ಶನಿವಾರ, ನವೆಂಬರ್ 16, 2019
22 °C
ಕೊಡವ ಸಮಾಜದಲ್ಲಿ ಪ್ರದರ್ಶನಕ್ಕೆ ಸಿದ್ಧತೆ: ದಿನಕ್ಕೆ ಮೂರು ಪ್ರದರ್ಶನ

24ರಂದು ‘ಕೊಡಗ್‌ರ ಸಿಪಾಯಿ’ ಚಲನಚಿತ್ರ ಬಿಡುಗಡೆ

Published:
Updated:

ಮಡಿಕೇರಿ: ‌ಕೂರ್ಗ್ ಕಾಫಿವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತಿರ ಪ್ರಕಾಶ್‌ ನಿರ್ದೇಶನದ ಕೊಡವ ಕಾದಂಬರಿ ಆಧಾರಿತ ‘ಕೊಡಗ್‌ರ ಸಿಪಾಯಿ’ ಚಲನಚಿತ್ರ ಸೆ.24ರಂದು ತೆರೆ ಕಾಣಲಿದೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10ಕ್ಕೆ ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಸಿನಿಮಾ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುನೀಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ, ಬಾಳ್ಗೋಡು ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಚಲನಚಿತ್ರ ವೀಕ್ಷಣೆಗೆ ಜಿಲ್ಲೆಯ ಕೊಡವ ಸಮಾಜಗಳಲ್ಲಿ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ. ಜಿಲ್ಲೆಯ ಕುಟ್ಟ, ಮೂರ್ನಾಡು, ಮಾದಾಪುರ ಸೇರಿದಂತೆ ಮೈಸೂರು ಮತ್ತು ಬೆಂಗಳೂರಿನ ಕೊಡವ ಸಮಾಜಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಮಡಿಕೇರಿ ಕೊಡವ ಸಮಾಜದಲ್ಲಿ ವೀಕ್ಷಣೆಗೆ ತಯಾರಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಚಲನಚಿತ್ರ ಬೆಳಿಗ್ಗೆ 10ಕ್ಕೆ ಮೊದಲ ಪ್ರದರ್ಶನ ಆರಂಭಗೊಳ್ಳಲಿದ್ದು, ಮಧ್ಯಾಹ್ನ 2ಕ್ಕೆ ಹಾಗೂ ಸಂಜೆ 6.30ಕ್ಕೆ ಮೂರನೇ ಪ್ರದರ್ಶನ ನಡೆಯಲಿದೆ. ಚಿತ್ರದಲ್ಲಿ ಕೊಡಗಿನ ಒಬ್ಬ ಯೋಧ ಸೇನೆಯಿಂದ ನಿವೃತ್ತ ಹೊಂದಿದ ನಂತರ ಸಾಮಾಜಿಕ ಕಳಕಳಿ, ದೇಶಾಭಿಮಾನ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನಚಿತ್ರವಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ವಾಂಚೀರ ವಿಠಲ್ ನಾಣಯ್ಯ, ಬರಹಗಾರ್ತಿ ಉಳುವಂಗಡ ಕಾವೇರಿ ಉದಯ, ಬಳೆಡ ಪ್ರತೀಶ್ ಪೂವಯ್ಯ, ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)