ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಕರಿಮೆಣಸು, ಏಲಕ್ಕಿ ವ್ಯವಹಾರ ಆರಂಭ

Last Updated 23 ನವೆಂಬರ್ 2020, 12:00 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಸ್ತುತ ವರ್ಷದಿಂದಲೇ ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮೂಲಕ ಕರಿಮೆಣಸು ಮತ್ತು ಏಲಕ್ಕಿ ವ್ಯವಹಾರ ಆರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಬೆಳೆ ಸಂಗ್ರಹಿಸಿಡುವ ಬೆಳೆಗಾರರಿಗೆ ಅಗತ್ಯವಿದ್ದಲ್ಲಿ ಮುಂಗಡ ಹಣ ನೀಡಿ ಮಾರುಕಟ್ಟೆಯಲ್ಲಿ ಉತ್ತಮ ದರ ಕೊಡಿಸಲು ಪ್ರಯತ್ನ ಮಾಡಲಾಗುವುದು ಎಂದೂ ಹೇಳಿದರು.

ಕರಿಮೆಣಸು ಹಾಗೂ ಏಲಕ್ಕಿ ಸಂಗ್ರಹಿಸುವ ಸಂದರ್ಭ ತೂಕ ಮತ್ತು ದರ ಪಾರದರ್ಶಕವಾಗಿರಲಿದೆ ಎಂದರು.

ಆರ್ಥಿಕವಾಗಿ ಕಷ್ಟದಲ್ಲಿರುವ ರೈತರು ತಮ್ಮ ಫಸಲನ್ನು ಕಡಿಮೆ ದರಕ್ಕೆ ಮಾರಾಟ ಮಾಡುವ ಬದಲು ಸಂಘದ ನೆರವನ್ನು ಪಡೆಯಬಹುದಾಗಿದೆ. ಬೆಳೆ ನೀಡಿದ ದಿನದ ಬೆಲೆಯಾಧರಿಸಿ ಶೇ 40 ರಷ್ಟು ಹಣವನ್ನು ಮುಂಗಡವಾಗಿ ಬೆಳೆಗಾರರಿಗೆ ನೀಡಲು ಚಿಂತನೆ ನಡೆಸಲಾಗಿದ್ದು, ಅಂತಿಮ ನಿರ್ಧಾರವನ್ನು ಮಹಾಸಭೆಯಲ್ಲಿ ಕೈಗೊಳ್ಳಲಾಗುವುದು. ಬೆಳೆಗಾರರು ಸೂಚಿಸುವ ದಿನ ಬೆಳೆಯನ್ನು ಮಾರಾಟ ಮಾಡಿ ಉಳಿದ ಹಣವನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರತಿಯೊಬ್ಬ ಸದಸ್ಯರಿಗೂ ‘ರಿಬೇಟ್ ಪಾಸ್ ಪುಸ್ತಕ’ ನೀಡಿ ಕಚೇರಿಯಲ್ಲಿ ಪ್ರತಿಯೊಂದನ್ನು ಇಟ್ಟುಕೊಂಡು ಹತ್ಯಾರು ವಿಭಾಗ, ಮತ್ತಿತರ ವ್ಯವಹಾರ ಮಾಡಿದ್ದರ ಬಗ್ಗೆ ಕ್ರಮಬದ್ಧವಾಗಿ ದಾಖಲಿಸಲಾಗುವುದು. ಸದಸ್ಯರಾಗಿದ್ದವರ ಪತ್ನಿ ಮತ್ತು ಮಕ್ಕಳಿಗೆ ಸದಸ್ಯತ್ವ ದೊರಕಿಸಿಕೊಡಲು ಸರಳ ಯೋಜನೆಯನ್ನು ಮತ್ತು ಮರಣ ನಿಧಿಯನ್ನು ಇಂದಿನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಪಾಡು ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ಸರ್ವಸಮ್ಮತವಾದ ತೀರ್ಮಾನವನ್ನು ಕೈಗೊಳ್ಳಲಾಗುವುದು. ವಿರಾಜಪೇಟೆ ತಾಲ್ಲೂಕಿನಲ್ಲಿ ಶಾಖೆಯೊಂದನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸೂದನ ಈರಪ್ಪ ತಿಳಿಸಿದರು.

ವೈದ್ಯನಾಥನ್ ವರದಿಯ ಶಿಫಾರಸು ಅನ್ನು ಸರ್ಕಾರ ಅಂಗೀಕರಿಸಿದ ನಂತರ ಬದಲಾದ ನಿಯಮದಡಿ ಸಹಕಾರ ಸಂಘಗಳ ಸಾಕಷ್ಟು ಷೇರುದಾರರು ಸಂಘದ ಆಡಳಿತ ಮಂಡಳಿಯ ಚುನಾವಣೆಗಳಲ್ಲಿ ಮತದಾನ ಪ್ರಕ್ರಿಯೆಗಳಿಂದ ದೂರ ಉಳಿದು ಸಹಕಾರ ಕ್ಷೇತ್ರದಲ್ಲಿ ತಮ್ಮ ಕೊಂಡಿಯನ್ನು ಕಳಚಿ ಕೊಂಡಂತಾಗಿದೆ. ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದಲ್ಲಿ ಸದಸ್ಯರಾಗಿರುವ ಹೆಚ್ಚಿನ ಮಂದಿಗೆ ಏಲಕ್ಕಿ ಬೆಳೆಯೇ ಇಲ್ಲ. ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದವರು ಸದಸ್ಯರಿಂದ ಕಾಫಿಯೇ ಖರೀದಿ ಮಾಡುತ್ತಿಲ್ಲ. ಇಂದು ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದಲ್ಲಿ 2,876 ಷೇರುದಾರ ಸದಸ್ಯರಿದ್ದು, ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾದವರು ಮೂರು ತಾಲ್ಲೂಕಿನಿಂದ ಕೇವಲ 631 ಮಂದಿ ಮಾತ್ರ. ಮುಂದಿನ ಐದು ವರ್ಷಗಳ ಅವಧಿಗೆ ಕನಿಷ್ಠ ಶೇ 75 ಸದಸ್ಯರನ್ನಾದರೂ ಸಕ್ರಿಯರನ್ನಾಗಿಸಿ, ಹಕ್ಕು ಚಲಾಯಿಸಲು ಅರ್ಹತೆ ಒದಗಿಸಿ ಕೊಡಬೇಕೆಂಬ ಅಭಿಲಾಷೆ ಹೊಂದಿರುವುದಾಗಿ ಅವರು ತಿಳಿಸಿದರು.

ಒಂದು ಕಾಲದಲ್ಲಿ ಏಷ್ಯಾ ಖಂಡದಲ್ಲೇ ಅತ್ಯಂತ ಪ್ರತಿಷ್ಠೆಯ ಸಹಕಾರ ಸಂಘವಾಗಿದ್ದ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಒಟ್ಟು ಷೇರುದಾರ ಸದಸ್ಯರ ಸಂಖ್ಯೆ 10 ಸಾವಿರ. ಕಳೆದ ವರ್ಷ ಆಡಳಿತ ಮಂಡಳಿಗೆ ಚುನಾವಣೆ ನಡೆದಾಗ ಮತದಾನಕ್ಕೆ ಅರ್ಹರಾದವರು ಕೇವಲ ಅಂದಾಜು 500 ಮಂದಿ ಮಾತ್ರ. ಈ ಬೆಳವಣಿಗೆಯಿಂದ ಸಹಕಾರ ಕ್ಷೇತ್ರಗಳು ಹೆಸರಿಗೆ ಮಾತ್ರ ಉಳಿದು ‘ಸಹಕಾರ’ ಎಂಬ ಪದವೇ ಅಳಿದು ಹೋಗಬಹುದು ಎಂದು ಸೂದನ ಈರಪ್ಪ ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಬಿ.ಸಿ.ಚೆನ್ನಪ್ಪ ಮದೆನಾಡು, ಅಜ್ಜಿನಂಡ ಎಂ.ಗೋಪಾಲಕೃಷ್ಣ, ಕುಂಬಗೌಡನ ಡಿ. ವಿನೋದ್ ಕುಮಾರ್ ಮಕ್ಕಂದೂರು ಹಾಗೂ ಪೆರಿಯನ ಕೆ.ಉದಯ ಕುಮಾರ್ ಚೆಟ್ಟಳ್ಳಿ ಉಪಸ್ಥಿತಿರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT