ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು | ವಾಣಿಜ್ಯ ನಗರಿಗಿಲ್ಲ ಬಸ್‌ ನಿಲ್ದಾಣ!

Published 27 ಸೆಪ್ಟೆಂಬರ್ 2023, 5:24 IST
Last Updated 27 ಸೆಪ್ಟೆಂಬರ್ 2023, 5:24 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಮೈಸೂರು, ವಿರಾಜಪೇಟೆ, ತಲಚೇರಿ, ಕಣ್ಣೂರುಗಳಿಗೆ ಸಂಪರ್ಕ ಬೆಸೆಯುವ ಅಂತರರಾಜ್ಯ ಹೆದ್ದಾರಿಯಲ್ಲಿರುವ ಗೋಣಿಕೊಪ್ಪಲು ಪಟ್ಟಣದಲ್ಲಿ ಕನಿಷ್ಠ ಸೌಲಭ್ಯ ಹೊಂದಿದ ಬಸ್ ನಿಲ್ದಾಣ ಇಲ್ಲ.

ಸುಡುವ ಬಿಸಿಲಿನಲ್ಲಿ, ಸುರಿಯುವ ಮಳೆಯಲ್ಲಿಯೇ  ಪ್ರಯಾಣಿಕರು ಬಸ್‌ಗಾಗಿ ಕಾದು ಬಸವಳಿಯುತ್ತಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರ ಇಲ್ಲಿ ₹ 1 ಕೋಟಿ ಮೊತ್ತದ ಬಸ್‌ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿತ್ತು. ಆದರೆ, ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ.

ನಿತ್ಯವೂ ಇಲ್ಲಿನ ಪಟ್ಟಣಕ್ಕೆ ನೂರಾರು ಬಸ್‌ಗಳು ಬಂದು ಹೋಗುತ್ತವೆ. ನೂರಾರು ಪ್ರಯಾಣಿಕರು ಇಳಿಯುತ್ತಾರೆ, ಹತ್ತುತ್ತಾರೆ. ಆದರೆ, ಇವರಿಗೆ ತುರ್ತು ಪ್ರಕೃತಿ ಕರೆ ನೀಗಿಸಿಕೊಳ್ಳಲು ಶೌಚಾಲಯವಿಲ್ಲ. ಮಳೆಯಲ್ಲಿ, ಬಿಸಿಲಲ್ಲಿ ನಿಲ್ಲಲು ತಂಗುದಾಣವಿಲ್ಲ. ಇರುವ ಬಸ್ ನಿಲ್ದಾಣ ಕೂಡ ಬಹಳ ಚಿಕ್ಕದಾಗಿದ್ದು, ಬಸ್‌ಗಳು ಒಂದರ ಹಿಂದೆ ಮತ್ತೊಂದರಂತೆ ನಿಲ್ಲಬೇಕಾದ ಸ್ಥಿತಿ ಇದೆ.

20 ವರ್ಷಗಳಿಂದಲೂ ಬಸ್ ನಿಲ್ದಾಣದ ಸಮಸ್ಯೆ ಇದೆ. ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಪಡೆದು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು.
ಎ.ಎಸ್.ಪೊನ್ನಣ್ಣ, ವಿರಾಜಪೇಟೆ ಕ್ಷೇತ್ರದ ಶಾಸಕ

‘ಇಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಜತೆಗೆ ಖಾಸಗಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಈ ಬಸ್ ನಿಲ್ದಾಣ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಒಳಪಟ್ಟಿದೆ. ಇದರಲ್ಲಿ ಬರುವ ಆದಾಯವನ್ನು ಗ್ರಾಮ ಪಂಚಾಯಿತಿ ಬಳಸಿಕೊಳ್ಳುತ್ತಿದೆ. ಹೀ‌ಗಾಗಿ, ರಸ್ತೆ ಸಾರಿಗೆ ಇಲಾಖೆಯವರು ಅಭಿವೃದ್ಧಿಪಡಿಸಲು ಗಮನ ಹರಿಸಿಲ್ಲ’ ಎನ್ನುತ್ತಾರೆ ಪಟ್ಟಣದ ನಿವಾಸಿ ಮುಕ್ಕಾಟೀರ ಕಾರ್ಯಪ್ಪ.

ಇಲ್ಲಿ ವಿಶಾಲ ಮತ್ತು ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಿಸಬಹುದು. ಆದರೆ, ಅದರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂಬುದು ಪ್ರಯಾಣಿಕರ ದೂರು.

ಹಿಂದೆ ಇದ್ದ ಗ್ರಾಮ ಪಂಚಾಯಿತಿಯ ಬಸ್ ನಿಲ್ದಾಣದ ಕಟ್ಟಡ 20 ವರ್ಷಗಳ ಹಿಂದೆ ಕುಸಿದು ಬಿದ್ದಿತು. ಅಂದಿನಿಂದಲೂ ತಗಡಿನ ಚಾವಣಿ ಹೊಂದಿದ ಕಿರಿದಾದ ತಂಗುದಾಣವಿದೆ. ಆದರೆ, ಇದು ಭಿಕ್ಷುಕರು ಹಾಗೂ ಮದ್ಯವ್ಯಸನಿಗಳ ಆವಾಸಸ್ಥಾನವಾಗಿದ್ದು, ಪ್ರಯಾಣಿಕರು ಕೂರುವುದಕ್ಕೆ ಆಗುತ್ತಿಲ್ಲ.

ಪಟ್ಟಣದಲ್ಲಿ ಹತ್ತಾರು ಶಾಲಾ, ಕಾಲೇಜುಗಳಿವೆ. ಪ್ರತಿದಿನ ಹೊರಗಿನ ಹಳ್ಳಿಯಿಂದ ಸಾವಿರಾರು ವಿದ್ಯಾರ್ಥಿಗಳು, ನೂರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಬಸ್ ಹತ್ತುವವರೆಗೆ ಇವರಿಗೆಲ್ಲ ನಿಲ್ಲುವುದಕ್ಕೆ ಆಸರೆ ಅಂಗಡಿ ಮುಂಗಟ್ಟುಗಳು. ಅಂಗಡಿಗಳಿಗೆ ಗ್ರಾಹಕರು ಹೋಗಲಾರದಂತಹ ಸ್ಥಿತಿಯಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಶಾಲೆ ಕಾಲೇಜಿನಿಂದ ಬಂದ ವಿದ್ಯಾರ್ಥಿಗಳು ನಿಂತಿರುತ್ತಾರೆ. ಮೈಸೂರು, ಬೆಂಗಳೂರು ಕಡೆಗೆ ತೆರಳುವ ಪ್ರಯಾಣಿಕರು ಬಿಸಿಲು ಮಳೆಯಲ್ಲಿ ರಸ್ತೆ ಬದಿಯಲ್ಲೇ ನಿಲ್ಲಬೇಕಾಗಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಡಿಕೇರಿಗೆ ಬಂದಿದ್ದ ಅಂದಿನ ಮುಖ್ಯ‌ಮಂತ್ರಿ ಬಸವರಾಜು ಬೊಮ್ಮಾಯಿ ₹ 1 ಕೋಟಿ ಮೊತ್ತದ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಆದರೆ, ಅನುದಾನ ಮಾತ್ರ ಬಿಡುಗಡೆಯಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎನ್.ಪೃಥ್ಯು ಬೇಸರ ವ್ಯಕ್ತಪಡಿಸುತ್ತಾರೆ.

ಅನುದಾನ ವಾಪಸ್‌!

‘ಹಿಂದೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ₹ 1 ಕೋಟಿ ಮೊತ್ತದ ನೂತನ ಬಸ್ ನಿಲ್ದಾಣದ ನಿರ್ಮಾಣ ಕಾರ್ಯವನ್ನು ನಿರ್ಮಿತಿ ಕೇಂದ್ರದವರಿಗೆ ವಹಿಸಿದ್ದರು. ಸರ್ಕಾರ ಬದಲಾದ ಸಂದರ್ಭದಲ್ಲಿ ಅನುದಾನವನ್ನು ಹಿಂದಕ್ಕೆ ಪಡೆಯಲಾಗಿದೆ. ಇದನ್ನು ಶಾಸಕರಾದ ಎ.ಎಸ್.ಪೊನ್ನಣ್ಣನವರು ಈಚೆಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಗಮನಕ್ಕೆ ತರಲಾಗಿದೆ’ ಎಂದು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಹೇಳುತ್ತಾರೆ.

ಇಂಟ್ರೊ ಜಿಲ್ಲೆಯ ಗಡಿಭಾಗ

ಪೊನ್ನಂಪೇಟೆ ತಾಲ್ಲೂಕಿನಲ್ಲಿ ‘ವಾಣಿಜ್ಯ ನಗರಿ’ ಎಂಬ ಹೆಸರಿನಿಂದ ವೇಗವಾಗಿ ಬೆಳೆಯುತ್ತಿರುವ ಗೋಣಿಕೊಪ್ಪಲು ಸಮಸ್ಯೆಗಳ ಸುಳಿಯಲ್ಲಿ ನಲುಗಿದೆ. ಕೇರಳದಿಂದ ಬರುವವರಿಗೆ ಸಿಗುವ ಮೊದಲ ವಾಣಿಜ್ಯ ನಗರಿಯಾದ ಇಲ್ಲಿ ಮೂಲಸೌಕರ್ಯಗಳ ಕೊರತೆ ಇತರೆಡೆಗಳಿಗಿಂತ ಹೆಚ್ಚಿದೆ. ಈ ಸಮಸ್ಯೆಗಳನ್ನು ಕುರಿತ ಸರಣಿ ಇಂದಿನಿಂದ ಆರಂಭವಾಗಿದೆ.

ಗೋಣಿಕೊಪ್ಪಲು ಬಸ್ ನಿಲ್ದಾಣದ ಸ್ಥಿತಿ.
ಗೋಣಿಕೊಪ್ಪಲು ಬಸ್ ನಿಲ್ದಾಣದ ಸ್ಥಿತಿ.
ಗೋಣಿಕೊಪ್ಪಲು ಬಸ್ ನಿಲ್ದಾಣದ ಸ್ಥಿತಿ.
ಗೋಣಿಕೊಪ್ಪಲು ಬಸ್ ನಿಲ್ದಾಣದ ಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT