ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ವಸೂಲಿ: ಆರ್‌ಟಿಒ ಅಮಾನತು

ಪೆರಂಬಾಡಿ ಚೆಕ್‌ಪೋಸ್ಟ್‌ನಲ್ಲಿ ನಡೆದಿದ್ದ ಗಲಾಟೆ, ಸಾರಿಗೆ ಆಯುಕ್ತರಿಂದ ಆದೇಶ
Last Updated 9 ಏಪ್ರಿಲ್ 2019, 12:07 IST
ಅಕ್ಷರ ಗಾತ್ರ

ಮಡಿಕೇರಿ: ಚುನಾವಣೆ ನಿಮಿತ್ತ ಕೇರಳಕ್ಕೆ ಹೊಂದಿಕೊಂಡಿರುವ ಪೆರುಂಬಾಡಿಯಲ್ಲಿ ಸ್ಥಾಪಿಸಲಾಗಿದ್ದ ಚೆಕ್‌ಪೋಸ್ಟ್‌ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಮಡಿಕೇರಿ ಆರ್‌ಟಿಒ ಕಚೇರಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಅವರನ್ನು ಅಮಾನತು ಮಾಡಲಾಗಿದೆ.

ಸಾರಿಗೆ ಆಯುಕ್ತ ವಿ.ಪಿ.ಇಕ್ಕೇರಿ ಅವರು ಗಂಗಾಧರ್‌ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಹುಣಸೂರು ಸಾರಿಗೆ ಇಲಾಖೆ ಅಧಿಕಾರಿಯಾಗಿದ್ದು, ಇವರು ಮಡಿಕೇರಿಯಲ್ಲೂ ಪ್ರಭಾರ ಹುದ್ದೆಯ ಮೇಲೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.

‘ಮೇಲ್ನೋಟಕ್ಕೆ ಇವರ ಮೇಲಿರುವ ಆರೋಪಗಳು ಮನವರಿಕೆಯಾಗಿವೆ. ವಿಚಾರಣೆಯನ್ನು ಬಾಕಿಯಿಟ್ಟು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಆದೇಶದಲ್ಲಿ ಇಕ್ಕೇರಿ ಉಲ್ಲೇಖಿಸಿದ್ದಾರೆ.

ಏನೂ ಈ ಗಲಾಟೆ?: ಹಾಕತ್ತೂರು ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ತಿಮ್ಮಯ್ಯ ಅವರನ್ನು ಪೆರಂಬಾಡಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. 28ರಂದು ರಾತ್ರಿ 11ರ ಸುಮಾರಿಗೆ ಗಂಗಾಧರ್ ಅವರು ಚಾಲಕ, ಹೋಂಗಾರ್ಡ್‌ ಹಾಗೂ ಇಬ್ಬರು ಅಪರಿಚಿತ ವ್ಯಕ್ತಿಗಳೊಂದಿಗೆ ಸರ್ಕಾರಿ ವಾಹನದಲ್ಲಿ ಬಂದು, ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನೇ ಕಡೆಗಣಿಸಿ ಅವರೇ ವಾಹನಗಳನ್ನು ತಪಾಸಣೆ ನಡೆಸಿದ್ದರು. ವಾಹನ ತಪಾಸಣೆಯ ನೆಪದಲ್ಲಿ ಪ್ರಯಾಣಿಕರ ಲಗೇಜ್‌ಗಳನ್ನೂ ಪರಿಶೀಲಿಸಿದ್ದರು. ಜನರೊಂದಿಗೆ ಸೌಜನ್ಯವಾಗಿ ವರ್ತಿಸದೇ ಹಣ ವಸೂಲಿ ಮಾಡುವ ಕಾರ್ಯದಲ್ಲಿ ಒಂದು ಗಂಟೆ ತೊಡಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು ತಿಮ್ಮಯ್ಯ ಅವರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿದ್ದರು. ತಿಮ್ಮಯ್ಯ ಅವರು ನನ್ನ ಮೇಲೆ ದೈಹಿಕ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಎಲ್ಲ ಸಂಗತಿಗಳನ್ನು ಸಾರಿಗೆ ಆಯುಕ್ತರು ಪತ್ರದಲ್ಲೂ ಉಲ್ಲೇಖಿಸಿದ್ದಾರೆ.

‘ಸಕ್ಷಮ ಪ್ರಾಧಿಕಾರದ ಗಮನಕ್ಕೆ ಎಲ್ಲ ವಿಚಾರವನ್ನೂ ತರಲಾಗಿತ್ತು. ವಿಚಾರಣೆಯನ್ನು ಬಾಕಿಯಿಟ್ಟು ಅಮಾನತು ಮಾಡಿದ್ದಾರೆ. ಪಿಡಿಒ ಅವರ ವಿಚಾರವನ್ನು ಜಿಲ್ಲಾ ಪಂಚಾಯಿತಿ ಸಿಒಒ ಕೆ.ಲಕ್ಷ್ಮಿಪ್ರಿಯಾ ಅವರ ಗಮನಕ್ಕೆ ತರಲಾಗಿದೆ’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಸಿದ್ಧತೆ ‍ಪೂರ್ಣ: ಲೋಕಸಭಾ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳನ್ನು ಎಂಜಿನಿಯರ್‌ಗಳು ಪರಿಶೀಲನೆ ನಡೆಸಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 543 ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಅನೀಸ್‌ ಕಣ್ಮಣಿ ಮಾಹಿತಿ ನೀಡಿದರು.

‘ಮತಗಟ್ಟೆಗಳಲ್ಲಿ ಕುಡಿಯುವ ನೀರು, ರ‍್ಯಾಂಪ್‌, ಶೌಚಾಲಯ, ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸದಾಗಿ ಸೇರ್ಪಡೆಯಾದ ಹಾಗೂ ತಿದ್ದುಪಡಿ ಮಾಡಲಾದ ಒಟ್ಟು 11,261 ಮತದಾರರಿಗೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯನ್ನು ಬೂತ್‌ಮಟ್ಟದ ಅಧಿಕಾರಿಗಳ ಮೂಲಕ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

543 ಮತಗಟ್ಟೆಗಳಲ್ಲಿ 123 ಮತಗಟ್ಟೆಗಳು ಸೂಕ್ಷ್ಮವಾಗಿದ್ದು, ಸೂಕ್ತ ಬಂದೋಬಸ್ತ್‌ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ವನ್ಯಪ್ರಾಣಿಗಳ ಭಯ: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 53 ಮತಗಟ್ಟೆಗಳನ್ನು ಕಾಡಾನೆ ಸಂಘರ್ಷವಿರುವ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಸುರಕ್ಷಿತವಾಗಿ ಮತಗಟ್ಟೆ ತಲುಪಲು ಮತ್ತು ಮತದಾನ ಪೂರ್ಣಗೊಂಡ ನಂತರ ಸುರಕ್ಷಿತವಾಗಿ ‘ಡಿ’ ಮಸ್ಟರಿಂಗ್‌ ಕೇಂದ್ರಕ್ಕೆಕರೆ ತರಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈ ಉದ್ದೇಶಕ್ಕೆ ಅರಣ್ಯ ಇಲಾಖೆ ಕಚೇರಿಯಲ್ಲಿ 24X7 ಕಂಟ್ರೋಲ್‌ ರೂಂ ತೆರೆಯಲಾಗಿದೆ. ಕಾಡಾನೆ ಪಹರೆ ನಿಯಂತ್ರಣ ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

2,392 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎರಡು ಹಂತದ ತರಬೇತಿಯನ್ನೂ ನೀಡಲಾಗಿದೆ ಎಂದು ವಿವರಿಸಿದರು.

ಬಂದೂಕು ಠೇವಣಿ: ಸಾರ್ವಜನಿಕರು 4,356 ಬಂದೂಕುಗಳನ್ನು ಪೊಲೀಸ್‌ ಠಾಣೆಗಳಲ್ಲಿ ಠೇವಣಿ ಇಟ್ಟಿದ್ದು, ದುಷ್ಕೃತ್ಯ ಎಸಗುವ ಸಾಧ್ಯತೆಯಿರುವ 790 ಮಂದಿಗಳಿಂದ ಬಾಂಡ್‌ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಾರಿಗೆ ವ್ಯವಸ್ಥೆ: 3,090 ಅಂಗವಿಕಲರಿದ್ದು ಅವರಿಗೆ ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 70 ಆಟೊ ಹಾಗೂ 76 ಜೀಪುಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು, ತೆರಿಗೆ ಇಲಾಖೆ ಅಧಿಕಾರಿ ಶ್ರೇಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT