ಗುರುವಾರ , ಮಾರ್ಚ್ 4, 2021
29 °C
ಜಿಲ್ಲಾಮಟ್ಟದ ಸಮನ್ವಯ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆ

ಸಾಲಮನ್ನಾಕ್ಕೆ ಪ್ರಸ್ತಾವ ಸಲ್ಲಿಸಿ: ಪ್ರತಾಪ್‌ಸಿಂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಡಿಕೇರಿ: ‘ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಒಳಗಾದ ಜನರ ಸಹಕಾರ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಸಾಲವನ್ನು ಮನ್ನಾ ಮಾಡುವಂತಾಗಲು ಸರ್ಕಾರಕ್ಕೆ ಕೂಡಲೇ ಪ್ರಸ್ತಾವ ಸಲ್ಲಿಸಿ’ ಎಂದು ಸಂಸದ ಪ್ರತಾಪ್ ಸಿಂಹ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೀವ್ರ ಹಾನಿಯಾಗಿದೆ. ಜತೆಗೆ ಇತರ ಪ್ರದೇಶಗಳಲ್ಲಿಯೂ ಬೆಳೆ ಹಾನಿಯಾಗಿದ್ದು, ಮೂರು ತಿಂಗಳವರೆಗೆ ಬೆಳೆ, ಅಲ್ಪಾವಧಿ ಅಥವಾ ಮಧ್ಯಮಾವಧಿ ಸಾಲವನ್ನು ವಸೂಲಿ ಮಾಡಬಾರದು’ ಎಂದು ಸೂಚಿಸಿದರು.

ಬ್ಯಾಂಕುಗಳು ತಮ್ಮ ಸಿಎಸ್‍ಆರ್ ನಿಧಿಯಿಂದ ಪ್ರಕೃತಿ ವಿಕೋಪಕ್ಕೆ ಆರ್ಥಿಕ ಸಹಾಯ ಮಾಡಬೇಕು ಎಂದು ಪ್ರತಾಪ್‌ ಸಿಂಹ ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಕನಿಷ್ಠ ಒಂದು ಸಾವಿರ ಮನೆಗಳು ನಾಶವಾಗಿದ್ದು, ಈ ಕುಟುಂಬಗಳ ಪುನರ್ವಸತಿಗೆ ಅಗತ್ಯ ಸಹಾಯವನ್ನು ಮಾಡಲು ಅನೇಕ ಸಂಘ ಸಂಸ್ಥೆಗಳು ಮುಂದೆ ಬಂದಿವೆ. ಇವರಿಗೆ ಸರ್ಕಾರವು ಜಾಗವನ್ನು ಗುರುತು ಮಾಡಿಕೊಟ್ಟರೆ ಮನೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಆಸ್ತಿ ಪಾಸ್ತಿ ನಷ್ಟಕ್ಕೆ ರಾಜ್ಯದ ಎಲ್ಲಾ ಶಾಸಕರ ನಿಧಿಯಿಂದ ₹ 25 ಲಕ್ಷ ನೀಡಲು ಮನವಿ ಮಾಡಲಾಗಿದೆ, ಅದರಂತೆ ಅಂದಾಜು ₹ 57 ಕೋಟಿ ಶಾಸಕರ ನಿಧಿಯಿಂದ ದೊರೆಯಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅಂದಾಜು ₹ 1,400 ಕೋಟಿ ರೈತರ ಸಾಲ ಇದ್ದು, ಸರ್ಕಾರಕ್ಕೆ ಜಿಲ್ಲೆಯ ಸಂಪೂರ್ಣ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ತಾತ್ಕಾಲಿಕ ಶೆಡ್ ನಿರ್ಮಾಣದ ಬದಲು ಸಂತ್ರಸ್ತರಾಗಿರುವ ಕುಟುಂಬಗಳಿಗೆ ಪ್ರತೀ ತಿಂಗಳು ಜಿಲ್ಲಾಡಳಿತದಿಂದ ₹ 10 ಸಾವಿರ ಕುಟುಂಬ ನಿರ್ವಹಣೆಗೆ ನೀಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮನೆ ಕಳೆದುಕೊಂಡ ನಿರಾಶ್ರಿತರಿಗೆ ಆರ್ಯವೈಶ್ಯ ಸಂಘವು ಮನೆ ನಿರ್ಮಾಣ ಮಾಡಿಕೊಡಲು ₹ 2 ಕೋಟಿ ನೆರವು ನೀಡಲು ಮುಂದೆ ಬಂದಿದ್ದು, ಇಂಥವರಿಗೆ ಸರ್ಕಾರವು ಸೂಕ್ತ ಜಾಗ ಒದಗಿಸಿಕೊಟ್ಟರೆ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ ಎಂದು ಅಪ್ಪಚ್ಚು ರಂಜನ್ ತಿಳಿಸಿದರು.

ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ. ನಾಣಯ್ಯ, ಲೀಡ್ ಬ್ಯಾಂಕ್ ವಿಭಾಗೀಯ ಮುಖ್ಯ ಪ್ರಬಂಧಕ ಎಸ್.ಎಲ್. ಗಣಪತಿ, ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕರಾದ ಗುಪ್ತಾಜಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು