ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಇರಲಿ ಸಮರ್ಪಕ ಯಾಂತ್ರೀಕರಣ: ಸಚಿವ ಎನ್.ಚೆಲುವರಾಯಸ್ವಾಮಿ

ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎನ್.ಚೆಲುವರಾಯಸ್ವಾಮಿ ಪ್ರತಿಪಾದನೆ
Published 4 ನವೆಂಬರ್ 2023, 6:25 IST
Last Updated 4 ನವೆಂಬರ್ 2023, 6:25 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ವೈಜ್ಞಾನಿಕ ಕೃಷಿ ವಿಧಾನ, ಸಮರ್ಪಕ ಯಾಂತ್ರೀಕರಣ, ಸಮಗ್ರ ಬೇಸಾಯ ಪದ್ಧತಿ ಅಳವಡಿಕೆಯಿಂದ ರೈತರ ಆರ್ಥಿಕತೆ ಹೆಚ್ಚಲಿದೆ’ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.

ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬೆಳ್ಳಿ ಹಬ್ಬದ ಅಂಗವಾಗಿ 3 ದಿನಗಳ ಕಾಲ ಆಯೋಜಿಸಿರುವ ಕೃಷಿ ಯಂತ್ರ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿಕರ ಅನುಕೂಲಕ್ಕಾಗಿ 600ಕ್ಕೂ ಹೆಚ್ಚು ಯಂತ್ರಧಾರೆ ಕೇಂದ್ರಗಳನ್ನು ರಾಜ್ಯ ಸರ್ಕಾರ ತೆರೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಯಾಂತ್ರೀಕರಣ ಪ್ರೋತ್ಸಾಹ ಯೋಜನೆ ಜಾರಿಗೆ ತರಲಾಗುತ್ತಿದೆ. ರಾಜ್ಯದಲ್ಲಿ ಹೈಟೆಕ್ ಕಟಾವು ಹಬ್ ಸ್ಥಾಪನೆಗೆ ₹ 50 ಕೋಟಿ ಮೀಸಲಿರಿಸಲಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲಿ ಜನತೆಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ನುಡಿದಂತೆ ನಡೆದಿದ್ದು ಮುಂದೆಯೂ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ. ರೈತರಿಗೆ ₹ 5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳಿಗೂ ಆರ್ಥಿಕ ನೆರವು ಒದಗಿಸುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ಕೃಷಿ ಯಂತ್ರ ಮೇಳ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದ ಶಾಸಕ ಎ.ಎಸ್.ಪೊನಣ್ಣ ಮಾತನಾಡಿ, ‘ರಾಜ್ಯ ಸರ್ಕಾರ ಕೃಷಿಕರ ಹಿತ ಕಾಯಲು ಸದಾ ಬದ್ಧವಾಗಿದೆ. ಜಿಲ್ಲೆಯೂ ಸೇರಿದಂತೆ ರಾಜ್ಯದೆಲ್ಲೆಡೆ ರೈತರು ಎದುರಿಸುತ್ತಿರುವ ಸಮಸ್ಯೆಗಳೆಲ್ಲವನ್ನೂ ಪರಿಹರಿಸಲಾಗುವುದು. ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ರೈತರು ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

ಹಾಸನ ಆಕಾಶವಾಣಿ ಕೇಂದ್ರದ ವಿಜಯ್ ಅಂಗಡಿ, ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟಗಾರ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಐವರು ಕೃಷಿ ಸಾಧಕರನ್ನು ಸನ್ಮಾನಿಸಲಾಯಿತು.

ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ, ಉಪಾಧ್ಯಕ್ಷ ಬೆಳ್ಳಿಯಪ್ಪ, ಕಾರ್ಯದರ್ಶಿ ರಾಕೇಶ್ ಪೋವಯ್ಯ, ಖಜಾಂಚಿ ಕೆ.ಎನ್.ಉತ್ತಪ್ಪ, ರಾಜಾ ನಂಜಪ್ಪ, ಪ್ರಾಂಶುಪಾಲ ಪ್ರೊ.ಬಸವರಾಜು, ಕೃಷಿ ಮೇಳ ಸಂಚಾಲಕಿ ರೋಹಿಣಿ ತಿಮ್ಮಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಲೀಲಾವತಿ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೃಷಿ ಇಲಾಖೆ ನಿರ್ದೇಶಕ ಜಿ.ಟಿ.ಪುತ್ರ ಹಾಜರಿದ್ದರು.

ಬಳಿಕ ಕಾಲೇಜಿನ ಪಕ್ಕದಲ್ಲಿಯೇ ಇರುವ ಕೃಷಿ ಪ್ರಶಸ್ತಿ ವಿಜೇತ ರವಿಶಂಕರ್ ಅವರ ಭತ್ತ ಸಸ್ಯ ತಳಿ ಸಂರಕ್ಷಣಾ ಕ್ಷೇತ್ರಕ್ಕೆ ಭೇಟಿ ನೀಡಿ 32 ಬಗೆಯ ಭತ್ತದ ತಳಿ ಬೆಳೆ ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT