ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸಲು ಆಗ್ರಹ

ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ನೌಕರರ ಸಂಘದ ವತಿಯಿಂದ ಪ್ರತಿಭಟನೆ
Last Updated 25 ಜೂನ್ 2018, 14:00 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯ ವಿದ್ಯಾರ್ಥಿ ನಿಲಯಗಳ ’ಡಿ’ ವರ್ಗದ ಹೊರಗುತ್ತಿಗೆ ನೌಕರರ ಮೂಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಹ ಕಾರ್ಯದರ್ಶಿ ಹನುಮೇಗೌಡ ಮಾತನಾಡಿ, ‘ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಏಕರೂಪದ ಸೇವಾ ನಿಯಮಾವಳಿ ಹಾಗೂ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳು ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುತ್ತಿರುವ ವಸತಿ ಶಾಲಾ ಕಾಲೇಜುಗಳಲ್ಲಿ ಕಳೆದ 10, 15 ವರ್ಷಗಳಿಂದ ‘ಡಿ ‘ಗ್ರೂಪ್ ನೌಕರರಾಗಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಆದರೆ, ಇದುವರೆಗೂ ನೌಕರರಿಗೆ ಸೇವ ಭದ್ರತೆ ಒದಗಿಸಿಲ್ಲ. ಜತೆಗೆ ಕಡಿಮೆ ವೇತನದಲ್ಲಿಯೇ ಜೀವನ ಸಾಗಿಸಬೇಕಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಈಗಾಗಲೇ 10ನೇ ತರಗತಿ ಪಾಸಾದ ಅಭ್ಯರ್ಥಿಗಳನ್ನು ನೇಮಿಸಲು ಮುಂದಾಗಿದೆ. ಇದರಿಂದ, ಈ ಹಿಂದೆ ವಿದ್ಯಾಭ್ಯಾಸ ಇಲ್ಲದೆ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ’ ಎಂದು ಹನುಮೇಗೌಡ ಹೇಳಿದರು.

ಸರ್ಕಾರದ ಕ್ರಮವನ್ನು ವಿರೋಧಿಸಿ ಅನೇಕ ಸಲ ಸತ್ಯಾಗ್ರಹ ನಡೆಸಲಾಗಿದೆ. ಈ ಸಂದರ್ಭ ಇಲಾಖೆಗಳ ಹಿರಿಯ ಅಧಿಕಾರಿಗಳು ಇಲಾಖೆ ಹಂತದಲ್ಲಿ ಚರ್ಚೆ ನಡೆಸಿ ಸೇವೆಯನ್ನು ಕಾಯಂ ಮಾಡುವ ಭರವಸೆಗಳನ್ನು ನೀಡಿದರು. ಆದರೆ, ಇದೀಗ ಹೊಸದಾಗಿ ನೇಮಕಾತಿಯಲ್ಲಿ ಆಯ್ಕೆಯಾದವರಿಗೆ ನೇಮಕಾತಿ ಆದೇಶ ನೀಡಲು ಮುಂದಾಗಿದ್ದಾರೆ. ಇದರಿಂದ ಹೊರಗುತ್ತಿಗೆ ನೌಕರರಿಗೆ ತೀವ್ರ ಆಘಾತ ಉಂಟಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆ ನೇತೃತ್ವವನ್ನು ಸಂಘದ ಪದಾಧಿಕಾರಿಗಳಾದ ಎಚ್.ಎಸ್.ಯೋಗೇಶ್, ಕುಮಾರ್, ಲತಾ, ಜ್ಯೋತಿ, ಕುಸುಮ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT