ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ | ಒತ್ತುವರಿ: ಸಿ.ಎಂ ಜೊತೆ ಸೇರಿಸಿ ಕ್ರಮ

ಸೋಮವಾರ ಪೇಟೆ: ಸಿ ಮತ್ತು ಡಿ ಭೂಮಿ, ರೈತರ ಚರ್ಚೆಯಲ್ಲಿ ಶಾಸಕ ಮಂತರ್ ಗೌಡ
Published 13 ಆಗಸ್ಟ್ 2024, 4:14 IST
Last Updated 13 ಆಗಸ್ಟ್ 2024, 4:14 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಸಿ ಮತ್ತು ಡಿ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರ ಬದುಕು ಬೀದಿಗೆ ಬೀಳುತ್ತಿದೆ. ಕಂದಾಯ ಇಲಾಖೆಯ ಕೆಲ ಭ್ರಷ್ಟರ ಅಜ್ಞಾನ ಮತ್ತು ರೈತರ ಮೇಲಿನ ದ್ವೇಷದಿಂದ ವ್ಯವಸಾಯ ಭೂಮಿಯನ್ನು ಸಿ ಮತ್ತು ಡಿ ಜಾಗವೆಂದು ಪರಿವರ್ತನೆ ಮಾಡಿದ್ದಾರೆ ಎಂದು ರೈತ ಪ್ರಮುಖರು ದೂರಿದರು.

ಒಕ್ಕಲಿಗರ ಸಮುದಾಯ ಭವನದಲ್ಲಿ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ, ತಾಲ್ಲೂಕಿನ 40 ಗ್ರಾಮಗಳ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಅರಣ್ಯ ಒತ್ತುವರಿ ತೆರವು ಹಾಗೂ ಸಿ ಮತ್ತು ಡಿ ಭೂಮಿ ಕುರಿತ ಚರ್ಚೆಯಲ್ಲಿ ಮೇಲಿನಂತೆ ಅಭಿಪ್ರಾಯಪಟ್ಟರು.

‘ಶಾಂತಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚು ಇಂತಹ ಭೂಮಿಯಿದೆ. ಇದೇ ಮಾದರಿ ಭೂಮಿಯಲ್ಲೇ ಕೃಷಿ ಮಾಡುತ್ತಿದ್ದಾರೆ.  2ರಿಂದ 5 ಎಕರೆ ಆಸ್ತಿಯಿರುವ ನೂರಾರು ಕುಟುಂಬಗಳಿವೆ. ಈ ಭೂಮಿಗೆ ಹಕ್ಕುಪತ್ರಗಳು ಸಿಕ್ಕಿಲ್ಲ. ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಕಳೆದ 20 ವರ್ಷಗಳಿಂದಲೂ ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ’ ಎಂದು ಗ್ರಾಮಸ್ಥರು, ಶಾಸಕರಲ್ಲಿ ಸಮಸ್ಯೆ ಹೇಳಿಕೊಂಡರು.

‘ಜಿಲ್ಲೆಯಲ್ಲಿ ಭೂ ಕಾನೂನುಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ಲ. ಕಂದಾಯ ಇಲಾಖೆಯ ಭ್ರಷ್ಟರಿಂದ ರೈತರ ಆಸ್ತಿ ದುರಸ್ತಿ ಆಗಿಲ್ಲ. ಇದೇ ಕಾರಣದಿಂದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಂಚ ಕೊಟ್ಟವನ ಭೂಮಿ ತಕ್ಷಣ ದುರಸ್ತಿ ಆಗುತ್ತಿದೆ. ಹೊರ ರಾಜ್ಯದ ಬಂಡವಾಳ ಶಾಹಿಗಳು ಕೊಡಗಿನಲ್ಲಿ ಭೂಮಿ ಖರೀದಿಸಿದರೆ, ಕೂಡಲೆ ದುರಸ್ತಿ ಆಗುತ್ತದೆ. ಇದೊಂದು ದಂಧೆಯಾಗಿದೆ’ ಎಂದು ಪ್ರಮುಖ ಎಸ್.ಬಿ.ಭರತ್ ಆರೋಪಿಸಿದರು.

 ‘ಸಾಮಾಜಿಕ ಅರಣ್ಯ ಒತ್ತುವರಿ ತೆರವಿನ ಬಗ್ಗೆ ಕೂತಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ರೈತರಿಗೋಸ್ಕರ ಹೋರಾಟ ಮಾಡಲು ಜಿಲ್ಲೆಯ ಇಬ್ಬರು ಶಾಸಕರು ಸದಾ ಸಿದ್ಧರಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಅರಣ್ಯ ಹಾಗೂ ಕಂದಾಯ ಸಚಿವರನ್ನು ಜಿಲ್ಲೆಗೆ ಬರಮಾಡಿಕೊಂಡು ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕಾಗಿದೆ’ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದರು.

‘ಸುಪ್ರೀಂಕೋರ್ಟ್ ಆದೇಶದಂತೆ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿಯನ್ನು ಮೈಸೂರು ವಿಭಾಗದಲ್ಲಿ ನಿವೃತ್ತ ಕೆ.ಎ.ಎಸ್. ಅಧಿಕಾರಿ ರೇಣುಕಾಂಬ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಅಲ್ಲಿಂದ ಗ್ರಾಮಗಳಿಗೆ ನೋಟಿಸ್ ಜಾರಿಯಾಗುತ್ತಿದೆ. ಒತ್ತುವರಿಗೆ ಸಂಬಂಧಿಸಿದ ಆಸ್ತಿಯ ದಾಖಲೆ ಇದ್ದವರು ಸಮಿತಿಗೆ ಒದಗಿಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೂ ಚರ್ಚಿಸಲಾಗುವುದು. ಡಿಸಿಎಫ್ ಅವರಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ. ಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಸಭೆಯನ್ನು ನಿರ್ಧಾರ ಮಾಡಲಾಗುವುದು’ ಎಂದು ರೈತರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT