ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಕ್ಷೇತ್ರ ಬೆಳೆದಷ್ಟು ಅನುಕೂಲ: ಅಡಗೂರು ಎಚ್‌.ವಿಶ್ವನಾಥ್‌

Last Updated 12 ಜೂನ್ 2019, 14:18 IST
ಅಕ್ಷರ ಗಾತ್ರ

ಮಡಿಕೇರಿ: ‘ಸಹಕಾರಿ ಕ್ಷೇತ್ರವು ಬೆಳೆದಷ್ಟು ಜಿಲ್ಲೆಯ ಜನರಿಗೇ ಅನುಕೂಲ’ ಎಂದು ಹುಣಸೂರು ಕ್ಷೇತ್ರದ ಶಾಸಕ ಅಡಗೂರು ಎಚ್.ವಿಶ್ವನಾಥ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಂದು ಕೆಲಸ ಪರಸ್ಪರ ಸಹಕಾರದಿಂದಲೇ ನಡೆಯುವುದು. ಆದ್ದರಿಂದ, ಸಹಕಾರಿ ಕ್ಷೇತ್ರದ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು. 2002ರಲ್ಲಿ ಈ ಸಂಘವು ಆರಂಭವಾದಾಗ ನಾನು ಮಂತ್ರಿಯಾಗಿದ್ದೆ. 16 ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿರುವ ಸಂಘವು ಜಿಲ್ಲೆಯ ಜನರಿಗೂ ಅನುಕೂಲ ಮಾಡಿಕೊಟ್ಟಿದೆ’ ಎಂದು ವಿಶ್ವನಾಥ್‌ ಹೇಳಿದರು.

‘ಇಂದು ಸಾಕಷ್ಟು ಮಂದಿ ಶಾಸಕರು ಸದನಕ್ಕೆ ಬಂದು ಒಂದೂ ಮಾತನಾಡದೇ ತೆರಳುತ್ತಾರೆ. ಆದರೆ, ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಉತ್ತಮ ಸಂಸದೀಯ ಪಟುವಾಗಿದ್ದರು. ಸರ್ಕಾರದ ಕಣ್ತೆರೆಸುವ ಕೆಲಸ ಮಾಡಿದ್ದರು. ನಾವೆಲ್ಲರೂ ಜನತಂತ್ರ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಯಾವುದೇ ವಿಚಾರವನ್ನು ಚರ್ಚಿಸಿ ನಿರ್ಧರಿಸಬೇಕು’ ಎಂದು ಹೇಳಿದರು.

‘ಕೊಡಗು ಪುಟ್ಟ ಜಿಲ್ಲೆ. ಕಳೆದ ವರ್ಷದ ಪ್ರಕೃತಿ ವಿಕೋಪದಿಂದ ಜಿಲ್ಲೆ ನಲುಗಿ ಹೋಗಿತ್ತು. ಕೊಡಗಿನ ಪ್ರಕೃತಿ, ಸಂಸ್ಕೃತಿ, ನೆಲ ಉಳಿಯಬೇಕು’ ಎಂದು ಪ್ರತಿಪಾದಿಸಿದರು.

ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ‘ಸಹಕಾರಿ ಕ್ಷೇತ್ರವು ಕೊಡಗಿನಲ್ಲಿ ಬೆಳೆದಷ್ಟು ಬೇರೆ ಯಾವ ಜಿಲ್ಲೆಯಲ್ಲೂ ಬೆಳೆದಿಲ್ಲ. ಸಹಕಾರಿ ಕ್ಷೇತ್ರಕ್ಕೆ ಎಂದೂ ರಾಜಕೀಯ ನುಸುಳಬಾರದು’ ಎಂದು ಎಚ್ಚರಿಸಿದರು.

‘ರೈತರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣ ಆಗಬೇಕು. ಬರೀ ಸಾಲ ಮನ್ನಾ ಮಾಡಿದರೆ ಸಾಲದು. ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಹಾಗೂ ಸೂಕ್ತ ಧಾರಣೆ ವ್ಯವಸ್ಥೆ ಆಗಬೇಕು’ ಎಂದು ಹೇಳಿದರು.

ಜಾರಿ ಆಗಲಿ: ‘ಯಶಸ್ವಿನಿ’ ಯೋಜನೆಯಿಂದ ರಾಜ್ಯದ ಸಾವಿರಾರು ರೈತರಿಗೆ ಅನುಕೂಲ ಆಗುತ್ತಿತ್ತು. ಆದರೆ, ಯೋಜನೆ ಸ್ಥಗಿತವಾಗಿದೆ. ಬಜೆಟ್‌ ಮಂಡನೆ ಹಿಂದಿನ ದಿವಸ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಅದರ ಪ್ರಸ್ತಾಪವೇ ಆಗಲಿಲ್ಲ. ಆ ಯೋಜನೆಯನ್ನು ಮರುಜಾರಿ ಮಾಡುವಂತೆ ವಿಶ್ವನಾಥ್‌ ಅವರೂ ಸರ್ಕಾರದ ಮೇಲೆ ಒತ್ತಡ ಹೇರಲಿ’ ಎಂದು ಕೋರಿದರು.

‘ಇತ್ತೀಚೆಗೆ ಸೊಸೈಟಿಗಳಲ್ಲಿ ಲೆಕ್ಕಪರಿಶೋಧನೆ ಸರಿಯಾಗಿ ನಡೆಯುತ್ತಿಲ್ಲ. ಹೋಟೆಲ್‌ನಲ್ಲಿ ಕುಳಿತು ರಶೀದಿ ಪುಸ್ತಕ ನೋಡಿ ಅದಕ್ಕೆ ತಾಳೆ ಆಗುವಂತೆ ಲೆಕ್ಕ ಪರಿಶೋಧನೆ ನಡೆಸಲಾಗುತ್ತಿದೆ. ಸಣ್ಣ ಸೊಸೈಟಿಗಳಲ್ಲಿಯೇ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಯುತ್ತಿದೆ’ ಎಂದು ನೋವು ತೋಡಿಕೊಂಡರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ‘ಎಲ್ಲೆಡೆ ರಾಜಕಾರಣ ಮಾಡ್ತೀವಿ. ಆದರೆ, ಸಹಕಾರಿ ಕ್ಷೇತ್ರದಲ್ಲಿ ಎಲ್ಲ ಪಕ್ಷದ ಮುಖಂಡರೂ ಗುರುತಿಸಿಕೊಂಡಿದ್ದೇವೆ. ಇಲ್ಲಿ ರಾಜಕಾರಣ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.

‘ಈ ವಿವಿಧೋದ್ದೇಶ ಸಂಘವು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಶಾಸಕ ಆಶಿಸಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಮಾತನಾಡಿ, ‘ಕೊಡಗಿನಲ್ಲಿ ಸಹಕಾರಿ ಕ್ಷೇತ್ರವು ಹೆಮ್ಮರವಾಗಿ ಬೆಳೆದಿದೆ. ಎಲ್ಲ ಪಕ್ಷದ ಮುಖಂಡರೂ ಈ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಕ್ಷೇತ್ರವು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆ.ಎಂ.ಬಿ.ಗಣೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು. ಗಿರೀಶ್ ಗಣಪತಿ, ಬಾಬು ಚಂದ್ರ ಉಳ್ಳಾಗಡ್ಡಿ, ಸವಿತಾ ರೈ, ಅಬ್ದುಲ್‌ ರಹೀಂ, ಮಾಥ್ಯೂ, ಪಿ.ರಾಮಕೃಷ್ಣ, ಅನಿಲ್‌, ಎಚ್.ಎನ್‌.ಜಯಂತಿ, ಕಾವೇರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT