕ್ಕೆ ಮಹೇಶ್‌ ಹೆಸರು ಕೇಳಿಬರುತ್ತಿತ್ತು. ಈ ನಡುವೆ ಸಚಿವ ಕೆ.ಜೆ. ಜಾರ್ಜ್‌ ಹೆಸರು ಪ್ರಸ್ತಾಪವಾಗಿತ್ತು. ಜಾರ್ಜ್‌ ನೇಮಕಕ್ಕೆ ಜಿಲ್ಲೆಯಲ್ಲಿ ವಿರೋಧವಿತ್ತು. ಅದನ್ನು ಅರಿತಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಹೇಶ್‌ ಹೆಸರು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳ ಸಭೆ ಹೆಸರಿನಲ್ಲಿ ಮಹೇಶ್‌ ಅವರು, ಜುಲೈ ಎರಡನೇ ವಾರದಲ್ಲಿ ಮಡಿಕೇರಿಗೆ ಭೇಟಿ ನೀಡಿ ತೆರಳಿದ್ದರು. ‘ಇನ್ನು ಆಗಾಗ್ಗೆ ಭೇಟಿ ನೀಡುತ್ತೇನೆ’ ಎಂಬ ಸುಳಿವು ಕೊಟ್ಟಿದ್ದರು.

ಪ್ರವಾಸೋದ್ಯಮಕ್ಕೆ ಲಾಭ: ಕೊಡಗು ಪ್ರವಾಸೋದ್ಯಮಕ್ಕೆ ಹೆಸರಾದ ಜಿಲ್ಲೆ. ವಾರ್ಷಿಕವಾಗಿ ಅಂದಾಜು 18 ಲಕ್ಷದಷ್ಟು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಾರೆ. ಅದೇ ಖಾತೆ ಹೊಂದಿರುವ ಸಚಿವರಿಗೇ, ಉಸ್ತುವಾರಿ ಸ್ಥಾನ ಸಿಕ್ಕಿದ್ದು ಪ್ರವಾಸಿ ತಾಣಗಳು ಅಭಿವೃದ್ಧಿ ಹೊಂದಬಹುದು ಎಂಬ ನಿರೀಕ್ಷೆಯಿದೆ.

ಪ್ರವಾಸಿ ಕ್ಷೇತ್ರಗಳು ಸೊರಗಿವೆ. ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ರಸ್ತೆ ಸಂಪರ್ಕವೂ ಸರಿಯಿಲ್ಲ ಎಂಬ ಆಪಾದನೆಯಿದೆ.

ಅನಧಿಕೃತ ಹೋಂಸ್ಟೇ ಹಾವಳಿ ಹೆಚ್ಚಾಗಿದೆ. ಹಿಂದಿನ ಸಭೆಯಲ್ಲಿ ಸಚಿವರು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಆದರೂ, ನೋಂದಣಿ ಪ್ರಗತಿ ಕಂಡಿಲ್ಲ. ಜಿಲ್ಲಾಡಳಿತಕ್ಕೂ ತಲೆನೋವಾಗಿರುವ ಈ ಸಮಸ್ಯೆಯನ್ನು ಉಸ್ತುವಾರಿ ಸಚಿವರು, ಹೇಗೆ ಬಗೆಹರಿಸಲಿದ್ದಾರೆ ಎಂಬ ಪ್ರಶ್ನೆಯಿದೆ.

ಸಾಲು ಸಾಲು ಸಮಸ್ಯೆಗಳು: ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಬೆಳೆಗಾರರಿಗೆ ಈ ಬಾರಿ ಮಳೆ ನೋವು ತಂದಿದೆ. ರಸ್ತೆಗಳು ಹಾಳಾಗಿವೆ. ಮುಖ್ಯಮಂತ್ರಿಯೇ ಜಿಲ್ಲೆಗೆ ಖುದ್ದು ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಜತೆಗೆ, ಹಣವೂ ಬಿಡುಗಡೆಯಾಗಿದೆ. ಆದರೆ, ಪರಿಹಾರ ಕಾಮಗಾರಿಯ ಪ್ರಗತಿ ಕಾಣಿಸುತ್ತಿಲ್ಲ. ಇನ್ನು ಖಾಸಗಿ ಬಸ್‌ ನಿಲ್ದಾಣ ಸ್ಥಳಾಂತರವಾಗಿಲ್ಲ. ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸುವ ಜವಾಬ್ದಾರಿ ಉಸ್ತುವಾರಿ ಸಚಿವರ ಮೇಲಿದೆ.

ಮುಖಂಡರ ಭೇಟಿ: ಇನ್ನು ಉಸ್ತುವಾರಿ ಸಚಿವರ ನೇಮಕ ಆಗುತ್ತಿದ್ದಂತೆಯೇ ಬೆಂಗಳೂರಿನಲ್ಲಿರುವ ಸಚಿವರ ಅಧಿಕೃತ ನಿವಾಸಕ್ಕೆ ಬುಧವಾರ ತೆರಳಿದ ಮುಖಂಡರು, ಜಿಲ್ಲೆಯ ಸಮಸ್ಯೆಗಳು ಹಾಗೂ ಪಕ್ಷದಲ್ಲಿರುವ ಗೊಂದಲಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ನಿಯೋಗದಲ್ಲಿ ಜಿಲ್ಲಾ ಅಧ್ಯಕ್ಷ ಸಂಕೇತ್‌ ಪೂವಯ್ಯ, ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಬಿ. ಗಣೇಶ್, ರಾಜ್ಯ ಉಪಾಧ್ಯಕ್ಷ ಎಂ.ಎಂ. ಶರೀಫ್, ಜಿಲ್ಲಾ ವಕ್ತಾರ ಅದೀಲ್ ಪಾಷ, ಮಡಿಕೇರಿ ಕ್ಷೇತ್ರದ ಹಿಂದುಳಿದ ವರ್ಗದ ಅಧ್ಯಕ್ಷ ಎನ್.ಸಿ. ಸುನಿಲ್, ಜಿಲ್ಲಾ ಯುವ ಜನತಾ ದಳದ ಪ್ರಧಾನ ಕಾರ್ಯದರ್ಶಿ ಕೆ.ಜಿ. ಜಾಸೀರ್, ಹಿರಿಯ ಉಪಾಧ್ಯಕ್ಷ ಡಿ.ಪಿ. ಭೋಜಪ್ಪ, ವಿರಾಜಪೇಟೆ ನಗರ ಅಧ್ಯಕ್ಷ ಪಿ.ಎ. ಮಂಜುನಾಥ್, ಮಡಿಕೇರಿ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎ. ಇಬ್ರಾಹಿಂ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !