ಮಡಿಕೇರಿ: ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ನಡೆದ ಕೊಡಗು ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ ಜಿಲ್ಲೆಯ 150ಕ್ಕೂ ಅಧಿಕ ಶಾಲೆಗಳ 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾದರು.
ಹಲವು ಸ್ಪರ್ಧೆಗಳಲ್ಲಿ ಸಾಹಸ ಮರೆಯುವ ಮೂಲಕ ಕ್ರೀಡಾಭಿಮಾನಿಗಳ ಕಣ್ಮನ ಸೂರೆಗೊಂಡರು. ಇಡೀ ದಿನ ಮೈದಾನದಲ್ಲಿ ನಡೆದ ಕ್ರೀಡೆಗಳಿಗೆ ಬಿಸಿಲೂ ಕೊಂಚ ಬಿಡವು ನೀಡಿತ್ತು. ಮೋಡ ಕವಿದ ವಾತಾವರಣದ ಮಧ್ಯೆ ಆಗೊಮ್ಮೆ ಈಗೊಮ್ಮೆ ಬೀಳುತ್ತಿದ್ದ ತುಂತುರು ಹನಿಗಳು ವಿದ್ಯಾರ್ಥಿಗಳ ದಣಿವನ್ನು ತಣಿಸಿತು.
14 ಹಾಗೂ 17ರ ವಯೋಮಿತಿ ಎಂಬ ಎರಡು ವಿಭಾಗಗಳಲ್ಲಿ ಬಾಲಕ ಮತ್ತು ಬಾಲಕಿಯರು ವಿವಿಧ ಸ್ಪರ್ಧೆಗಳಲ್ಲಿ ಸೆಣಸಿದರು.
14ರ ವಯೋಮಿತಿಯವರಿಗಾಗಿ 100 ಮೀ, 200ಮೀ, 400ಮೀ, 600 ಮೀ ಓಟ, 4x100 ರಿಲೆ, ಉದ್ದಜಿಗಿತ, ಎತ್ತರ ಜಿಗಿತ, ಶಾಟ್‌ಪುಟ್, ಡಿಸ್ಕಸ್ ಥ್ರೋ ಕ್ರೀಡೆಗಳು ನಡೆದವು.
17ರ ವಯೋಮಿತಿಯಲ್ಲಿ 100 ಮೀ, 200 ಮೀ, 400 ಮೀ, 800 ಮೀ, 1,500 ಮೀ, 3,000 ಮೀ, 5,000 ಮೀ (ನಡಿಗೆ), 4x100 ರಿಲೇ, ಉದ್ದ ಜಿಗಿತ, ತ್ರಿವಿಧ ಜಿಗಿತ, ಎತ್ತರ ಜಿಗಿತ, ಶಾಟ್‌ಪುಟ್, ಡಿಸ್ಕಸ್ ಥ್ರೋ, ಜಾವೆಲಿನ್ ಥ್ರೋ, ಹ್ಯಾಮರ್ ಥ್ರೋ ಗಳು ನಡೆದವು.
ಇದಕ್ಕೂ ಮುನ್ನ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎ.ಸೌಮ್ಯ ಪೊನ್ನಪ್ಪ, ‘ಕ್ರೀಡಾಪಟುಗಳು ಸ್ಪರ್ಧಾ ಹಾಗೂ ಕ್ರೀಡಾ ಮನೋಭಾವದಿಂದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು’ ಎಂದು ಹೇಳಿದರು.
ಕೊಡಗಿನ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗುವ ಮೂಲಕ ನಮ್ಮ ಜಿಲ್ಲೆಯ ಕೀರ್ತಿ ಎತ್ತಿಹಿಡಿಯಬೇಕು ಎಂದರು.
ಮಡಿಕೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಬಿ.ಸಿ.ದೊಡ್ಡೇಗೌಡ ಅವರು ಕ್ರೀಡಾಪಟುಗಳಿಂದ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ‘ಕ್ರೀಡೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಚೈತನ್ಯವನ್ನು ತುಂಬುತ್ತದೆ. ಎಲ್ಲಾ ಪ್ರವೃತ್ತಿಗಳಲ್ಲೂ ಉತ್ತಮ ಪ್ರವೃತ್ತಿ ಕ್ರೀಡೆಯೇ ಆಗಿದ್ದು ದೈಹಿಕ, ಮಾನಸಿಕ ಹಾಗೂ ಆರೋಗ್ಯ ಪೂರ್ಣತೆಗೆ ಕ್ರೀಡೆ ಸಹಕಾರಿಯಾಗಿದೆ’ ಎಂದರು.
ಮಡಿಕೇರಿ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಮಡಿಕೇರಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್, ವಿರಾಜಪೇಟೆ ತಾಲ್ಲೂಕು ದೈಹಿಕ ಪರಿವೀಕ್ಷಕಿ ಬಿ.ಆರ್.ಗಾಯಿತ್ರಿ, ಸೋಮವಾರಪೇಟೆ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಎಲ್.ಸುಕುಮಾರಿ, ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಎ.ಪ್ರವೀಣ್, ಜಿಲ್ಲಾ ಗ್ರೇಡ್2 ಪ್ರಾಥಮಿಕ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಟಿ.ಪೂರ್ಣೇಶ್, ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕ ನೌಕರರ ಸಂಘದ ಅಧ್ಯಕ್ಷ ಪ್ರಭುಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ಅನುದಾನಿತ ಪ್ರೌಢಶಾಲಾ ಮತ್ತು ಕಾಲೇಜು ನೌಕರರ ಸಂಘ ಮಡಿಕೇರಿ ಅಧ್ಯಕ್ಷ ಕೆ.ಶಿವಪ್ರಸಾದ್, ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕ ಸಂಘ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪಿ.ಎಂ.ಕಿರಣ್, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕೆ.ಜಿ.ಅಶೋಕ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಬಿ.ಕೆ.ಶಿವಶಂಕರ್ ಇದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಕೆ.ಶಿವಪ್ರಸಾದ್ ಅವರು ದೈಹಿಕ ಶಿಕ್ಷಕರಿಗೆ ಹಾಗೂ ಕ್ರೀಡಾಪಟು ದೇಚಮ್ಮ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮೂರ್ನಾಡು ಜ್ಞಾನ ಜ್ಯೋತಿ ಶಾಲೆಯ ಬ್ಯಾಂಡ್ ವಾದ್ಯದೊಂದಿಗೆ ವಿವಿಧ ತಾಲ್ಲೂಕಿನ ಕ್ರೀಡಾಪಟುಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಇದೇ ವೇಳೆ ಮಡಿಕೇರಿ ತಾಲ್ಲೂಕು ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸಿದ ದೈಹಿಕ ಶಿಕ್ಷಣ ಶಿಕ್ಷಕ ಸಿ.ಕೆ.ತಿಮ್ಮಯ್ಯ ಅವರನ್ನು ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.