ಪ್ರಕೃತಿ ಸಿರಿಯ ಊರಿಗೇ ಸಂಕಷ್ಟ; ಕೃಷಿ ಭೂಮಿ ಕಳೆದುಕೊಂಡ ಸೂರ್ಲಬ್ಬಿ ಗ್ರಾಮಸ್ಥರು

7

ಪ್ರಕೃತಿ ಸಿರಿಯ ಊರಿಗೇ ಸಂಕಷ್ಟ; ಕೃಷಿ ಭೂಮಿ ಕಳೆದುಕೊಂಡ ಸೂರ್ಲಬ್ಬಿ ಗ್ರಾಮಸ್ಥರು

Published:
Updated:
Deccan Herald

ಸೋಮವಾರಪೇಟೆ: ಮಹಾಮಳೆಯಿಂದ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮವೂ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ಮಳೆ ಬಿಡುವು ನೀಡಿದ್ದರೂ ಸವಲತ್ತುಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿದ ಗ್ರಾಮಗಳಲ್ಲಿ ಒಂದಾಗಿರುವ ಸೂರ್ಲಬ್ಬಿ ಗ್ರಾಮವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸ್ಥಳೀಯ ನೋವು ತೋಡಿಕೊಂಡಿದ್ದಾರೆ.

ಮೂಲ ಸೌಲಭ್ಯ ಕಳೆದುಕೊಂಡು ಅತಂತ್ರರಾಗಿರುವವರ ಸಂಕಷ್ಟ ನಿವಾರಣೆಗೆ ಜಿಲ್ಲಾಡಳಿತ ಸ್ಪಂದಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಪ್ರಕೃತಿ ಸಿರಿಯ ತವರು, ಬೆಟ್ಟಗುಡ್ಡಗಳ ಪುಟ್ಟ ಗ್ರಾಮ ಸೂರ್ಲಬ್ಬಿಯಲ್ಲಿ ಹೆಚ್ಚಿನ ರೈತರು ತುಂಡು ಭೂಮಿಯನ್ನೇ ಆಶ್ರಯಿಸಿ ಬದುಕು ಸಾಗಿಸುತ್ತಿದ್ದಾರೆ. ಇದರಲ್ಲಿಯೇ ವರ್ಷವಿಡೀ ಕೃಷಿ ಚಟುವಟಿಕೆಗಳನ್ನು ನಡೆಸುವ ಇವರು, ಮನೆಗಳಿಗಾಗುವಷ್ಟು ಭತ್ತವನ್ನು ಬೆಳೆದ ನಂತರ ತರಕಾರಿಯನ್ನೂ ಬೆಳೆಯುತ್ತಾರೆ. ಅತಿವೃಷ್ಟಿಯ ಕಾರಣ ಹಲವರು ಇರುವ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದಾರೆ. ಭೂ ಕುಸಿತದಿಂದಾಗಿ ಹೆಚ್ಚಿನವರ ಕಾಫಿ ತೋಟ ಮತ್ತು ಗದ್ದೆಗಳು ನಷ್ಟವಾಗಿವೆ. ಬೆಳೆಯನ್ನು ಕಳೆದುಕೊಂಡು ಇಲ್ಲಿನವರು ಬರಿಗೈಯಾಗಿ ಮುಂದಿನ ಜೀವನದ ಆತಂಕ ಎದುರಿಸುವಂತಾಗಿದೆ.

ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಗ್ರಾಮದ ತೋಟಗಳಲ್ಲಿನ ಕಾಫಿ ಬೆಳೆಗೆ ಕೊಳೆ ರೋಗ ಬಂದು ನಷ್ಟವಾಗಿದೆ. ಕೇವಲ 20ರಿಂದ 30 ಚೀಲಗಳಷ್ಟು ಕಾಫಿ ಫಸಲನ್ನಷ್ಟೇ ಪಡೆಯುತ್ತಿದ್ದ ಇಲ್ಲಿನ ಕಾಫಿ ಬೆಳೆಗಾರರು ಫಸಲಿನೊಂದಿಗೆ ಕಾಫಿ ಗಿಡಗಳನ್ನೂ ಕಳೆದುಕೊಂಡಿದ್ದಾರೆ.

ಭಾರೀ ಮಳೆಯಿಂದಾಗಿ ಗ್ರಾಮ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಅದರಲ್ಲಿ ವಾಸಿಸುವುದು ಕಷ್ಟಕರವಾಗಿದೆ. ಸಮಸ್ಯೆ ಪರಿಹರಿಸಲು ಯಾರೂ ಮುಂದಾಗುತ್ತಿಲ್ಲ ಎಂದು ಗ್ರಾಮಸ್ ರಾಮಪ್ಪ ದೂರಿದರು.

ಭಾರೀ ಮಳೆಯ ಕಾರಣ ಗ್ರಾಮದ ರಸ್ತೆ ವ್ಯವಸ್ಥೆಗಳು ಸಂಪೂರ್ಣ ಹದಗೆಟ್ಟಿರುವುದರಿಂದ ಯಾವುದೇ ಬಸ್‌ಗಳ ಸಂಚಾರವಿಲ್ಲ. ಗ್ರಾಮದಿಂದ ಬೇರೆಡೆ ಹೋಗಿ ಬರಲು ದುಪ್ಪಟ್ಟು ಹಣ ನೀಡಿ ಖಾಸಗಿ ವಾಹನಗಳನ್ನು ಆಶ್ರಯಿಸಬೇಕಿದೆ. ಸಂಪರ್ಕ, ಸಂಚಾರ ವ್ಯವಸ್ಥೆಗಳಿಲ್ಲದೇ ಆರೋಗ್ಯ ಕೇಂದ್ರಗಳಿಗೆ ವೈದ್ಯರು, ದಾದಿಯರು ಬರಲಾಗದಂಥ ಪರಿಸ್ಥಿತಿ ಇದೆ. ಇದೀಗ ಗ್ರಾಮಸ್ಥರು ಆರೋಗ್ಯ ಸಮಸ್ಯೆಗಳಿಗೆ ಮಾದಾಪುರದ ಅರೋಗ್ಯ ಕೇಂದ್ರಕ್ಕೇ ಹೋಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !