ಕುಶಾಲನಗರ: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೂಡಿಗೆ ಸರ್ಕಾರಿ ಕ್ರೀಡಾ ಶಾಲಾ ಹಾಕಿ ಟರ್ಫ್ ಮೈದಾನದಲ್ಲಿ ಸೋಮವಾರ ಆರಂಭವಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ 2 ದಿನಗಳ ಕಾಲದ ರಾಜ್ಯಮಟ್ಟದ ಲೀಗ್ ಹಾಕಿ ಟೂರ್ನಿಯಲ್ಲಿ ಮೈಸೂರು ವಿಭಾಗ, ಕೂಡಿಗೆ ಕ್ರೀಡಾಶಾಲೆ, ಬೆಳಗಾವಿ ಹಾಗೂ ಕಲಬುರಗಿ ತಂಡಗಳು ಮುನ್ನಡೆ ಸಾಧಿಸಿದವು.
ಪ್ರೌಢಶಾಲೆ ಬಾಲಕಿಯರ ವಿಭಾಗದಲ್ಲಿ ಕೂಡಿಗೆ ಕ್ರೀಡಾಶಾಲೆಯು ಕಲಬುರಗಿ ವಿಭಾಗ ತಂಡವನ್ನು 16–00 ಗೋಲಿನಿಂದ, ಮೈಸೂರು ವಿಭಾಗ ತಂಡವು ಬೆಂಗಳೂರು ವಿಭಾಗ ತಂಡವನ್ನು 10–00 ಗೋಲಿನಿಂದ ಮಣಿಸಿದವು. ಇದೇ ವಿಭಾಗದ ಮತ್ತೊಂದು ಪಂದ್ಯದಲ್ಲಿ ಕೂಡಿಗೆ ಕ್ರೀಡಾಶಾಲೆಯು ಬೆಂಗಳೂರು ತಂಡವನ್ನು 10–00ಯಿಂದ, ಮೈಸೂರು ವಿಭಾಗ ಬೆಳಗಾವಿ ವಿಭಾಗದ ತಂಡವನ್ನು 28–00 ಗೋಲಿನಿಂದ ಸೋಲಿಸಿದವು.
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ವಿಭಾಗವು ಬೆಂಗಳೂರು ವಿಭಾಗದ ತಂಡವನ್ನು 9–0 ಗೋಲಿನಿಂದ, ಕಲಬುರಗಿ ವಿಭಾಗ ತಂಡವು ಮೈಸೂರು ವಿಭಾಗ ತಂಡವನ್ನು 2–1 ಗೋಲಿನಿಂದ ಸೋಲಿಸಿದವು.
ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಕಲಬುರಗಿ ವಿಭಾಗವು ಬೆಳಗಾವಿ ವಿಭಾಗದ ತಂಡವನ್ನು 2–0 ಅಂತರದಿಂದ, ಮೈಸೂರು ವಿಭಾಗವು ಬೆಂಗಳೂರು ವಿಭಾಗವನ್ನು 9–0 ಅಂತರದಿಂದ ಮಣಿಸಿದವು.
ಮಂಗಳವಾರವೂ ಪಂದ್ಯಾವಳಿಗಳು ನಡೆಯಲಿವೆ.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಎಂ.ಚಂದ್ರಕಾಂತ್ ಟೂರ್ನಿಗೆ ಚಾಲನೆ ನೀಡಿದರು. ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಭಾಸ್ಕರ್ ನಾಯಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಸೌಮ್ಯಾ ಪೊನ್ನಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್,
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ವಿ.ಮಂಜೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.