‘ನಡೆದಾಡುವ ದೇವರು’ ಕೊಡುಗೆ ಸ್ಮರಣೆ

7
ಲೇಖಕ ಹಾಗೂ ಕಲಾವಿದರ ಬಳಗದಿಂದ ಶ್ರದ್ಧಾಂಜಲಿ ಸಭೆ

‘ನಡೆದಾಡುವ ದೇವರು’ ಕೊಡುಗೆ ಸ್ಮರಣೆ

Published:
Updated:
Prajavani

ಮಡಿಕೇರಿ: ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆಗೆ ಮಂಗಳವಾರವೂ ನಗರದಲ್ಲಿ ವಿವಿಧ ಸಂಘ– ಸಂಸ್ಥೆಗಳು ಶ್ರದ್ಧಾಂಜಲಿ ಸಭೆ ನಡೆಸಿದವು. ಕೊಡಗು ಲೇಖಕರ ಮತ್ತು ಕಲಾವಿದರ ಬಳಗ ಸಭೆ ಏರ್ಪಡಿಸಿತ್ತು.

ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಒಂದು ನಿಮಿಷ ಮೌನವಹಿಸಿ ಗೌರವ ಸಲ್ಲಿಸಲಾಯಿತು. 

ಬಳಗದ ಅಧ್ಯಕ್ಷ ಕೇಶವ ಕಾಮತ್ ಅವರು, ‘ನಡೆದಾಡುವ ದೇವರು’, ‘ಕಾಯಕಯೋಗಿ’ ಸ್ವಾಮೀಜಿ ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದವರು. ಕೊನೆ ಕ್ಷಣದಲ್ಲಿಯೂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ದಾಸೋಹ ಆದ ನಂತರವೇ ಮಕ್ಕಳಿಗೆ ಸಾವಿನ ಸುದ್ದಿ ತಿಳಿಸಿ ಎಂದು ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ’ ಎಂದು ತಿಳಿಸಿದರು.

‘5 ವರ್ಷದ ಹಿಂದೆ ಸಿದ್ಧಗಂಗಾ ಮಠಕ್ಕೆ ಹೋದ ಸಂದರ್ಭದಲ್ಲಿ ನಡೆದೇ ಪ್ರತಿಯೊಬ್ಬರಿಗೂ ಪ್ರಸಾದ ವಿತರಿಸುತ್ತಿದ್ದರು. ಶ್ರೀಗಳ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು’ ಎಂದು ಕರೆ ನೀಡಿದರು. 

ಸದಸ್ಯ ಟಿ.ಪಿ.ರಮೇಶ್‌ ಮಾತನಾಡಿ, ‘ಶ್ರೀಗಳು 80 ವರ್ಷಗಳ ಹಿಂದೆ ಭಿಕ್ಷೆಯೆತ್ತಿ ಮಕ್ಕಳಿಗೆ ದಾಸೋಹ ಮಾಡುತ್ತಿದ್ದರು. 126 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದವರು’ ಎಂದು ತಿಳಿಸಿದರು.

ಕಲಾವಿದರ ಬಳಗದ ಸದಸ್ಯ ಬಿ.ಎ.ಷಂಶುದ್ದೀನ್‌ ಮಾತನಾಡಿ, ಸ್ವಾಮೀಜಿ ಅವರು ಎಲ್ಲ ಜಾತಿ, ಜನಾಂಗದವರನ್ನು ಪ್ರೀತಿಯಿಂದ ಕಾಣುವ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ದೇಶಕ್ಕೆ ರತ್ನದಂತೆ ಇದ್ದ ಇವರಿಗೆ ಇನ್ನಾದರೂ ಭಾರತ ರತ್ನ ನೀಡಬೇಕು ಎಂದು ಹೇಳಿದರು.

ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಬಿ.ಎನ್‌.ಮನುಶೆಣ್ಯೆ, ‘ಬಡ, ಶ್ರಮಿಕರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದ ಸ್ವಾಮೀಜಿ ನಮ್ಮೆಲ್ಲರ ಪಾಲಿಗೆ ದೇವರಂತೆ ಇದ್ದರು. ಅವರ ದೂರದೃಷ್ಟಿ, ಮಕ್ಕಳೊಂದಿಗಿನ ಪ್ರೀತಿ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಜಿಲ್ಲೆಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದು, ಇಲ್ಲಿನ ಭಕ್ತರೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದ್ದರು ಎಂದು ನೆನಪಿಸಿದರು.

ನಾಪೋಕ್ಲು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ.ಅವನಿಜ ಸೋಮಯ್ಯ ಮಾತನಾಡಿ, ಶ್ರೀಗಳಿಗೆ ವಯಸ್ಸು ನೂರು ದಾಟಿದರು ಅವರಲ್ಲಿದ್ದ ಜೀವನಕ್ಕೆ ಬೇಕಾದ ಚೈತನ್ಯ, ಉತ್ಸಾಹ ಕಾಣುತ್ತಿತ್ತು ಎಂದು ತಿಳಿಸಿದರು.

ಪ್ರಮುಖರಾದ ಬೇಬಿ ಮ್ಯಾಥ್ಯೂ, ಅಲ್ಲಾರಂಡ ವಿಠಲ್‌ ನಂಜಪ್ಪ, ಎಸ್‌.ಜಿ. ಉಮೇಶ್ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !