11ರಿಂದ ‘ಕೊಡಗು ಪ್ರವಾಸಿ ಉತ್ಸವ: ಸಾಂಸ್ಕೃತಿಕ ರಸದೌತಣಕ್ಕೆ ಭರದ ಸಿದ್ಧತೆ

7
ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ

11ರಿಂದ ‘ಕೊಡಗು ಪ್ರವಾಸಿ ಉತ್ಸವ: ಸಾಂಸ್ಕೃತಿಕ ರಸದೌತಣಕ್ಕೆ ಭರದ ಸಿದ್ಧತೆ

Published:
Updated:
Prajavani

ಮಡಿಕೇರಿ: ಪ್ರವಾಹ ಹಾಗೂ ಭೂಕುಸಿತದ ನೋವು ಮರೆತು ಕೊಡಗು ಜಿಲ್ಲೆಯು ‘ಪ್ರವಾಸಿ ಉತ್ಸವ’ಕ್ಕೆ ಸಜ್ಜಾಗುತ್ತಿದೆ. ಭೂಕುಸಿತದ ಬಳಿಕ ಕೊಡಗಿನ ಪ್ರವಾಸೋದ್ಯಮವು ನೆಲಕಚ್ಚಿತ್ತು. ಪ್ರವಾಸಿಗರನ್ನು ಸೆಳೆಯಲು ಜ.11, 12 ಹಾಗೂ 13ರಂದು ಉತ್ಸವ ನಡೆಯಲಿದೆ.

ರಾಜಾಸೀಟ್‌ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಗಾಂಧಿ ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಹೋಟೆಲ್‌ ಮತ್ತು ರೆಸಾರ್ಟ್ ಅಸೋಸಿಯೇಷನ್‌ ಮುಂದಾಗಿದೆ. ಭರದ ಸಿದ್ಧತೆಗಳು ನಡೆಯುತ್ತಿವೆ. ಗಾಂಧಿ ಮೈದಾನದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗುತ್ತಿದೆ.

ಸಾಂಸ್ಕೃತಿಕ ಸಂಭ್ರಮ: ಜ. 11ರಂದು ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಅವರು ಚಾಲನೆ ನೀಡಲಿದ್ದಾರೆ. ಆಹಾರ ಮೇಳ, ‘ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌’, ಛಾಯಾಚಿತ್ರ ಪ್ರದರ್ಶನ, ಶ್ವಾನ ಪ್ರದರ್ಶನಗಳು ಈ ಬಾರಿಯ ಆಕರ್ಷಣೆ ಆಗಿರಲಿವೆ.

ಜಿಲ್ಲಾಡಳಿತ, ಜಿಲ್ಲಾ ಹೋಟೆಲ್‌ ಮತ್ತು ರೆಸಾರ್ಟ್ ಅಸೋಸಿಯೇಷನ್‌, ಜಿಲ್ಲಾ ಟ್ರಾವಲ್ಸ್‌ ಅಸೋಸಿಯೇಷನ್‌, ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್‌, ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶ್ವಾನಗಳ ಪ್ರದರ್ಶನ: 12ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರ ತನಕ ಶ್ವಾನ ಪ್ರದರ್ಶನ ನಡೆಯಲಿದೆ. ಆಕರ್ಷಕ ಶ್ವಾನಗಳ ಮಾಲೀಕರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

‘ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌’: ಪ್ರವಾಸೋದ್ಯಮ ವಲಯ ಉದ್ದಿಮೆದಾರರ ಪರಿಕಲ್ಪನೆಯೊಂದಿಗೆ ರಾಜಾಸೀಟ್‌ ರಸ್ತೆಯಲ್ಲಿ 13ರಂದು ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 8ರಿಂದ ಸಂಜೆ 5ರ ತನಕ ಈ ಮಾರ್ಗದಲ್ಲಿ ವಾಹನ ಸಂಚಾರ ಇರುವುದಿಲ್ಲ.

ಯೋಗ, ಸಾಂಸ್ಕೃತಿಕ ಕಾರ್ಯಕ್ರಮ, ಮರಗಾಲಿನ ಕುಣಿತ, ಸ್ಕೇಟ್‌ ಬೋರ್ಡ್‌, ಚೈನೀಸ್‌ ಲಯನ್‌, ಸ್ಟ್ರೀಟ್‌ ಆರ್ಟ್‌, ಕ್ಯಾರಿಕೇಚರ್‌ ಕಲಾ ಪ್ರದರ್ಶನ ನಡೆಯಲಿವೆ. ಫುಡ್‌ ಟ್ರಕ್‌, ಫುಡ್‌ ಸ್ಟಾಲ್‌, ಆರ್ಟ್‌ ಹಾಗೂ ಕರಕುಶಲ ಸಾಮಗ್ರಿಗಳ ಮಾರಾಟ ಸೇರಿ 40 ಮಳಿಗೆಗಳು ಇರಲಿವೆ ಎಂದು ವಿವರಿಸಿದರು.

ಗಾಂಧಿ ಮೈದಾನದಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ 30 ಮಳಿಗೆಗಳು ಇರಲಿವೆ. ಜಿಲ್ಲಾ ಪಂಚಾಯಿತಿ, ಕೃಷಿ ತೋಟಗಾರಿಕೆ, ಕಾಫಿ ಮಂಡಳಿ, ಮಹಿಳಾ ಸಂಘ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ ಎಂದರು.

ಫಲಪುಷ್ಪ ಪ್ರದರ್ಶನ: 11ರಂದು ಸಂಜೆ 4.20ಕ್ಕೆ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶ. ಸಾರ್ವಜನಿಕರಿಗೆ ಪ್ರವೇಶ ಶುಲ್ಕ ₹ 10. ಬೆಳಿಗ್ಗೆ 10ರಿಂದ ರಾತ್ರಿ 8.30ರ ತನಕ ಪ್ರದರ್ಶನಕ್ಕೆ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಆಕರ್ಷಣೆ: ಫಲಪುಷ್ಪ ಪ್ರದರ್ಶನದಲ್ಲಿ ಕೊಡಗಿನ ಕುಲದೇವತೆ ಕಾವೇರಿ ಮಾತೆ ಹಾಗೂ ತೀರ್ಥೋದ್ಭವದ ಕಲಾಕೃತಿ ಇರಲಿದೆ. ಹಣ್ಣು ಬೆಳೆಯುವ ಪ್ರಾತ್ಯಕ್ಷಿಕೆ, ಸ್ಪೈಡರ್‌ಮನ್‌, ಮಿಕ್ಕಿಮೌಸ್‌ ಮಾದರಿಯನ್ನು ಹೂವು ಹಾಗೂ ಎಲೆಗಳಿಂದ ರೂಪಿಸಲಾಗುವುದು. ಮಾವು ಕಿತ್ತಳೆ, ಅನಾನಸ್‌, ದಪ್ಪ ಮೆಣಸಿನ ಕಾಯಿ ಬಳಸಿ ಆನೆ, ನವಿಲು, ಗೀಟಾರ್‌ ತಬಲ ಕಲಾಕೃತಿಗಳನ್ನು ತಯಾರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸ್ಪರ್ಧೆ: ರಾಜಾಸೀಟ್‌ನಲ್ಲಿ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣ ಹೂವು ಜೋಡಣೆ, ಬಿಡಿ ಹೂವುಗಳ ಜೋಡಣೆ ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ ಎಂದು ಶ್ರೀವಿದ್ಯಾ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !