ಕೊಡಗು: ಭೂಕುಸಿತದಿಂದ ರಸ್ತೆಗಿಳಿಯದ ಬಸ್‌ಗಳು, ನಷ್ಟದಲ್ಲಿ ಖಾಸಗಿ ಬಸ್‌ ಮಾಲೀಕರು

7

ಕೊಡಗು: ಭೂಕುಸಿತದಿಂದ ರಸ್ತೆಗಿಳಿಯದ ಬಸ್‌ಗಳು, ನಷ್ಟದಲ್ಲಿ ಖಾಸಗಿ ಬಸ್‌ ಮಾಲೀಕರು

Published:
Updated:
Deccan Herald

ಮಡಿಕೇರಿ: ಖಾಸಗಿ ಬಸ್‌ಗಳೇ ಕೊಡಗಿನ ಜನರ ‘ಜೀವನಾಡಿ’. ಆದರೆ, ಮಹಾಮಳೆ, ಭೂಕುಸಿತದ ಪರಿಣಾಮ ಆ ಬಸ್‌ಗಳ ಮೇಲೂ ಆಗಿದೆ. ಖಾಸಗಿ ಬಸ್‌ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳ ಬದುಕು ಬೀದಿಗೆ ಬಿದ್ದಿದೆ.

ಮನೆ, ಕಾಫಿ ತೋಟಗಳನ್ನು ಕಳೆದುಕೊಂಡವರು ಒಂದೆಡೆ ಯಾದರೆ, ಮಳೆ ಕೆಲವರ ಉದ್ಯೋಗವನ್ನೇ ಕಸಿದುಕೊಂಡಿದೆ.

ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಆಗಿರುವ ಭೂಕುಸಿತ ದಿಂದ ಭಾರಿ ವಾಹನಗಳ ಸಂಚಾರ ಸಾಧ್ಯವಾಗಿಲ್ಲ. ಇದರಿಂದ ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್‌ ಸಂಚಾರವೂ ಸ್ಥಗಿತಗೊಂಡಿದ್ದು, ಬಸ್‌ಗಳು ನಿಂತಲ್ಲಿಯೇ ನಿಂತಿವೆ. ಜಿಲ್ಲೆಯಲ್ಲಿ ಸುಮಾರು 85 ಖಾಸಗಿ ಬಸ್‌ಗಳಿದ್ದು, ಹಲವು ಕಡೆಗೆ ಬಸ್‌ಗಳು ತೆರಳಲು ಸಾಧ್ಯವಾಗಿಲ್ಲ.

ಭೂಕುಸಿತದಿಂದ ಮಡಿಕೇರಿಯಿಂದ ತಾಲತ್ತಮನೆ ಮಾರ್ಗವಾಗಿ ಭಾಗ ಮಂಡಲ, ನಾಪೋಕ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್‌ ಆಗಿ 20 ದಿನ ಕಳೆದಿದೆ. ಖಾಸಗಿ ಬಸ್‌ಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಇನ್ನು ಮೇಕೇರಿ ಮಾರ್ಗವಾಗಿ ಬದಲಿ ಮಾರ್ಗದಲ್ಲಿ ಮಿನಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಖಾಸಗಿ ಬಸ್‌ಗಳಿಗೆ ಸಂಚಾರಕ್ಕೆ ಇನ್ನೂ ಗ್ರೀನ್‌ ಸಿಗ್ನಲ್‌ ಸಿಕ್ಕಿಲ್ಲ. ಹೀಗಾಗಿ, ಮತ್ತಷ್ಟು ದಿನಗಳ ಕಾಲ ಬಸ್‌ ಸೇವೆ ಸಾಧ್ಯವಿಲ್ಲ!

ಬದಲಿ ಮಾರ್ಗ ಸಂಚಾರ ಕಷ್ಟ

ಭೂಕುಸಿತದಿಂದ ಬದಲಿ ಮಾರ್ಗ ಕಲ್ಪಿಸಲಾಗಿದ್ದು ಸಂಚಾರಕ್ಕೆ ಯೋಗ್ಯ ವಾಗಿಲ್ಲ. ಇತ್ತ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆಯಾಗಿದೆ. ಇನ್ನು ಇಂಧನ ಬೆಲೆ ಸಹ ಏರಿಕೆಯಾಗಿದ್ದು ಅದು ಕೂಡ ಬರೆ ಹಾಕಿದೆ ಎನ್ನುತ್ತಾರೆ ಚಾಲಕರು.

ನಗರದ ಹಳೆ ಖಾಸಗಿ ಬಸ್‌ ನಿಲ್ದಾಣ ಈಗಾಗಲೇ ಭೂಕುಸಿತದಿಂದ ಅಪಾಯಕಾರಿ ಸ್ಥಿತಿಗೆ ತಲುಪಿದೆ. ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ನೂತನ ನಿಲ್ದಾಣದ ಬಳಿ ಖಾಸಗಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ಮಾತ್ರ ಅತ್ತ ಬರುತ್ತಿಲ್ಲ. ಹಳೆ ನಿಲ್ದಾಣದ ಬಳಿ ಕೇವಲ 5 ನಿಮಿಷ ಬಸ್ ನಿಲ್ಲಿಸಲು ಬಿಡುತ್ತಿದ್ದಾರೆ. ಪ್ರಚಾರ ಇಲ್ಲದ ಕಾರಣ ಇಲ್ಲಿಗೂ ಪ್ರಯಾಣಿಕರು ಬರುತ್ತಿಲ್ಲ.

ನೂತನ ಬಸ್‌ ನಿಲ್ದಾಣದಲ್ಲಿ ಶೌಚಾ ಲಯಕ್ಕೆ ಬೀಗ ಹಾಕಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯು ಸಮರ್ಪಕವಾಗಿಲ್ಲ ಎಂದು ಪ್ರಯಾಣಿಕರು ದೂರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !