ಗುಡುಗಳಲೆಯಲ್ಲಿ ಜಾನುವಾರು ಜಾತ್ರೆ ಸಂಭ್ರಮ, ಫೆ.11ರಂದು ಮಹೋತ್ಸವಕ್ಕೆ ತೆರೆ

7
ನಮ್ಮೂರು ನಮ್ಮ ಜಿಲ್ಲೆ

ಗುಡುಗಳಲೆಯಲ್ಲಿ ಜಾನುವಾರು ಜಾತ್ರೆ ಸಂಭ್ರಮ, ಫೆ.11ರಂದು ಮಹೋತ್ಸವಕ್ಕೆ ತೆರೆ

Published:
Updated:
Prajavani

ಶನಿವಾರಸಂತೆ: ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿರುವ ಜಯದೇವ ಜಾನುವಾರುಗಳ ಜಾತ್ರೆ ಜಿಲ್ಲೆ ಮತ್ತು ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ. ಜ. 28ರಂದು ಆರಂಭಗೊಂಡಿರುವ ಈ ಜಾತ್ರೆ ಫೆ. 11ರವರೆಗೆ ನಡೆಯಲಿದೆ. ಅಂದರೆ 15 ದಿನಗಳ ಕಾಲ ನಡೆಯುವುದು ಈ ಬಾರಿಯ ವಿಶೇಷ. ಹಂಡ್ಲಿ ಗ್ರಾಮ ಪಂಚಾಯಿತಿ ಹಾಗೂ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಈ ಜಾತ್ರೆ ನಡೆಯುತ್ತಿದೆ. 

74 ವರ್ಷಗಳ ಹಿಂದೆ ಚಿತ್ರದುರ್ಗದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಸೋಮವಾರಪೇಟೆ ತಾಲ್ಲೂಕಿನ ಬೇಳೂರು ಮಠಕ್ಕೆ ಭೇಟಿ ನೀಡಿದ್ದರು. ಆಗ ಇದೇ ಜಾತ್ರಾ ಮೈದಾನದಲ್ಲಿ ಅವರ ನೇತೃತ್ವದಲ್ಲಿ ವೀರಶೈವ ಧರ್ಮ ಸಮ್ಮೇಳನ ನಡೆದಿತ್ತು. ಆ ಸಮ್ಮೇಳನದ ನೆನಪಿಗಾಗಿ ಪ್ರತಿವರ್ಷ ಇಲ್ಲಿ ಜಾನುವಾರು ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲದೇ, ಈ ಜಾತ್ರೆ ‘ಜಯದೇವ ಜಾನುವಾರುಗಳ ಜಾತ್ರೆ’ ಎಂದೇ ಪ್ರಸಿದ್ಧಿ ಪಡೆದಿದೆ. ಈ ಬಾರಿ ಜಾತ್ರೆಗೆ ಅಷ್ಟಾಗಿ ಜಾನುವಾರುಗಳು ಬಂದಿಲ್ಲ. ಫೆ. 3ರ ನಂತರ ಹೆಚ್ಚಿನ ಸಂಖ್ಯೆಯ ಜಾನುವಾರು ಬರುವ ನಿರೀಕ್ಷೆಯಿದೆ.

1945ರಲ್ಲಿ ಜಾತ್ರಾ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಲಾಯಿತು. ವರ್ಷಗಳು ಉರುಳಿದಂತೆ ಜಾತ್ರೆಗೆ ಕ್ರಮೇಣ ವಿವಿಧೆಡೆಯಿಂದ ಜಾನುವಾರುಗಳು ಬಂದು ಸೇರತೊಡಗಿದವು. ಜಿಲ್ಲೆಯಲ್ಲಿ ಮಾತ್ರವಲ್ಲದೇ ನೆರೆಯ ಹಾಸನ ಜಿಲ್ಲೆಯ ಅರಕಲಗೂಡು, ಗೊರೂರು, ಕಟ್ಟಾಯ, ಮಲ್ಲಿಪಟ್ಟಣ, ಮಗ್ಗೆ ಹಾಗೂ ಮೈಸೂರು ಜಿಲ್ಲೆಯಲ್ಲೂ ಕರಪತ್ರ ಹಂಚುವ ಮೂಲಕ ಅಧಿಕ ಪ್ರಮಾಣದಲ್ಲಿ ಜಾನುವಾರುಗಳ ವ್ಯಾಪಾರ ನಡೆಯತೊಡಗಿತು. ಅಲ್ಲದೇ ಅಂಗಡಿ, ಹೋಟೆಲ್‌ಗಳಿಗೂ ಯಾವುದೇ ಸುಂಕ ವಿಧಿಸದೇ ಸಮಿತಿಯ ಸ್ವಂತ ವೆಚ್ಚದಲ್ಲಿ 15 ದಿನಗಳ ಕಾಲ ಉತ್ಸವ ನಡೆಯುತ್ತಿತ್ತು.

ಜಾತ್ರೆಗಾಗಿ ಹಲವಾರು ಮಂದಿ ಶ್ರಮಿಸಿದ್ದಾರೆ. ಕಿತ್ತೂರಿನ ಕೆ. ಮಲ್ಲಪ್ಪ ಸಚಿವರಾಗಿದ್ದಾಗ ಜಾತ್ರೆ ನಡೆಯುತ್ತಿದ್ದ ಈ ಮೈದಾನವನ್ನು ಜಾತ್ರೆಗಾಗಿಯೇ ಮೀಸಲಿರಿಸಿದರು. ಬಳಿಕ ಶನಿವಾರಸಂತೆಯವರಾದ ಪುರಸಭಾ ಮಾಜಿ ಅಧ್ಯಕ್ಷ ಬಿ. ಗಂಗಪ್ಪ ಕರ್ಕೇರ, ಶಾಂತವೀರಪ್ಪ, ಮಹಾಂತಪ್ಪ, ಚಂದ್ರಶೇಖರ್, ಕಿತ್ತೂರು ವೀರಪ್ಪ, ಹಂಡ್ಲಿಯ ಪುಟ್ಟಣ್ಣ ಮತ್ತಿತರರು ಸಹಕಾರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಸ್ಥಳೀಯ ಮಂಡಲ ಪಂಚಾಯಿತಿ ಮೂಲಕ ಜಾತ್ರೆ ನಡೆಸಿಕೊಂಡು ಬಂದರು.

ಮಹಿಳೆಯರು ಮನೆ ಬಳಕೆ ಹಾಗೂ ಅಲಂಕಾರಿಕ ವಸ್ತುಗಳನ್ನು ಕೊಳ್ಳಲು ಮುಗಿಬೀಳುವುದು ಈ ಜಾತ್ರೆಯ ಮತ್ತೊಂದು ವಿಶೇಷ. ಮನರಂಜನೆಗಾಗಿ ಸರ್ಕಸ್, ಜೈಂಟ್‌ವೀಲ್, ಕೋಲಂಬಸ್, ಯಕ್ಷಿಣಿ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಆಕರ್ಷಿಸುತ್ತದೆ.

ಜಾತ್ರೆಯ ಕೈಂಕರ್ಯ: ಜಾತ್ರೆಯ ಮೊದಲ ದಿನ ಗುಡುಗಳಲೆ ಬಸವೇಶ್ವರ ದೇವಾಲಯದ ನೆರೆ ಬಸವಣ್ಣ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಜಾತ್ರಾ ಮೈದಾನಕ್ಕೆ ತಂದು ಅಲ್ಲಿನ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಸಮೀಪದ ಹಾರಳ್ಳಿ ಗ್ರಾಮದ ರಾಜವಂಶದ ಪ್ರಮುಖರೊಬ್ಬರು ಕೊಡಗಿನ ಕೊನೆಯ ರಾಜ ಚಿಕ್ಕವೀರರಾಜೇಂದ್ರನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಅವರ ಕುಟುಂಬದವರು ಜಾತ್ರಾ ಮೈದಾನದ ದೀಣೆ ಮೇಲೆ ಬಸವೇಶ್ವರ ದೇವರ ಪುಟ್ಟ ಗುಡಿಯನ್ನು ನಿರ್ಮಿಸಿದ್ದಾರೆ. ಈಗಲೂ ಜಾತ್ರಾ ಮೈದಾನದ ಎರಡೂ ಬದಿಗಳಲ್ಲಿ ಬಸವೇಶ್ವರರ ಎರಡು ಪುಟ್ಟ ಗುಡಿಗಳಿವೆ. ಜಾತ್ರಾ ಸಮಯದಲ್ಲಿ ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ.

ಇದೀಗ ಜಾತ್ರಾ ಮೈದಾನದಲ್ಲಿ ಕಾಳಿಕಾಂಬಾ ದೇವಾಲಯವಿದೆ. ನೂತನ ಬಸವೇಶ್ವರ ದೇವಾಲಯವೂ ನಿರ್ಮಾಣವಾಗಿದ್ದು, ಜಾತ್ರೆಗೆ ಬರುವ ಭಕ್ತರನ್ನು ಸೆಳೆಯುತ್ತಿದೆ. ಇಲ್ಲಿ ವಸ್ತು ಪ್ರದರ್ಶನ ಮಳಿಗೆಯೂ ಇದ್ದು ರೈತರು ಬೆಳೆದ ತರಕಾರಿಗಳು, ಹಣ್ಣು–ಹಂಪಲು, ಗೃಹ ಕೈಗಾರಿಕೆ ಹಾಗೂ ಗುಡಿ ಕೈಗಾರಿಕೆಯ ವಸ್ತುಗಳು ಪ್ರದರ್ಶನಗೊಂಡು ಜನರನ್ನು ಸೆಳೆಯುತ್ತವೆ. ಫೆ. 4ರಿಂದ ಕಲಾ ವೇದಿಕೆಯಲ್ಲಿ ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಆಧುನಿಕತೆಯ ಭರಾಟೆಯಲ್ಲಿ ರೈತರು ಯಂತ್ರಗಳ ಮೊರೆ ಹೋಗುತ್ತಿರುವುದರಿಂದ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ರೈತರು ಇಚ್ಛಿಸುವ ಉತ್ತಮ ತಳಿಯ ಜೋಡಿ ಎತ್ತುಗಳು ₹ 15 ಸಾವಿರದಿಂದ ₹ 1 ಲಕ್ಷದವರೆಗೂ ಬೆಲೆ ಪಡೆದುಕೊಳ್ಳುತ್ತಿವೆ. ಈ ಬಾರಿ ಅದ್ಧೂರಿಯಾಗಿ ಜಾತ್ರೆ ನಡೆಸಲು ಸಮಿತಿ ನಿರ್ಧರಿಸಿದೆ. ಫೆ. 11ರಂದು ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !