ವಿಶ್ವರತ್ನ ಶಿವಕುಮಾರ ಸ್ವಾಮೀಜಿಗೆ ಸಿಗಲಿ ‘ಭಾರತ ರತ್ನ’

7
ನಗರದಲ್ಲಿ ‘ನುಡಿ ನಮನ’ ಕಾರ್ಯಕ್ರಮ

ವಿಶ್ವರತ್ನ ಶಿವಕುಮಾರ ಸ್ವಾಮೀಜಿಗೆ ಸಿಗಲಿ ‘ಭಾರತ ರತ್ನ’

Published:
Updated:
Prajavani

ಮಡಿಕೇರಿ: ‘ತ್ರಿವಿಧ ದಾಸೋಹಿ’ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ವಿಶ್ವಕ್ಕೇ ರತ್ನದಂತೆ ಬದುಕಿದ್ದರು. ಅವರ ಸಮಾಜ ಸೇವೆ ಸ್ಮರಣೀಯ; ಅವರಿಗೆ ‘ಭಾರತ ರತ್ನ’ ಗೌರವ ನೀಡಲೇಬೇಕು ಎಂದು ಜೆಡಿಎಸ್‌ ಜಿ‌ಲ್ಲಾ ಘಟದಕ ಅಧ್ಯಕ್ಷ ಸಂಕೇತ್‌ ಪೂವಯ್ಯ ಆಗ್ರಹಿಸಿದರು. 

ಜಿಲ್ಲಾ ಜೆಡಿಎಸ್‌ ವತಿಯಿಂದ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಗುರುವಾರ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿವಕುಮಾರ ಸ್ವಾಮೀಜಿ ಅವರು ವಿಶ್ವಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ. ಬ್ರಿಟಿಷರ ಕಾಲದಲ್ಲಿ ಶಿಕ್ಷಣ ಪೂರೈಸಿ ಉತ್ತಮ ಉದ್ಯೋಗದ ಅವಕಾಶವಿದ್ದರೂ ಸಮಾಜ ಸೇವೆ ಮಾಡಲು ಬಂದರು. ನಡೆದಾಡುವ ದೇವಮಾನವರಾಗಿದ್ದರು. ಅದರಲ್ಲೂ ಕನ್ನಡಾಭಿಮಾನಿ ಆಗಿ ಜಾತಿ, ಮತ, ಧರ್ಮಗಳ ಎಲ್ಲೆಯನ್ನೂ ಮೀರಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ, ಅನ್ನದಾಸೋಹ ನೀಡುವ ಮೂಲಕ ಪ್ರಸಿದ್ಧರಾಗಿದ್ದರು’ ಎಂದು ಸ್ಮರಿಸಿದರು.

ಶಿವಕುಮಾರ ಸ್ವಾಮೀಜಿ ಅವರು ಈ ಸಮಾಜಕ್ಕೆ ನೀಡಿದ್ದ ಕೊಡುಗೆ ಪರಿಗಣಿಸಿ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು. ವಿಶ್ವಮಟ್ಟದಲ್ಲಿ ‘ನೊಬೆಲ್’ ಗೌವರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಎರಡೂ ಗೌರವಗಳು ಸಿಕ್ಕರೆ ಕೋಟ್ಯಂತರ ಭಕ್ತರ ಆಸೆಯೂ ಈಡೇರಿದಂತೆ ಆಗಲಿದೆ. ಒಂದು ವೇಳೆ ಈ ಗೌರವ ನೀಡದಿದ್ದರೆ ಯಾವ ಮಾನದಂಡಗಳು ಬೇಕೆಂಬ ಸಂಶಯ ಮೂಡಲಿದೆ. ಭಕ್ತರಿಗೆ ನಿರಾಸೆಯೂ ಉಂಟಾಗಲಿದೆ ಎಂದು ಹೇಳಿದರು.

ಸ್ವಾಮೀಜಿ ಅವರ ಅಮೂಲ್ಯ ಸೇವೆ ಕುರಿತು ಅಧ್ಯಯನ ನಡೆಸಬೇಕು. ಅವರ ಮೌಲ್ಯಯುತ ಜೀವನ ಹಾಗೂ ಆದರ್ಶ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. 

ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾತನಾಡಿ, ‘ಸ್ವಾಮೀಜಿ ಅವರ ನಿಧನ ಈ ಸಮಾಜಕ್ಕೆ ತುಂಬಲಾರದ ನಷ್ಟ. ಜಾತಿಯನ್ನೂ ಮೀರಿ ಸೇವೆ ಮಾಡಿದ್ದ ಮಹಾನ್‌ ವ್ಯಕ್ತಿ ಅವರು’ ಎಂದು ಸ್ಮರಿಸಿದರು.

ರಾಜ್ಯ ಸರ್ಕಾರವು ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಈಗಲಾದರೂ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಬೇಕು ಎಂದು ಹೇಳಿದರು.

ಹಿರಿಯ ಮುಖಂಡ ಅದೀಲ್ ಪಾಷಾ, ಜೆಡಿಎಸ್‌ನ ಮುಖಂಡರಾದ ಡೆನ್ನಿ ಬರೋಸ್, ಸುರೇಶ್ ಚಂಗಪ್ಪ, ಗ್ಲಾಡೀಯಸ್ ಲೋಬೊ, ಅಜಿತ್, ಸುನೀಲ್, ಕೆ.ಜಿ. ನಾಸೀರ್, ಲೀಲಾ ಶೇಷಮ್ಮ, ಸುರೇಂದ್ರ ಶೆಟ್ಟಿ, ಎಂ.ಇ. ಅಬ್ದುಲ್ ರೆಹಮಾನ್, ಮನ್ಸೂರ್ ಆಲಿ, ಆನಂದ್, ಎಸ್.ಎಚ್. ಮತೀನ್, ಸಂದೇಶ್, ಪಾಪಣ್ಣ ಹಾಜರಿದ್ದರು.

ಅನ್ನ ದಾಸೋಹ ನೆರವೇರಿಸಲಾಯಿತು. ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !