ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲೂ ಖಾಸಗಿ ವೈದ್ಯರ ಮುಷ್ಕರ

ಸರ್ಕಾರಿ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರ ನಿಯೋಜನೆ, ರೋಗಿಗಳಿಗೆ ಚಿಕಿತ್ಸೆ
Last Updated 28 ಜುಲೈ 2018, 13:37 IST
ಅಕ್ಷರ ಗಾತ್ರ

ಮಡಿಕೇರಿ: ರಾಷ್ಟ್ರವ್ಯಾಪಿ ಖಾಸಗಿ ವೈದ್ಯರ ಮುಷ್ಕರಕ್ಕೆ ಕೊಡಗು ಜಿಲ್ಲೆಯ ವೈದ್ಯರು ಬೆಂಬಲ ನೀಡಿದ್ದು, ನಗರದ ಖಾಸಗಿ ಹೊರರೋಗಿಗಳ ವಿಭಾಗದ (ಒಪಿಡಿ) ಸೇವೆ ಸ್ಥಗಿತಗೊಳಿಸಿ ಶುಕ್ರವಾರ ಮುಷ್ಕರ ನಡೆಸಿದರು.

ರಾಷ್ಟ್ರೀಯ ವೈದ್ಯಕೀಯ ಕಾಯ್ದೆಯ ತಿದ್ದುಪಡಿ ವಿರೋಧಿಸಿ ಐಎಂಎ ಖಾಸಗಿ ವೈದ್ಯರ ಮುಷ್ಕರಕ್ಕೆ ಕರೆ ನೀಡಿತ್ತು. ಇದಕ್ಕೆ ಬೆಂಬಲ ವ್ಯಕ್ತಪಡಿಸಿ, ಜಿಲ್ಲೆಯ ಖಾಸಗಿ ವೈದ್ಯರು ಒಪಿಡಿ ಸೇವೆ ಸ್ಥಗಿತಗೊಳಿಸಿದ್ದರಿಂದ ರೋಗಿಗಳಿಗೆ ಅಗತ್ಯ ಸೇವೆ ಲಭ್ಯವಾಗಲಿಲ್ಲ.

ಮಡಿಕೇರಿ ನಗರದಲ್ಲಿರುವ 4 ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತಗೊಂಡಿತ್ತು. 15ಕ್ಕೂ ಅಧಿಕ ಕ್ಲಿನಿಕ್‌ಗಳು ಬಂದ್ ಆಗಿದ್ದವು. ಆಸ್ಪತ್ರೆ ಎದುರು ತುರ್ತು ಸೇವೆ ಎಂದು ಫಲಕ ಹಾಕಿ ವೈದ್ಯರು ಮುಷ್ಕರದಲ್ಲಿ ನಿರತರಾಗಿದ್ದರು.

ಕಾಯ್ದೆಯ ತಿದ್ದುಪಡಿ ವಿರೋಧಿಸಿ, ವೈದ್ಯರು ಸೇವೆಯಿಂದ ದೂರ ಉಳಿದ ಪರಿಣಾಮ ಖಾಸಗಿ ಆಸ್ಪತ್ರೆಗಳಿಗೆ ಆಗಮಿಸಿದ್ದ ರೋಗಿಗಳಿಗೆ ತುಸು ತೊಂದರೆ ಉಂಟಾಯಿತು.

ಆರೋಗ್ಯ ಸೇವೆ ವ್ಯತ್ಯಯ: ಅಶ್ವಿನಿ ಆಸ್ಪತ್ರೆ, ರಾಜರಾಜೇಶ್ವರಿ ಆಸ್ಪತ್ರೆ, ವೈವಸ್ ಹಾಗೂ ಇನ್ನಿತರ ಖಾಸಗಿ ಕ್ಲಿನಿಕ್‌ನತ್ತ ಬೆಳಿಗ್ಗೆ ತೆರಳಿದ್ದ ರೋಗಿಗಳು, ವೈದ್ಯರಿಲ್ಲದೇ ಕಾದು ಕಾದು ನಗರದ ಜಿಲ್ಲಾ ಆಸ್ಪತ್ರೆ ಕಡೆ ಮುಖ ಮಾಡಿದರು.

‘ರಾಷ್ಟ್ರೀಯ ವೈದ್ಯಕೀಯ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ಕೇಂದ್ರದ ನಿರ್ಧಾರವನ್ನು ಖಂಡಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ. ಮುಷ್ಕರಕ್ಕೆ ಒಪಿಡಿ ಸೇವೆ ಸ್ಥಗಿತಗೊಳಿಸಿ ಜಿಲ್ಲೆಯ ಖಾಸಗಿ ವೈದ್ಯರು ಬೆಂಬಲ ಸೂಚಿಸಿದ್ದು, ತುರ್ತು ಚಿಕಿತ್ಸೆ ಸೇವೆ ಎಂದಿನಂತೆ ಮುಂದುವರಿಯಲಿದೆ. ಅಲ್ಲದೆ ಒಳರೋಗಿಗಳಿಗೆ ಎಂದಿನಂತೆ ಸೇವೆ ಮುಂದುವರಿಸಿದ್ದೇವೆ’ ಎಂದು ಭಾರತೀಯ ವೈದ್ಯಕೀಯ ಸಂಘದ ಕೊಡಗು ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ತಿಳಿಸಿದರು.

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ವೈದ್ಯರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ಅವಲಂಬಿಸಿದ್ದ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡಿದರು. ಆಸ್ಪತ್ರೆಗೆ ಆಗಮಿಸಿದ್ದ ಹೊರರೋಗಿಗಳನ್ನು ಸೇವೆ ಇಲ್ಲ ಎಂದು ಹೇಳಿ ಸಿಬ್ಬಂದಿ ಕಳುಹಿಸುತ್ತಿದ್ದರು.

ರೋಗಿಗಳ ಸಂಖ್ಯೆ ಹೆಚ್ಚಳ: ಖಾಸಗಿ ವೈದ್ಯರ ಮುಷ್ಕರರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆಂದು ಬಂದ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದ್ದರಿಂದ ಯಾವುದೇ ತೊಂದರೆ ಆಗಿಲ್ಲ. ಬಂದ ಎಲ್ಲ ರೋಗಿಗಳಿಗೂ ಚಿಕಿತ್ಸೆ ನೀಡಲಾಯಿತು. ಶನಿವಾರ ಯಾವುದೇ ತೊಂದರೆ ಉಂಟಾಗಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT