ಕೆರೆಗೆ ಬಿದ್ದಿದ್ದ ಮೂರು ಕಾಡಾನೆಗಳ ರಕ್ಷಣೆ

ಭಾನುವಾರ, ಮಾರ್ಚ್ 24, 2019
32 °C
ಸತತ ಕಾರ್ಯಾಚರಣೆ ಬಳಿಕ ಕಾಡಿನ ಹಾದಿ ಹಿಡಿದ ಆನೆಗಳು

ಕೆರೆಗೆ ಬಿದ್ದಿದ್ದ ಮೂರು ಕಾಡಾನೆಗಳ ರಕ್ಷಣೆ

Published:
Updated:
Prajavani

ನಾಪೋಕ್ಲು (ಕೊಡಗು): ದಾಹ ನೀಗಿಸಿಕೊಳ್ಳಲು ಚೇಲಾವರ ಗ್ರಾಮದ ಕಾಫಿ ತೋಟದ ಕೆರೆಗೆ ಬಂದು ಅದರಲ್ಲಿ ಬಿದ್ದಿದ್ದ ಮೂರು ಕಾಡಾನೆಗಳು ಗುರುವಾರ ದಿನವಿಡೀ ಮೇಲೆ ಬರಲು ಸಾಧ್ಯವಾಗದೇ ಪರದಾಡಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸತತ ಕಾರ್ಯಾಚರಣೆ ನಡೆಸಿ ಮೂರು ಆನೆಗಳನ್ನೂ ಸುರಕ್ಷಿತವಾಗಿ ಮೇಲಕ್ಕೆ ತರಲು ಯಶಸ್ವಿಯಾದರು. 

ಕಾಫಿ ಬೆಳೆಗಾರ ಪಟ್ಟಚೆರವಂಡ ವಾಸು ಸುಬ್ಬಯ್ಯ ಅವರ ಕಾಫಿ ತೋಟದ ನಡುವೆ ಕೃಷಿಗಾಗಿ ತೆರೆದಿದ್ದ ಕೆರೆಯಲ್ಲಿ ಸಿಲುಕಿದ್ದ ಕಾಡಾನೆಗಳು, ಗುರುವಾರ ಬೆಳಕು ಹರಿಯುತ್ತಿದ್ದಂತೆಯೇ ಘೀಳಿಡಲು ಆರಂಭಿಸಿದ್ದವು. ‘ರಕ್ಷಿಸಿ...‘ ಎಂದು ಮೊರೆಯಿಟ್ಟವು. ಬುಧವಾರ ತಡರಾತ್ರಿಯೇ ಹಿಂಡಾಗಿ ಬಂದಿದ್ದ ಕಾಡಾನೆಗಳಲ್ಲಿ ಎರಡು ಮರಿಯಾನೆ, ಒಂದು ದೊಡ್ಡ ಆನೆ ನೀರಿನಲ್ಲಿ ಸಿಲುಕಿಕೊಂಡಿದ್ದವು. ಅವುಗಳಿಗೆ ಮೇಲೆ ಬರಲು ಸಾಧ್ಯವಾಗಿರಲಿಲ್ಲ. 

ಮರದ ದಿಮ್ಮಿಗಳನ್ನು ಹಾಕಿ ಆನೆಗಳನ್ನು ಮೇಲೆತ್ತುವ ಪ್ರಯತ್ನವೂ ವಿಫಲವಾಯಿತು. ಕೊನೆಗೆ ಜೆ.ಸಿ.ಬಿ ತರಿಸಿ ಮೇಲೆತ್ತಲು ಪ್ರಯತ್ನಿಸಲಾಯಿತು. ಹಲವು ತಾಸುಗಳ ರಕ್ಷಣಾ ಕಾರ್ಯಾಚರಣೆ ನಂತರ ಕೆರೆಯಿಂದ ಮೇಲೆ ಬಂದ ಆನೆಗಳು ತಮ್ಮ ನೆಲೆಯತ್ತ ತೆರಳಿದವು.

‘ಚೇಲಾವರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿದೆ. ಪದೇ ಪದೇ ತೋಟಗಳಿಗೆ ಲಗ್ಗೆಯಿಡುವ ಕಾಡಾನೆಗಳು ಬೆಳೆಗಾರರಿಗೆ ಸಂಕಷ್ಟ ತಂದೊಡ್ಡುತ್ತಿವೆ. ಬೆಳೆಗಾರರಿಗೆ ಸೂಕ್ತ ಪರಿಹಾರವೂ ಸಿಗುತ್ತಿಲ್ಲ. ಈ ಬಾರಿ ಕೆರೆಯಿಂದ ಆನೆಗಳನ್ನು ಮೇಲೆತ್ತಲು ಸಹಕಾರ ನೀಡಿದ್ದೇವೆ. ಇನ್ನಾದರೂ ಬೆಳೆಗಾರರ ಸಮಸ್ಯೆ ಪರಿಹರಿಸಿ’ ಎಂದು ಬೆಳೆಗಾರ ಪಟ್ಟಚೆರವಂಡ ಹರಿ ಮುತ್ತಪ್ಪ ಅರಣ್ಯಾಧಿಕಾರಿಗಳನ್ನು ಕೋರಿದರು.

‘ಬೆಳೆಗಾರರ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ’ ಎಂದು ಅರಣ್ಯಾಧಿಕಾರಿ ರೋಷಿಣಿ ಭರವಸೆ ನೀಡಿದರು. ಅರಣ್ಯಾಧಿಕಾರಿಗಳಾದ ಗೋಪಾಲ್‌, ಮರಿಯಾಕ್ರಿಸ್ತ ರಾಜು, ನಾಪೋಕ್ಲು ಠಾಣೆ ಎಎಸ್ಐ ವಿಶ್ವನಾಥ್ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಯಿತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !