‘ಆಸರೆ’ ಕಲ್ಪಿಸಲು ಮಿಡಿದ ಹೃದಯಗಳು

ಮಂಗಳವಾರ, ಜೂಲೈ 16, 2019
23 °C
ಸದ್ದಿಲ್ಲದ ‘ಸೇವಕ’ ನಾರಾಯಣ್‌ಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿಗೆ ರವಾನೆ

‘ಆಸರೆ’ ಕಲ್ಪಿಸಲು ಮಿಡಿದ ಹೃದಯಗಳು

Published:
Updated:
Prajavani

ಮಡಿಕೇರಿ: ನಗರದಲ್ಲಿ ಚಿಂದಿ ಆಯುತ್ತಾ ನೆಲೆಯಿಲ್ಲದೇ, ಸಂಬಂಧಿಕರಿಂದಲೂ ದೂರವಾಗಿ ಬಸ್‌ ನಿಲ್ದಾಣ, ಪಾಳು ಬಿದ್ದ ಕಟ್ಟಡದಲ್ಲಿ ಆಶ್ರಯ ಪಡೆದಿದ್ದ ಐವರನ್ನು ನಗರ ಹಿತರಕ್ಷಣಾ ವೇದಿಕೆ ಹಾಗೂ ವಿಕಾಸ್‌ ಜನಸೇವಾ ಟ್ರಸ್ಟ್‌ ಸದಸ್ಯರು ಬೆಂಗಳೂರಿನ ಬನ್ನೇರಘಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರಿಗೆ ‘ಹೊಸ ಆಸರೆ’ ಕಲ್ಪಿಸುವ ಕಾರ್ಯವನ್ನೂ ಮಾಡಿದ್ದಾರೆ.

ಮಡಿಕೇರಿಯಿಂದ ಮೂವರು, ಪಾಲಿಬೆಟ್ಟದಿಂದ ಇಬ್ಬರು ಸೇರಿ ಒಟ್ಟು ಐವರನ್ನು ಶುಚಿಗೊಳಿಸಿ, ತಲೆ ಕೂದಲನ್ನು ತೆಗೆಸಿ, ಹೊಸ ಬಟ್ಟೆ ಹಾಕಿ ಆ್ಯಂಬುಲೆನ್ಸ್‌ ಮೂಲಕ ಬೆಂಗಳೂರಿನ ಆರ್‌ವಿಎಂ ಆಸ್ಪತ್ರೆಗೆ ಮಂಗಳವಾರ ಕಳುಹಿಸಿ ಕೊಡಲಾಯಿತು.

ಈ ಮಾನವೀಯ ಕೆಲಸಕ್ಕೆ ಹಲವು ಯುವಕರು ಕೈಜೋಡಿಸಿದರು. ಮಂಗಳವಾರ ಬೆಳಿಗ್ಗೆ ನಾರಾಯಣ ಅವರನ್ನು ಆ್ಯಂಬುಲೆನ್ಸ್‌ಗೆ ಹತ್ತಿಸುವಾಗ ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಾಲಿಗಳೂ ತೇವಗೊಂಡಿದ್ದವು.

‘ಇವರ್‍ಯಾರೂ ಚಿಂದಿ ಆಯುವ ವ್ಯಕ್ತಿಗಳಲ್ಲ. ಮಾನಸಿಕ ಅಸ್ವಸ್ಥರೂ ಅಲ್ಲ. ವಿಧಿಯಾಟ ಅವರನ್ನು ಆ ರೀತಿ ಮಾಡಿದೆಯಷ್ಟೆ. ಎಲ್ಲರಲ್ಲೂ ಬುದ್ಧಿಯೂ ಚೆನ್ನಾಗಿದೆ. ಚಿಕಿತ್ಸೆ ನೀಡಿದರೆ ಸರಿ ಹೋಗಲಿದೆಯೆಂಬ ಆಶಾಭಾವನೆಯಿಂದ ಬೆಂಗಳೂರಿಗೆ ಕಳುಹಿಸಿದ್ದೇವೆ’ ಎಂದು ಸದಸ್ಯರು ಹೇಳಿದರು.

ರಸ್ತೆಯೇ ಶುಚಿ: ನಾರಾಯಣ ಅವರ ವಾಸಸ್ಥಳ ಕೈಗಾರಿಕಾ ಬಡಾವಣೆಯ ಶಕ್ತಿಪ್ರೆಸ್‌ ಪಕ್ಕದ ಪಾಳು ಕಟ್ಟಡ. ಅದೆಷ್ಟೋ ವರ್ಷಗಳಿಂದ ಅವರು ಅದೇ ಕಟ್ಟಡದ ಎದುರು ಆಶ್ರಯ ಪಡೆದುಕೊಂಡಿದ್ದರು. ಯಾರಿಗೂ ತೊಂದರೆ ನೀಡಿದವರಲ್ಲ. ಗಡ್ಡದಾರಿ ವ್ಯಕ್ತಿ. ತಲೆಯ ಮೇಲೊಂದು ವಸ್ತ್ರ. ಹಳೇ ಕಟ್ಟಡದ ಮೆಟ್ಟಿಲೇ ಅವರಿಗೆ ಹಾಸಿಗೆ. ಆದರೆ, ಅವರ ಕಾಯಕ ಮಾತ್ರ ಚರಂಡಿ ಶುಚಿತ್ವ, ಚಿಂದಿ ಹೆರಕುವುದು. ತಾವಾಗಿಯೇ ಕೇಳಿದರೆ ಒಂದು ಕಟ್‌ ಬೀಡಿ, ಟೀಗೆ ಮಾತ್ರ ಬೇಡಿಕೆ ಇಡುತ್ತಿದ್ದರು. 

ನಗರಸಭೆಯ ಸಿಬ್ಬಂದಿ ಶುಚಿತ್ವಕ್ಕೆ ಬರದಿದ್ದರೂ, ನಾರಾಯಣ ಮಾತ್ರ ಮಳೆ ಹಾಗೂ ಚಳಿಯನ್ನೂ ಲೆಕ್ಕಿಸದೇ ನಿತ್ಯವೂ ಒಂದು ರಸ್ತೆಯನ್ನು ಶುಚಿಗೊಳಿಸುತ್ತಿದ್ದರು. ಅದೇ ಕೈಗಾರಿಕಾ ಬಡಾವಣೆಯ ರಸ್ತೆ. ಅವರು ಆಶ್ರಯ ಪಡೆದಿದ್ದ ಸ್ಥಳದಿಂದ ಹಿಡಿದು ಹಾಪ್‌ಕಾಮ್ಸ್‌, ಕೊಹಿನೂರು ರಸ್ತೆ... ಹೀಗೆ ನಿತ್ಯವೂ ಅಲ್ಲಿ ಚೀಲ ಹಿಡಿದು ಕಸಕಡ್ಡಿ ಆಯ್ದು ಶುಚಿ ಮಾಡುತ್ತಿದ್ದರು. ರಸ್ತೆಯಲ್ಲಿ ಒಂದೇ ಒಂದು ಕಸವೂ ಕಣ್ಣಿಗೆ ಬೀಳದಂತೆ ನೋಡಿಕೊಳ್ಳುತ್ತಿದ್ದರು.

ಕೆಲವು ಅಂಗಡಿ ಮಾಲೀಕರು, ನಾರಾಯಣ ಅವರ ಸಮಾಜ ಸೇವೆ ನೋಡಿ ಗೌರವ ನೀಡುತ್ತಿದ್ದರು. ಜತೆಗೆ, ಕೈಯಲ್ಲಿ ಆದಷ್ಟು ಸಹಾಯವನ್ನೂ ಮಾಡುತ್ತಿದ್ದರು. ಅದಕ್ಕೆ ಅವರದ್ದು ಧನ್ಯತಾಭಾವ. 

ಎಲ್ಲರೂ ಕೈಜೋಡಿಸಿದರು: ಜಿಲ್ಲಾ ಆಸ್ಪತ್ರೆಯು ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿತ್ತು. ಆದರೆ, ಬೆಂಗಳೂರಿಗೆ ಕಳುಹಿಸಲು ಖರ್ಚಿಗೆ ಸ್ವಯಂ ಸೇವಕರು ರಸ್ತೆಯಲ್ಲೇ ಚಂದಾ ಎತ್ತಿದರು. ಎಲ್ಲರೂ ನೆರವು ನೀಡಿದ್ದು ಮಾನವೀಯತೆಯ ಸ್ಪರ್ಶದ ಕ್ಷಣವಾಗಿತ್ತು. 

ಎಲ್ಲರದ್ದು ಅದೇ ಪ್ರಶ್ನೆ: ‘ನಾನು ಮಡಿಕೇರಿಯವನೇ. ಎಲ್ಲರೂ ಯಾವ ಊರು ಎಂದು ಕೇಳ್ತಾರೆ. ನನಗೂ ಹೇಳಿ ಸಾಕಾಗಿದೆ. ಅಲ್ಲೇ ಎಲ್ಲೋ ನನ್ನ ಮನೆಯಿದೆ. ಮಳೆ ಬಂದರೂ ಇಲ್ಲೇ ಮಲಗುವೆ’ ಎಂದು ನಾರಾಯಣ ಅವರು ವಾಹನ ಏರುವ ಮುನ್ನ ಹೇಳಿ ಹೊರಟರು. ನಿತ್ಯವೂ ಕೈಗಾರಿಕಾ ಬಡಾವಣೆ ರಸ್ತೆಯಲ್ಲಿ ಚೀಲ ಹಿಡಿದು ಕಾಣಿಸುತ್ತಿದ್ದ ವ್ಯಕ್ತಿ ಬುಧವಾರದಿಂದ ಕಣ್ಣಿಗೆ ಬೀಳುವುದಿಲ್ಲ. ನಾರಾಯಣ ಅವರು ಮೊದಲಿನಂತಾಗಿ ಮಡಿಕೇರಿಗೆ ಬರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !