ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ನೆಚ್ಚಿನ ‘ರ್‍ಯಾಂಬೊ’ ಇನ್ನಿಲ್ಲ

400ಕ್ಕೂ ಹೆಚ್ಚು ಸ್ಫೋಟಕ ತಪಾಸಣೆ ಕಾರ್ಯದಲ್ಲಿ ತೊಡಗಿದ್ದ ಹೆಮ್ಮೆಯ ಶ್ವಾನ
Last Updated 8 ಅಕ್ಟೋಬರ್ 2020, 11:40 IST
ಅಕ್ಷರ ಗಾತ್ರ

ಮಡಿಕೇರಿ: ಅಲ್ಲಿ ನೆರೆದಿದ್ದ ಪೊಲೀಸರ ಕಣ್ಣಾಲಿಗಳು ತೇವಗೊಂಡಿದ್ದವು. ಅದನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಸುಕುಮಾರ್, ಜಿತೇಂದ್ರ ರೈ ಅವರಿಗೆ ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆ ಏನೂ ಮಾತನಾಡಲು ಸಾಧ್ಯವಾಗಲಿಲ್ಲ.

ಗುರುವಾರ ಬೆಳಿಗ್ಗೆ ಮಡಿಕೇರಿಯ ಸಶಸ್ತ್ರದಳದ ಆವರಣದಲ್ಲಿ ಈ ದೃಶ್ಯವು ಕಂಡುಬಂತು. ಜಿಲ್ಲಾ ಶ್ವಾನದಳದಲ್ಲಿ ಕಳೆದ 6 ವರ್ಷಗಳಿಂದ ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ‘ರ್‍ಯಾಂಬೊ’ ಹೆಸರಿನ ಶ್ವಾನವು ಅನಾರೋಗ್ಯದಿಂದ ಮೃತಪಟ್ಟಿದ್ದು ಎಲ್ಲರಲ್ಲೂ ದುಃಖ ತರಿಸಿತು.

ಸಶಸ್ತ್ರದಳದ ಆವರಣದಲ್ಲಿ ಶ್ವಾನದ ಪಾರ್ಥಿವ ಶರೀರಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರೂ ಅಂತಿಮ ನಮನ ಸಲ್ಲಿಸಿದರು. ಸಿಬ್ಬಂದಿಗಳೂ ಕಂಬನಿ ಮಿಡಿದರು. ಬಳಿಕ ಅಂತಿಮ ಸಂಸ್ಕಾರ ನಡೆಸಲಾಯಿತು.

ಏನಾಗಿತ್ತು ರ್‍ಯಾಂಬೊಗೆ?:

ಎರಡು ದಿನಗಳ ಹಿಂದೆ ಮಡಿಕೇರಿಯಿಂದ ರ್‍ಯಾಂಬೊ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ಗೆ ಕರ್ತವ್ಯಕ್ಕೆ ತೆರಳಿದ್ದ. ಮಡಿಕೇರಿಯ ತಣ್ಣನೆಯ ವಾತಾವರಣದಲ್ಲಿದ್ದ ಶ್ವಾನವು, ಅಲ್ಲಿನ ಬಿಸಿಲ ಬೇಗೆಗೆ ಸುಸ್ತಾಗಿತ್ತು. ಬುಧವಾರ ಸಂಜೆಯ ವೇಳೆಗೆ ಜ್ವರ ಹೆಚ್ಚಾಗಿತ್ತು. ರ‍್ಯಾಂಬೊಗೆ ವೈದ್ಯರು ನಡುರಾತ್ರಿಯವರೆಗೂ ಚಿಕಿತ್ಸೆ ನೀಡಿದರೂ ಅದು ಫಲಿಸಲಿಲ್ಲ. ಜ್ವರದೊಂದಿಗೆ ಹೖದಯಾಘಾತಕ್ಕೆ ಒಳಗಾಗಿ ಅಲ್ಲಿಯೇ ಪ್ರಾಣಬಿಟ್ಟ. ಕೊನೆಗೆ ಅಲ್ಲಿಂದ ‘ರ್‍ಯಾಂಬೊ’ ದೇಹವನ್ನು ಮಡಿಕೇರಿಗೆ ತರಲಾಗಿತ್ತು.

2013 ಅ.15ರಂದು ಜನಿಸಿದ್ದ ‘ರ್‍ಯಾಂಬೊ’ ಬೆಂಗಳೂರಿನ ಆಡುಗೋಡಿಯ ಪೊಲೀಸ್ ಶ್ವಾನ ತರಬೇತಿ ಶಿಬಿರದಲ್ಲಿ 9 ತಿಂಗಳು ತರಬೇತಿ ಪಡೆದುಕೊಂಡು, ಮಡಿಕೇರಿಗೆ ಬಂದು ಅಪರಾಧ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ಚುರುಕಿನ, ಸಾಹಸಕ್ಕೆ ಈ ‘ರ್‍ಯಾಂಬೊ’ ಹೆಸರಾಗಿತ್ತು ಎಂದು ಸಿಬ್ಬಂದಿ ನೆನಪಿಸುತ್ತಾರೆ.

ಹಾರಂಗಿ ಜಲಾಶಯ, ರಾಜಾಸೀಟ್, ನ್ಯಾಯಾಲಯ ಆವರಣ... ಹೀಗೆ ನಾನಾ ಕಡೆ ಕೆಲಸ ನಿರ್ವಹಿಸಿದ್ದ. ಬೆಂಗಳೂರಿನ ನಡೆದಿದ್ದ ಅಂತರರಾಷ್ಟ್ರೀಯ ವಿಮಾನ ಪ್ರದರ್ಶನ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ರಾಜ್ಯದಲ್ಲಿ ಈ ಹಿಂದೆ ಪಾಲ್ಗೊಂಡಿದ್ದ ಚುನಾವಣಾ ರ್‍ಯಾಲಿಗಳ ತಪಾಸಣೆಯಲ್ಲಿ ರ್‍ಯಾಂಬೊನದ್ದು ಮುಂಚೂಣಿ ಪಾತ್ರ. ಹಲವು ಕಡೆ ರ್‍ಯಾಂಬೊ ಕಾರ್ಯಾಚರಣೆಗೆ ಪ್ರಶಂಸನಾ ಪತ್ರಗಳೂ ಲಭಿಸಿವೆ.

ಈ ಶ್ವಾನವು ಕಳೆದ 6 ವರ್ಷಗಳಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಲ್ಲಿ ನಡೆದ ವಿವಿಧ ಬಂದೋಬಸ್ತ್ ಕರ್ತವ್ಯದ ವೇಳೆ 400ಕ್ಕೂ ಹೆಚ್ಚು ಸ್ಫೋಟಕ ತಪಾಸಣೆ ಕಾರ್ಯ ಯಶಸ್ವಿಯಾಗಿ ನಿರ್ವಹಿಸಿದೆ.

ತನ್ನ ಸ್ನೇಹಿತರಾದ ಶೌರ್ಯ, ಲಿಯೊ ಹಾಗೂ ಪೃಥ್ವಿಯನ್ನು ಬಿಟ್ಟು ರ್‍ಯಾಂಬೊ ಬಾರದ ಲೋಕಕ್ಕೆ ತೆರಳಿದ್ದಾನೆ ಎಂದು ಸುಕುಮಾರ್ ಕಣ್ಣೀರು ಸುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT