ಭಾನುವಾರ, ಸೆಪ್ಟೆಂಬರ್ 26, 2021
27 °C

ಶನಿವಾರಸಂತೆ: ‘ಮಕ್ಕಳ ಕಟ್ಟೆ’ ಕೆರೆಗೆ ಕೊನೆಗೂ ಪುನಶ್ಚೇತನ ಭಾಗ್ಯ

ಶ.ಗ.ನಯನತಾರಾ Updated:

ಅಕ್ಷರ ಗಾತ್ರ : | |

Prajavani

ನಮ್ಮ ಕೆರೆ ನಮ್ಮ ಭವಿಷ್ಯ 3
***************

ಶನಿವಾರಸಂತೆ: ತುಂಬಿದ ಹೂಳು, ಆಳೆತ್ತರಕ್ಕೆ ಬೆಳೆದಿರುವ ಕಾಡು, ಕಳೆ ಸಸ್ಯಗಳಿಂದ ವಿನಾಶದ ಅಂಚಿಗೆ ತಲುಪಿದ್ದ ಪುರಾತನ ಕೆರೆ. ಆ ಕೆರೆಯ ಹೆಸರು ಮಕ್ಕಳಕಟ್ಟೆ ಕೆರೆ. ಅದಕ್ಕೆ ಉದ್ಯೋಗ ಖಾತ್ರಿ ಯೋಜನೆ ಅಡಿ ಪುನಶ್ಚೇತನ ಭಾಗ್ಯ ಲಭಿಸುತ್ತಿದೆ.

ಪುರಾತನ ಕೆರೆಯನ್ನು ಹಿಂದೆ ‘ಮಕ್ಕಳ ಕಟ್ಟೆ ಕೆರೆ’ ಎಂದು ಕರೆಯುತ್ತಿದ್ದರು. ನಂತರ, ಕೆರೆಯ ಹೆಸರು ಬದಲಾಯಿತು. ಅಂದಿನ ಪುರಸಭಾ ಅಧ್ಯಕ್ಷ ಬಿ.ಗಂಗಪ್ಪ ಕರ್ಕೇರ ಅವರ ಮನೆಯ ಪಕ್ಕ ಕಾವೇರಿ ರಸ್ತೆಗೆ ಹೊಂದಿಕೊಂಡಂತೆ ಈ ಕೆರೆ ಇದ್ದುದರಿಂದ ಜನರು ಕೆರೆಯನ್ನು ‘ಗಂಗಪ್ಪ ಮಾಸ್ಟರ್ ಕೆರೆ’ ಎಂದು ಕರೆಯಲಾರಂಭಿಸಿದರು. ಇಂದಿಗೂ ಊರ ಹಿರಿಯರ ಮಾತಲ್ಲಿ ಈ ಹೆಸರೇ ಉಳಿದುಕೊಂಡಿದೆ.

ಈ ಕೆರೆ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದ್ದರೂ ಮಳೆಗಾಲದಲ್ಲಿ ತುಂಬಿ ತುಳುಕುತ್ತಿತ್ತು. ಮೀನುಗಳಿಗೆ, ಪಕ್ಷಿಗಳಿಗೆ ಆಶ್ರಯ ತಾಣವಾಗುತ್ತಿತ್ತು. ದನಕರುಗಳ ದಾಹ ಇಂಗಿಸುತ್ತಿತ್ತು. ಯಾವುದೇ ಕಟ್ಟಡ ಅಥವಾ ಮನೆ ಕಟ್ಟುವವರಿಗೆ, ಇಟ್ಟಿಗೆ ಮಾಡುವವರಿಗೆ ಸಾಕಷ್ಟು ನೀರು ಒದಗಿಸುತ್ತಿತ್ತು. 1983ರ ವರೆಗೆ ಪುರಸಭೆ ವ್ಯಾಪ್ತಿಗೆ ಒಳಪಟ್ಟ ಈ ಕೆರೆ ಏರಿಯನ್ನು ಹೊಂದಿ ಸುಸ್ಥಿತಿಯಲ್ಲಿ ಇತ್ತು. ಏರಿಯ ಮೇಲೆ ಉದ್ಯಾನ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ನಂತರದ ಈ ಕೆರೆ ವಿನಾಶದ ಅಂಚಿಗೆ ಬಂದಿತು. ಕೆರೆ ಕಸದ ಗುಂಡಿಯಾಗಿ ಪರಿವರ್ತಿತವಾಯಿತು.

ಚರಂಡಿಗಳಲ್ಲಿ ಹರಿದು ಬರುವ ಅರ್ಧ ಗ್ರಾಮದ ಕೊಳಚೆ ನೀರು, ಕಸಕಡ್ಡಿಯೆಲ್ಲವೂ ಕೆರೆ ಒಡಲನ್ನು ಸೇರುತ್ತಿತ್ತು. ಕಾರ್ಮಿಕರೂ ಕಸ-ಕೊಳಚೆಯನ್ನೆಲ್ಲಾ ತಂದು ಕೆರೆ ಬದಿಗೆ ಸುರಿಯುತ್ತಿದ್ದರು.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಹೊಟೇಲ್‌ಗಳ, ಕಲ್ಯಾಣ ಮಂಟಪಗಳ ಎಂಜಲೆಲೆ ರಾಶಿಯನ್ನು ತಂದು ಕೆರೆಗೇ ಸುರಿಯಲಾಗುತ್ತಿತ್ತು. ಹೊಸಮನೆ ನಿರ್ಮಾಣ, ದುರಸ್ತಿ, ತೋಟಗಾರಿಕೆಯಲ್ಲಿ ಹೆಚ್ಚಾದ ಮಣ್ಣನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ತಂದು ಕೆರೆ ಬದಿಯಲ್ಲಿ ಸುರಿಯಲಾಗುತ್ತಿತ್ತು.

ಇವುಗಳ ಪರಿಣಾಮವೋ ಎಂಬಂತೆ ಕೆರೆ ಒಡಲಲ್ಲಿ ಆಳೆತ್ತರದ ಕಸ, ಕಳೆ ಸಸ್ಯಗಳು ಬೆಳೆದು ನಿಂತವು. ಕೆರೆ ಎಂಬ ಕುರುಹೂ ಮಾಯವಾಗಿತ್ತು. ಕೆರೆ ಬಳಿಯೇ ಹಲವು ಕುಟುಂಬಗಳು ವಾಸವಾಗಿದ್ದು ಹಗಲುರಾತ್ರಿ ಮೂಗು ಮುಚ್ಚಿ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು.

ಇದೀಗ ಗ್ರಾಮ ಪಂಚಾಯಿತಿ ಮಕ್ಕಳ ಕಟ್ಟೆ ಕೆರೆಗೆ ಕಾಯಕಲ್ಪ ನೀಡಿ, ಪುನಶ್ಚೇತನಗೊಳಿಸಲು ಕ್ರಮ ಕೈಗೊಂಡಿದೆ.

ನಾಲ್ಕೈದು ತಿಂಗಳ ಹಿಂದೆ ಕೆರೆಯ ಹೂಳು ತೆಗೆಸಿ, ಕಾಡುಗಿಡ, ಕಳೆಸಸ್ಯವನ್ನೆಲ್ಲಾ ಜೆಸಿಬಿಯಿಂದ ತೆರವುಗೊಳಿಸಿ ಸ್ವಚ್ಛಗೊಳಿಸಿತ್ತು. ಕೋವಿಡ್-19 ಲಾಕ್‌ಡೌನ್‌ನಿಂದ ಪುನಃ ಕೆಲಸ ಸ್ಥಗಿತಗೊಂಡಿತ್ತು. ಕ್ರಿಯಾ ಯೋಜನೆ ರೂಪಿಸಿದ್ದು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯನ್ನು ಅಭಿವೃದ್ಧಿಪಡಿಸಲು ಕಾಮಗಾರಿ ಆರಂಭಿಸಲು ನಿರ್ಧರಿಸಿದೆ. ಸುತ್ತಲು ಕಲ್ಲು ಅಳವಡಿಸಿ, ಏರಿ ನಿರ್ಮಿಸಲಾಗುವುದು. ಏರಿಯ ಮೇಲೆ ಉದ್ಯಾನ ನಿರ್ಮಿಸಿ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ.ಮೇದಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು